ಕರ್ನಾಟಕ

ರಾಜ್ಯದಲ್ಲಿ ಶೀಘ್ರವೇ ಅಣ್ಣ ಕ್ಯಾಂಟೀನ್ ಆರಂಭ, ಬಿಪಿಎಲ್ ಕುಟುಂಬಗಳಿಗೆ ಗ್ಯಾಸ್ ಭಾಗ್ಯ

Pinterest LinkedIn Tumblr

lgpಬೆಂಗಳೂರು, ಮಾ.14- ಈಗಾಗಲೇ ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ ಸೇರಿದಂತೆ ವಿವಿಧ ಭಾಗ್ಯಗಳನ್ನು ಕರುಣಿಸಿರುವ ರಾಜ್ಯ ಸರ್ಕಾರ ಇದೀಗ ಗ್ಯಾಸ್ ಭಾಗ್ಯ ಎಂಬ ವಿನೂತನ ಯೋಜನೆಯನ್ನು ಜಾರಿ ಮಾಡಲು ಮುಂದಾಗಿದೆ. ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ರಿಯಾಯ್ತಿ ದರದಲ್ಲಿ ಅಡುಗೆ ಅನಿಲ (ಸಿಲಿಂಡರ್ ಗ್ಯಾಸ್) ಒದಗಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ. ಇದೇ 18ರಂದು ಮುಖ್ಯಮಂತ್ರಿ ಸಿದ್ದರಾಮಯ್ಯಅವರು, ದಾಖಲೆಯ 11 ನೇ ಬಜೆಟ್ ಮಂಡಿಸಲಿದ್ದಾರೆ. ತಮ್ಮ ಆಯವ್ಯಯದಲ್ಲಿ ಗ್ಯಾಸ್ ಭಾಗ್ಯ ಯೋಜನೆಯನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆಂದು ಉನ್ನತ ಮೂಲಗಳು ಖಚಿತಪಡಿಸಿವೆ.

ಏನಿದು ಯೋಜನೆ..?

ಅಂದಹಾಗೆ ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವಾಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾರಂಭದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಬಡವರಿಗೆ 1ರೂ. ದರದಲ್ಲಿ 1ಕೆಜಿ ಅಕ್ಕಿ ವಿತರಣೆ ಮಾಡುವ ಅನ್ನಭಾಗ್ಯ ಯೋಜನೆ ಪ್ರಕಟಿಸಿದರು. ಈ ಯೋಜನೆ ಯಶಸ್ವಿಯಾಗುತ್ತಿದ್ದಂತೆ ಕಡು ಬಡವರಿಗೆ ಇನ್ನೂ ಹೆಚ್ಚಿನ ಅನುಕೂಲವಾಗಲೆಂದು ಉಚಿತವಾಗಿ ಪ್ರತಿ ಕುಟುಂಬಕ್ಕೆ 5ಕೆಜಿ ಅಕ್ಕಿಯನ್ನು ವಿತರಣೆ ಮಾಡಲು ಸರ್ಕಾರ ತೀರ್ಮಾನಿಸಿತ್ತು. ಇದೀಗ ಇದೇ ಮಾದರಿಯಲ್ಲಿ ಬಿಪಿಎಲ್ ಕುಟುಂಬಗಳಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮೂಲಕ ರಿಯಾಯ್ತಿ ದರದಲ್ಲಿ ಗ್ಯಾಸ್ ಭಾಗ್ಯ ವಿತರಣೆಯಾಗಲಿದೆ.

ಆಹಾರ ಮತ್ತು ಪಡಿತರ ವಿತರಕರು ಇದನ್ನು ನಿರ್ವಹಣೆ ಮಾಡಲಿದ್ದು, ವಾರ್ಷಿಕವಾಗಿ ಇದು 4 ಸಾವಿರಕ್ಕೂ ಅಧಿಕ ಕೋಟಿ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಲಿದೆ. ರಾಜ್ಯದಲ್ಲಿ ಸುಮಾರು ಒಂದು ಕೋಟಿಗೂ ಹೆಚ್ಚು ಕುಟುಂಬಗಳು ಬಿಪಿಎಲ್ ವ್ಯಾಪ್ತಿಗೆ ಒಳಪಡುತ್ತವೆ. ಈ ಎಲ್ಲ ಕುಟುಂಬಗಳಿಗೆ ರಿಯಾಯ್ತಿ ದರದಲ್ಲಿ ಗ್ಯಾಸ್ ನೀಡುವುದು ಸರ್ಕಾರದ ಉದ್ದೇಶ.

ಕೇಂದ್ರವೂ ಸಹಭಾಗಿತ್ವ:

ಅಂದಹಾಗೆ ರಾಜ್ಯ ಸರ್ಕಾರದ ಗ್ಯಾಸ್ ಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರವೂ ಕೈ ಜೋಡಿಸಲಿದೆ. ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೈಟ್ಲಿ ಅವರು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ಘೋಷಣೆ ಮಾಡಿದ್ದರು. ಈ ಯೋಜನೆ ಪ್ರಕಾರ, ಬಿಪಿಎಲ್ ಕುಟುಂಬಗಳಿಗೆ ಗ್ಯಾಸ್, ಪಡಿತರ ಆಹಾರ ಧಾನ್ಯಗಳು ಸೇರಿದಂತೆ ರಿಯಾಯ್ತಿ ದರದಲ್ಲಿ ಫಲಾನುಭವಿಗಳಿಗೆ ನೀಡಲು ರಾಜ್ಯ ಸರ್ಕಾರ ಮುಂದೆ ಬಂದರೆ ಅದಕ್ಕೆ ಕೇಂದ್ರವೂ ಸಹ ಕೈ ಜೋಡಿಸುವುದಾಗಿ ಹೇಳಿತ್ತು.

ಇದರಂತೆ ರಾಜ್ಯ ಸರ್ಕಾರಕ್ಕೆ ಗ್ಯಾಸ್ ಭಾಗ್ಯ ಯೋಜನೆಗೆ ಒಟ್ಟು ಎಂಟು ಸಾವಿರ ಕೋಟಿ ತಗುಲಲಿದೆ. ಇದರಲ್ಲಿ ಕೇಂದ್ರ 4 ಸಾವಿರ ಕೋಟಿ ಹಾಗೂ ರಾಜ್ಯ ಸರ್ಕಾರ 4 ಸಾವಿರ ಕೋಟಿ ಹಣ ಹೂಡಲಿದೆ. ರಾಜ್ಯದಲ್ಲಿ 89.3ರಷ್ಟು ಜನರು ಈಗಲೂ ಆಹಾರ ಧಾನ್ಯಗಳನ್ನು ಬೇಯಿಸಲು, ಕಟ್ಟಿಗೆ, ಉರುವಲು, ಸೌದೆ, ಸೀಮೆಎಣ್ಣೆ ಬಳಕೆ ಮಾಡುತ್ತಾರೆ. ಶೇ.10ರಷ್ಟು ಜನ ಮಾತ್ರ ಗ್ಯಾಸ್ ಸಿಲಿಂಡರ್ ಬಳಸುತ್ತಿದ್ದಾರೆ. ರಾಜ್ಯವನ್ನು ಸೀಮೆಎಣ್ಣೆ ಮುಕ್ತ ಮಾಡುವ ಗುರಿಯೊಂದಿಗೆ ಬಡವರು ಕೂಡ ಗ್ಯಾಸ್ ಸಿಲಿಂಡರ್ ಬಳಸಬೇಕೆಂಬ ಸದುದ್ದೇಶದಿಂದಲೇ ಈ ಯೋಜನೆ ಪ್ರಾರಂಭವಾಗಲಿದೆ.

ಅಣ್ಣಾ ಕ್ಯಾಂಟಿನ್:

ಇದರ ಜತೆಗೆ ರಾಜ್ಯ ಸರ್ಕಾರ ಈ ಹಿಂದೆ ಘೋಷಣೆ ಮಾಡಿದಂತೆ ತಮಿಳುನಾಡು ಮಾದರಿಯಲ್ಲಿ ಅಣ್ಣಾ ಕ್ಯಾಂಟಿನ್ ಸಹ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಜಯಲಲಿತಾ ಹೇಗೆ ಕ್ಯಾಂಟಿನ್‌ಗಳನ್ನು ಆರಂಭಿಸಿ ಜನಪ್ರಿಯರಾದರೋ ಅದೇರೀತಿ ಸಿದ್ದರಾಮಯ್ಯ ಕೂಡ ಅಣ್ಣಾ ಕ್ಯಾಂಟಿನ್ ಆರಂಭಿಸುತ್ತಿದ್ದಾರೆ. ಒಂದು ರೂ. ದರದಲ್ಲಿ ಇಡ್ಲಿ ಹಾಗೂ 5ರೂ. ದರದಲ್ಲಿ ಅನ್ನ-ಸಾಂಬಾರ್ ಸಿಗಲಿದೆ. ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಮುಂದಿನ ತಿಂಗಳಿಂದ ಕಾರ್ಯಾರಂಭ ಮಾಡಲಿದೆ. ಪ್ರಾರಂಭಿಕ ಹಂತದಲ್ಲಿ ಬಸ್ ನಿಲ್ದಾಣ, ಸರ್ಕಾರಿ ಕಚೇರಿಗಳಲ್ಲಿ ಅಣ್ಣಾ ಕ್ಯಾಂಟಿನ್‌ಗಳು ಪ್ರಾರಂಭವಾದರೆ ನಂತರ ಇತರ ಕಡೆಯೂ ತೆರೆಯುವ ಉದ್ದೇಶ ಸರ್ಕಾರದ್ದಾಗಿದೆ.

Write A Comment