ಕರ್ನಾಟಕ

ನಂಜನಗೂಡು ತಾಲ್ಲೂಕಿನ ಯಡಿಯಾಲ ಗ್ರಾಮಕ್ಕೆ ಲಗ್ಗೆಯಿಟ್ಟ ಚಿರತೆ : ಗ್ರಾಮಸ್ಥರಲ್ಲಿ ಆತಂಕ

Pinterest LinkedIn Tumblr

chirateಮೈಸೂರು, ಮಾ.7-ಗ್ರಾಮಕ್ಕೆ ಚಿರತೆಯೊಂದು ನುಗ್ಗಿ ಕರುವನ್ನು ಬಲಿ ಪಡೆದಿರುವ ಹಿನ್ನೆಲೆಯಲ್ಲಿ ನಂಜನಗೂಡು ತಾಲ್ಲೂಕಿನ ಯಡಿಯಾಲ ಗ್ರಾಮದಲ್ಲಿ   ಭಯ, ಆತಂಕದ ವಾತಾವರಣ ನಿರ್ಮಾಣವಾಗಿದೆ.

ಇಂದು ಮುಂಜಾನೆ ಗ್ರಾಮಕ್ಕೆ ನುಗ್ಗಿದ ಚಿರತೆ ಕೆಂಪರಾಮೇಗೌಡ ಎಂಬುವರಿಗೆ ಸೇರಿದ ಕರುವೊಂದನ್ನು ಹೊತ್ತೊಯ್ದಿದೆ. ಇದನ್ನು ಕಂಡ ಮೂವರು ಕರು ರಕ್ಷಿಸಲು ಮುಂದಾದಾಗ ಅವರ ಮೇಲೂ ದಾಳಿಗೆ ಯತ್ನಿಸಿ ಚಿರತೆ ಪರಾರಿಯಾಗಿದೆ. ಚಿರತೆ ದಾಳಿಗೆ ಯತ್ನಿಸಿದರೂ ಅದೃಷ್ಟವಶಾತ್ ಮೂವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಚಿರತೆ ಬಾಯಿಗೆ ಸಿಕ್ಕ ಕರು ಸಾವನ್ನಪ್ಪಿದೆ. ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇಲ್ಲಿನ ನಿವಾಸಿಗಳು ತಮ್ಮ ಜಮೀನುಗಳಿಗೆ ಹೋಗಲು ಹೆದರುವಂತಾಗಿದೆ. ಎರಡು ದಿನಗಳ ಹಿಂದೆ ಸಾಕು ನಾಯಿಗಳೆರಡನ್ನು ಚಿರತೆ ಹೊತ್ತೊಯ್ದಿದ್ದು, ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಚಿರತೆ ಸೆರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ನುಗು ಅರಣ್ಯ ಪ್ರದೇಶದಿಂದ ಚಿರತೆ ಗ್ರಾಮಕ್ಕೆ ಲಗ್ಗೆಯಿಡುತ್ತಿದ್ದು, ಬೋನು ಇಟ್ಟು ಅದನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಚಿರತೆ ಸೆರೆಗೆ ಕ್ರಮ ವಹಿಸದಿದ್ದರೆ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ.

Write A Comment