ಕರ್ನಾಟಕ

ಚಾನೆಲ್‌ಗ‌ಳು ಜಡ್ಜ್ ಗಳ ರೀತಿ ತೀರ್ಪು ಕೊಡ್ತಿವೆ: ಸಿಎಂ ಸಿದ್ದು

Pinterest LinkedIn Tumblr

6BNP21ಬೆಂಗಳೂರು: ಸಮಾಜಮುಖೀಯಾಗಿ ಕೆಲಸ ಮಾಡಬೇಕಿರುವ ಪತ್ರಕರ್ತರು ಎಲ್ಲವನ್ನೂ ತಾವೇ ನಿಭಾಯಿಸಿದರೆ ಸಮಾಜಕ್ಕೆ ಒಳ್ಳೆಯದಾಗುವುದಕ್ಕಿಂತ ಅಪಾಯವಾಗುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.

ಭಾನುವಾರ ನಗರದ ಬೆಂಗಳೂರು ಪ್ರಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಬೆಂಗಳೂರು ಟಿವಿ ಜರ್ನಲಿಸ್ಟ್ಸ್ಅಸೋಸಿಯೇಷನ್‌ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕೋದ್ಯಮ ಹಲವು ಜವಾಬ್ದಾರಿಗಳನ್ನು ಹೊಂದಿದ್ದು, ಹೊಸ ಆಯಾಮ ಸೃಷ್ಟಿಸುವಂತಿರಬೇಕು. ಆದರೆ, ಇತ್ತೀಚೆಗೆ ಕೆಲವು ಚಾನೆಲ್‌ಗ‌ಳು ವಕೀಲರಂತೆ ವಾದ-ಪ್ರತಿವಾದ ಹಾಗೂ ನ್ಯಾಯಾಧೀಶರಂತೆ ತೀರ್ಪು ನೀಡುವ ಕೆಲಸ ಮಾಡುತ್ತಿವೆ. ಪತ್ರಕರ್ತರೇ ಎಲ್ಲವನ್ನೂ ನಿರ್ಣಯ ಮಾಡುತ್ತಾರೆ.

ಆಯಾ ವೃತ್ತಿಗಳಲ್ಲಿರುವವರು ಅವರವರ ಕಾರ್ಯವನ್ನು ನಿರ್ವಹಿಸಬೇಕು. ಎಲ್ಲವನ್ನೂ ಪತ್ರಕರ್ತರೇ ನಿಭಾಯಿಸಿದರೆ ಸಮಾಜಕ್ಕೆ ಒಳೆಯದಾಗುವುದಕ್ಕಿಂತ ಅಪಾಯವಾಗುವುದು ಹೆಚ್ಚು ಎಂದು ಹೇಳಿದರು.

ಮಾಧ್ಯಮದವರು ಸಮಾಜಮುಖೀಯಾಗಿ ಸಮಾಜದ ಪರಿವರ್ತನೆಗಾಗಿ ವಸ್ತುನಿಷ್ಠ ವರದಿಯೊಂದಿಗೆ ಕೆಲಸ ನಿರ್ವಹಿಸಬೇಕು. ಇದರಲ್ಲಿ ಉತ್ಪ್ರೇಕ್ಷೆ ಇರಬಾರದು. ಸಮಾಜಮುಖೀಯಾಗಿ ಸಮಾಜದ ಒಳಿತನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿದರೆ ಸಾಕಷ್ಟು ಬದಲಾವಣೆ ತರಲು ಸಾಧ್ಯವಿದೆ. ದೇವರನ್ನು ಜನರು ಮತ್ತು ಆತ್ಮಸಾಕ್ಷಿಯಲ್ಲಿ ಕಾಣುತ್ತೇನೆ. ನಮ್ಮ ಆತ್ಮಸಾಕ್ಷಿಗನುಗುಣವಾಗಿ ನಮ್ಮ ವೃತ್ತಿಯಲ್ಲಿ ಕೆಲಸ ನಿರ್ವಹಿಸಿದರೆ ಸಮಾಜಕ್ಕೆ ಬೇಕಾದಷ್ಟು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಸಾರ್ವಜನಿಕರ ಬದುಕಿನಲ್ಲಿ ಕೆಲಸ ಮಾಡುವವರು ಜನಸೇವೆಗೆ ಬಂದವರು. ಪತ್ರಿಕೋದ್ಯಮವು ಸಹ ಒಂದು ಜನಸೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಬೇಕು. ಆದರೆ, ಆ ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾಜದ ಒಳಿತಿಗೆ ಸೀಮಿತವಾಗಿರಬೇಕು. ಸಮಾಜದಲ್ಲಿ ಉನ್ನತ ಮೌಲ್ಯಗಳನ್ನು ಸ್ಥಾಪನೆ ಮಾಡಲು ಸಹಕಾರಿಯಾದರೆ ಮಾಧ್ಯಮದಿಂದ ಹೆಚ್ಚು ಅನುಕೂಲಗಳಾಗುತ್ತವೆ ಎಂದರು.

ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಕ್ಷೇತ್ರಕ್ಕೆ ಇರುವಂತೆ ಪತ್ರಿಕೋದ್ಯಮಕ್ಕೂ ಜವಾಬ್ದಾರಿ ಇದೆ. ವಿಶ್ರಾಂತಿ ರಹಿತರಾಗಿ ಒತ್ತಡದ ನಡುವೆ ಕೆಲಸ ಮಾಡುವ ಪತ್ರಕರ್ತರು ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು. ಆದರೆ ವೈಯಕ್ತಿಕ ತೇಜೋವಧೆಗೆ ಆದ್ಯತೆ ಕೊಡಬಾರದು. ಜನರ ಕಷ್ಟ-ನಷ್ಟಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಬೇಕು. ಬಿಳಿ ಬಟ್ಟೆ ಮೇಲೆ ಇರುವ ಕಪ್ಪು ಕಲೆಯನ್ನು ಹುಡುಕುವುದನ್ನು ಬಿಟ್ಟು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಪತ್ರಕರ್ತರ ರಕ್ಷಣೆಗೆ ಸೂಕ್ತ ಕಾನೂನು ತರಲು ಕೇಂದ್ರ ಸರ್ಕಾರ ಬದ್ಧವಿದೆ. ಕಾನೂನಿನಲ್ಲಿ ಯಾವ ಅಂಶಗಳಿರಬೇಕು ಎಂಬುದರ ಬಗ್ಗೆ ಪತ್ರಕರ್ತರ ಸಂಘಟನೆಗಳು ತೀರ್ಮಾನಿಸಿ ಮಾಹಿತಿ ನೀಡಬೇಕು. ಪತ್ರಕರ್ತರು ನೀಡುವ ಅಂಶಗಳನ್ನು ಕಾನೂನಿನಲ್ಲಿ ಸೇರಿಸಲಾಗುವುದು ಎಂದ ಅವರು, ಮುಂದಿನ ದಿನಗಳಲ್ಲಿ ಸಮಾಜಮುಖೀಯಾದಂತಹ ಕೆಲಸ ಮಾಡಲು ಟಿವಿ ಜರ್ನಲಿಸ್ಟ್ಸ್ ಅಸೋಸಿಯೇಷನ್‌ ಸಹಕಾರಿಯಾಗಬೇಕು. ಮಾಧ್ಯಮದವರಿಗೆ ಯಾವ ಸಮಯದಲ್ಲಿ ಯಾವ ವಿಚಾರಗಳು ಬರುತ್ತವೆಂದು ಮೊದಲೇ ತಿಳಿಯದಿರುವುದಿಲ್ಲ. ಹೀಗಾಗಿ ಎಲ್ಲದಕ್ಕೂ ಮೊದಲೇ ಸಜ್ಜಾಗಿರಬೇಕಾಗುತ್ತದೆ ಎಂದು ನುಡಿದರು.

ಇದೇ ವೇಳೆ ಇಂಡಿಯಾ ಟುಡೆ ಗ್ರೂಪ್‌ನ ಸಲಹಾ ಸಂಪಾದಕ ರಾಜ್‌ದೀಪ್‌ ಸರ್‌ದೇಸಾಯಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ, ವಾರ್ತಾ ಸಚಿವ ಆರ್‌.ರೋಷನ್‌ಬೇಗ್‌, ಟಿವಿ ಜರ್ನಲಿಸ್ಟ್ಸ್ ಅಸೋಸಿಯೇಷನ್‌ ಅಧ್ಯಕ್ಷ ಬಿ.ಎಸ್‌.ಸತ್ಯನಾರಾಯಣ, ಉಪಾಧ್ಯಕ್ಷ ಹಮೀದ್‌ಪಾಳ್ಯ ಇತರರು ಉಪಸ್ಥಿತರಿದ್ದರು.
-ಉದಯವಾಣಿ

Write A Comment