ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ದುಬಾರಿ ವಾಚ್ ಪ್ರಕರಣ ಸದ್ಯಕ್ಕೆ ಪರಿಸಮಾಪ್ತಿಗೊಂಡಿದ್ದು, ಸುಮಾರು ಒಂದೂವರೆ ತಿಂಗಳ ವಿವಾದಕ್ಕೆ ಸದನದಲ್ಲೇ ತೆರೆ ಬಿದ್ದಂತಾಗಿದೆ.
ಈ ವಾಚ್ ಅನಿವಾಸಿ ಭಾರತೀಯ ಸ್ನೇಹಿತ ಉಡುಗೊರೆ ನೀಡಿದ್ದು, ವಿಪಕ್ಷಗಳು ರಾಜಕೀಯ ಲಾಭಕ್ಕಾಗಿ ತೇಜೋವಧೆ ಮಾಡಿದವು ಎಂದು ಮುಖ್ಯಮಂತ್ರಿ ಆರೋಪಿಸಿದರೆ, ನಾವು ನಿಮ್ಮ ತೇಜೋವಧೆ ಮಾಡ ಲಿಲ್ಲ, ಗೊಂದಲದ ಹೇಳಿಕೆ ನೀಡಿ ನಿಮಗೆ ನೀವೇ ತೇಜೋವಧೆ ಮಾಡಿ ಕೊಂಡಿರಿ ಎಂದು ವಿಪಕ್ಷ ನಾಯಕರು ವಾದಿಸಿ ಪ್ರಕರಣಕ್ಕೆ ತೆರೆ ಬಿದ್ದಿದೆ.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲಿ ದುಬಾರಿ ವಾಚ್ ಬಗ್ಗೆ ಪ್ರಸ್ತಾವವಾಗಿ ಆರೋಪ- ಪ್ರತ್ಯಾರೋಪ, ಉದ್ವೇಗ, ಭಾವನಾತ್ಮಕ ಮಾತುಗಳಿಗೆ ಸದನ ಸಾಕ್ಷಿಯಾಯಿತಾದರೂ ವಿಪಕ್ಷಗಳು “ವಾಚ್ ಅಸ್ತ್ರ’ವನ್ನು ಪ್ರಬಲವಾಗಿ ಬಳಸಲು ಹೋಗಲಿಲ್ಲ.
ವಾಚ್ ಪ್ರಕರಣ ಪ್ರಸ್ತಾವಿಸಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ನಾನು ಈ ಪ್ರಕರಣ ಇಲ್ಲಿಗೆ ಮುಗಿ ಸುತ್ತೇನೆ. ತಾರ್ಕಿಕ ಅಂತ್ಯಕ್ಕೆ ಕೊಂಡೊ ಯ್ಯುವುದರಿಂದ ಏನೂ ಆಗದು. ನ್ಯಾಯ ವ್ಯವಸ್ಥೆ ಬಗ್ಗೆ ನ್ಯಾಯಾಲಯ, ನ್ಯಾಯಾಧೀಶರ ಹೇಳಿಕೆ ಗಳಿಂದ ಭ್ರಮನಿರಸನಗೊಂಡಿದ್ದೇನೆ. ಭ್ರಷ್ಟಾಚಾರ- ಹಗರಣಗಳ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ. ನನ್ನನ್ನು ಹಿಟ್ ಆ್ಯಂಡ್ ರನ್ ಎಂದರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿ ಸುಮ್ಮನಾದರು.
ನಾನೆಂದೂ ಆತ್ಮಸಾಕ್ಷಿ ವಿರುದ್ಧ ಕೆಲಸ ಮಾಡಿಲ್ಲ.ಮೂವತ್ತೈದು ವರ್ಷಗಳ ರಾಜಕೀಯದಲ್ಲಿ ನಾನು ಜನರ ಬಗ್ಗೆ ಗೌರವ ಇಟ್ಟುಕೊಂಡು ಕೆಲಸ ಮಾಡಿದವನು. ಜನತೆಯೇ ನನಗೆ ದೇವರು. ಮೂವತ್ತು ವರ್ಷದ ಹಿಂದೆಯೇ ಮಂತ್ರಿ ಯಾಗಿದ್ದೆ, ರಾಜ್ಯದ ಜನರ ಆಶೀರ್ವಾದದಿಂದ 10 ಬಾರಿ ಬಜೆಟ್ ಮಂಡಿಸಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಎಂದೂ ಕಪ್ಪು ಚುಕ್ಕೆ ಬೀಳುವಂತಹ ಕೆಲಸ ಮಾಡಿಲ್ಲ, ಮುಂದೆ ಮಾಡುವುದೂ ಇಲ್ಲ ಎಂದು ಭಾವುಕರಾಗಿ ಹೇಳಿದರು.
ಬಿಜೆಪಿ ಹಾಗೂ ಜೆಡಿಎಸ್‌ನವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದೇ ಬಿಡ್ತೇವೆ ಎಂಬ ಕನಸು ಮತ್ತು ಭ್ರಮೆಯಲ್ಲಿ ಇದ್ದಾರೆ. ಇರಲಿ, ನನ್ನದೇನೂ ಅಭ್ಯಂತರವಿಲ್ಲ. ಅಧಿಕಾರ ಶಾಶ್ವತವಲ್ಲ ಎಂದರು.
ತೇಜೋವಧೆ ಮಾಡಿಲ್ಲ- ಕುಮಾರಸ್ವಾಮಿ
ಇದಕ್ಕೂ ಮುನ್ನ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಹುಣಸೂರಿನ ಸಮಾರಂಭ ವೊಂದರಲ್ಲಿ ಸಮಾಜವಾದಿ ಎಂದು ಹೇಳಿಕೊಳ್ಳುವ ಮುಖ್ಯ ಮಂತ್ರಿಯವರು ದುಬಾರಿ ವಾಚ್, ಕನ್ನಡಕ ಹಾಕುವುದು ಎಷ್ಟು ಸರಿ ಅಂತಷ್ಟೇ ಪ್ರಶ್ನಿಸಿದ್ದೆ. ಆದರೆ, ಸುತ್ತೂರು ಕಾರ್ಯಕ್ರಮದಲ್ಲಿ 5 ಲಕ್ಷಕ್ಕೆ ವಾಚ್ ತಗೊಳ್ಳಿ, 50 ಸಾವಿರಕ್ಕೆ ಕನ್ನಡಕ ತಗೊಳ್ಳಿ ಎಂದು ಮುಖ್ಯಮಂತ್ರಿಯವರು ವಿಷಯ ಮುಂದುವರಿಸಿದರು. ಮಾಧ್ಯಮಗಳು ವಿಷಯವನ್ನು ಜೀವಂತವಾಗಿಟ್ಟುಕೊಂಡವು.
ಜೆಡಿಎಸ್ ಪಕ್ಷದಲ್ಲೇ ವಾಚ್ ವಿಚಾರ ಪ್ರಸ್ತಾವಿಸುವುದು ಬೇಡ, ಹಿಂದೆ ಬಿಜೆಪಿ ಸರಕಾರದಲ್ಲಿ ಹಗರಣದ ಬಗ್ಗೆ ಮಾತನಾಡಿ ಒಂದು ಸಮುದಾಯದ ಮತ ಕಳೆದುಕೊಂಡು ಅನುಭವಿಸಿದ್ದೇವೆ, ಇದೀಗ ಮತ್ತೂಂದು ಸಮುದಾಯದ ಮತ ಕಳೆದುಕೊಳ್ಳಬೇಕು, ಆಗ ಕಾಂಗ್ರೆಸ್‌ಗೆ ಲಾಭವಾಯ್ತು, ಇದೀಗ ಬಿಜೆಪಿಗೆ ಲಾಭವಾಗುತ್ತೆ ಎಂದು ಶಾಸಕರು ಹೇಳಿದ್ದರು. ಅದು ನಮ್ಮ ಹಣೆಬರಹ. ಹೀಗಾಗಿ, ನಾನು ವಾಚ್ ವಿಷಯ ಮುಂದಿಟ್ಟು ತಾರ್ಕಿಕ ಅಂತ್ಯ ಮುಟ್ಟಿಸಿ ಏನೂ ಲಾಭ ಮಾಡಿಕೊಳ್ಳಬೇಕಾದ್ದಿಲ್ಲ. ಅಂದು ಮುಖ್ಯಮಂತ್ರಿಯವರು ಪ್ರತಿಕ್ರಿಯಿಸದೆ ಸುಮ್ಮನಿದ್ದರೂ ಸಾಕಿತ್ತು ಎಂದು ಹೇಳಿದರು. ಮುಖ್ಯಮಂತ್ರಿಯವರು ಸರ್ಕಾರದ ವಶಕ್ಕೆ ನೀಡಿರುವ ದುಬಾರಿ ವಾಚನ್ನು ಸಚಿವ ಸಂಪುಟ ಸಭಾಂಗಣದಲ್ಲಿ ಇಡುವುದು ಸೂಕ್ತವಲ್ಲ. ಆ ವಾಚ್ ಬಗ್ಗೆ ಸಾಕಷ್ಟು ಶಂಕೆ ಇರುವ ಕಾರಣ ವಾಚ್ ಅಲ್ಲಿಟ್ಟರೆ ಸಂಪುಟ ಸಭಾಂಗಣದ ಪಾವಿತ್ರ್ಯತೆಗೆ ಧಕ್ಕೆ ಬರಬಹುದು ಎಂದೂ ಕುಮಾರಸ್ವಾಮಿ ಹೇಳಿದರು.
ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ದುಬಾರಿ ವಾಚ್ ಹೇಳಿಕೆ ಬಗ್ಗೆ ನೀವೇ ಗೊಂದಲದ ಹೇಳಿಕೆ ನೀಡಿದಿರಿ. ಆದರೆ, ಈಗಲೂ ರಸೀದಿ, ಪ್ರಮಾಣ ಪತ್ರ ಕೊಡದೆ ಇರುವುದರಿಂದ ಅನುಮಾನ ಇದೆ, ಪೂರ್ತಿ ಪರಿಹಾರ ಆಗಿಲ್ಲ ಎಂದು ತಿಳಿಸಿದರು.
-ಉದಯವಾಣಿ