ಕರ್ನಾಟಕ

ಸರ್ಕಾರಕ್ಕೆ ಒಪ್ಪಿಸಿದ ತಕ್ಷಣ ಪ್ರಕರಣ ಮುಗಿದಿಲ್ಲ: ಶೆಟ್ಟರ್‌

Pinterest LinkedIn Tumblr

25-1440494156-30-jagadishshಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದುಬಾರಿ ವಾಚನ್ನು ಸರ್ಕಾರಕ್ಕೆ ಒಪ್ಪಿಸಿದ ತಕ್ಷಣ ಪ್ರಕರಣ ಮುಗಿದಿಲ್ಲ. ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ತಿಳಿಸಿದ್ದಾರೆ.

ಬುಧವಾರ ಸಂಜೆ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ವಿಚಾರದಲ್ಲಿ ಹೋರಾಟದ ಮುಂದಿನ ರೂಪರೇಷೆ ಕುರಿತು ಚರ್ಚಿಸಲು ಗುರುವಾರ ಬೆಳಗ್ಗೆ ಶಾಸಕರ ಸಭೆ ಆಯೋಜಿಸಲಾಗಿದೆ. ಸದನಲ್ಲಿ ಹೋರಾಟ ಮುಂದುವರಿಸಬೇಕೇ? ಬೇಡವೇ ಎಂಬ ಬಗ್ಗೆಯೂ ಅಲ್ಲೇ ತೀರ್ಮಾನಿಸಲಾಗುವುದು ಎಂದು ಹೇಳಿದರು.

ವಾಚ್‌ ಪ್ರಕರಣದಲ್ಲಿ ಸ್ಪೀಕರ್‌ ಅವರನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಸದನದಲ್ಲಿ ಸ್ಪೀಕರ್‌ ಮೂಲಕ ಹಸ್ತಾಂತರಿಸುವ ಅಗತ್ಯವೇ ಇರಲಿಲ್ಲ. ಮುಖ್ಯ ಕಾರ್ಯದರ್ಶಿಯವರಿಗೆ ಕೊಟ್ಟಿದ್ದರೆ ಸಾಕಿತ್ತು. ಆದರೂ ವಾಚ್‌ ಹಸ್ತಾಂತರದ ಹೈಡ್ರಾಮಾ ನಡೆಸಲಾಯಿತು.

ಭಾವನಾತ್ಮಕವಾಗಿ ಮಾತನಾಡಿ ಸಾರ್ವಜನಿಕವಾಗಿ ಬೇರೆಯೇ ಭಾವನೆ ಮೂಡಿಸುವ ಯತ್ನ ನಡೆಯಿತು ಎಂದು ದೂರಿದರು.

ವಾಚ್‌ನ ಯೂನಿಕ್‌ ಸಂಖ್ಯೆ ಏನು? ಅದರ ಮೂಲ ವಾರಸುದಾರರು ಯಾರು? ಎಲ್ಲಿಂದ ಖರೀದಿಸಿದರು? ಎಂಬುದರ ಬಗ್ಗೆ ಕೇಂದ್ರ ಸರ್ಕಾರದ ಸಂಸ್ಥೆಯಿಂದ ತನಿಖೆಯಾಗಲೇಬೇಕು. ಇದು ವಿದೇಶಿ ವಸ್ತು ಆದ್ದರಿಂದ ಕೇಂದ್ರ ಸಂಸ್ಥೆಯಿಂದ ತನಿಖೆ ನಡೆದರೆ ಸೂಕ್ತ. ಅಲ್ಲಿವರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿ ಇರಬಾರದು ಎಂದು ಒತ್ತಾಯಿಸಿದ ಅವರು, ಪ್ರಕರಣದಲ್ಲಿ ಮುಖ್ಯಮಂತ್ರಿಯವರ ತಪ್ಪು ಇಲ್ಲ ಎಂದಾದರೆ ಚರ್ಚೆಗೆ ಯಾಕೆ ಅವಕಾಶ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು.

ದಿನಪೂರ್ತಿ ವಾಚ್‌ ವಿಚಾರ ಚರ್ಚೆಗೆ ನಾವು ಒತ್ತಾಯಿಸಿಲ್ಲ. ಎರಡು ಮೂರು ಗಂಟೆ ಕೊಟ್ಟಿದ್ದರೂ ಸಾಕಿತ್ತು. ಆದರೂ ಮುಖ್ಯಮಂತ್ರಿ ಹಾಗೂ ಸರ್ಕಾರ ಒಪ್ಪಲಿಲ್ಲ. ಇದರ ಹಿಂದೆ ಏನನ್ನೋ ಮುಚ್ಚಿಡುವ ಉದ್ದೇಶ ಇರಬಹುದು ಎಂಬ ಶಂಕೆಯಿದೆ ಎಂದು ಹೇಳಿದರು.

ವಾಚ್‌ ಕದ್ದ ಮಾಲು ಎಂಬ ಮಾತುಗಳು ಕೇಳಿಬರುತ್ತಿವೆ. ಇಂತಹ ಸಂದರ್ಭದಲ್ಲಿ ಅದನ್ನು ಸಂಪುಟ ಸಭಾಂಗಣದಲ್ಲಿ ಇಡಬಹುದೇ? ಒಂದೊಮ್ಮೆ ಕದ್ದ ವಾಚ್‌ ಎಂದಾದರೆ ಸದನದ ಮೂಲಕ ಸ್ವೀಕರಿಸಿರುವುದರಿಂದ ವಿಧಾನಸಭೆ ಪಾವಿತ್ರ್ಯಕ್ಕೆ ಧಕ್ಕೆ ಬರುವುದಿಲ್ಲವೇ? ಈ ಎಲ್ಲ ವಿಚಾರಗಳ ಬಗ್ಗೆಯೂ ಸ್ಪೀಕರ್‌ ಅವಕಾಶ ಕೊಟ್ಟರೆ ಮಾತನಾಡುತ್ತೇವೆ ಎಂದು ಶೆಟ್ಟರ್‌ ತಿಳಿಸಿದರು.

ವಾಚ್‌ ಎಲ್ಲಿಂದ ಬಂತು ಎಂಬುದು ನನಗೆ ಸಂಬಂಧಿಸಿದ್ದಲ್ಲ ಎಂಬ ಸ್ಪೀಕರ್‌ ಪ್ರತಿಕ್ರಿಯೆ ಕುರಿತು ಕೇಳಿದಾಗ, ಹಾಗೆ ಹೇಳಿಬಿಟ್ಟರೆ ಹೇಗೆ? ಯಾರೋ ಎಲ್ಲಿಂದಲೋ ಏನನ್ನೋ ತಂದು ಕೊಟ್ಟು ಕ್ಯಾಬಿನೆಟ್‌ ಸಭಾಂಗಣದಲ್ಲಿ ಇಡಿ ಎಂದರೆ ಪೂರ್ವಾಪರ ತಿಳಿಯದೆ ಇಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
-ಉದಯವಾಣಿ

Write A Comment