ಕರ್ನಾಟಕ

ತಪ್ಪಿಲ್ಲದಿದ್ದರೆ ಚರ್ಚೆಗೆ ಹಿಂದೇಟು ಏಕೆ……ನಿಲ್ಲದ ಧರಣಿ

Pinterest LinkedIn Tumblr

BJPಬೆಂಗಳೂರು, ಮಾ. ೨- ಮುಖ್ಯಮಂತ್ರಿ ಸಿದ್ದರಾಮಯ್ಯನವರ ದುಬಾರಿ ವಾಚ್ ಪ್ರಕರಣದ ಚರ್ಚೆಗೆ ಬಿಜೆಪಿ ಬಿಗಿ ಪಟ್ಟು ಹಿಡಿದು ಸದನದ ಎರಡನೇ ದಿನವಾದ ಇಂದೂ ಸಹ ಧರಣಿ ನಡೆಸಿ ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸಿ ಧರಣಿ ಮುಂದುವರೆಸಿದ್ದರಿಂದ ಸದನವನ್ನು ಇಂದು ಮಧ್ಯಾಹ್ನಕ್ಕೆ ಮುಂದೂಡಲಾಯಿತು.
ಸದನವನ್ನು ಮುಂದೂಡುವ ಮುನ್ನ ಪ್ರಶ್ನೋತ್ತರ, ಕಾಗದಗಳ ಮಂಡನೆ ಹಾಗೂ ವಿಧೇಯಕಗಳ ಅಂಗೀಕಾರ ಕಲಾಪವನ್ನು ಗದ್ದಲ, ಧರಣಿಯ ನಡುವೆಯೇ ನಡೆಸಲಾಯಿತು.
ಸಭಾಧ್ಯಕ್ಷರ ಕೊಠಡಿಯಲ್ಲಿ ನಡೆದ ಸಂಧಾನ ವಿಫಲವಾಗಿ ಇಂದು ಸದನ ಎರಡನೇ ಬಾರಿಗೆ ಸಮಾವೇಶಗೊಂಡಾಗ ಬಿಜೆಪಿ ಸದಸ್ಯರು ಧರಣಿ ಮುಂದುವರೆಸಿ ವಾಚ್ ಪ್ರಕರಣದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು. ಈ ಸರ್ಕಾರಕ್ಕೆ ಹೆದರಿಕೆ ಏಕೆ. ಕಾನೂನು ಬದ್ಧವಾಗಿದ್ದರೆ ಚರ್ಚೆ ಮಾಡಲು ಹಿಂದೇಟು ಹಾಕುತ್ತಿರುವುದು ಏಕೆಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಪ್ರಶ್ನಿಸಿ, ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿದರು.
ಈ ಬಗ್ಗೆ ರಾಜ್ಯಪಾಲರ ಭಾಷಣದ ಮೇಲೆ ಪ್ರಸ್ತಾಪಿಸಿ ಅವಕಾಶ ನೀಡುತ್ತೇನೆ ಎಂದು ಸಭಾಧ್ಯಕ್ಷರು ಹೇಳಿದರು. ಅದಕ್ಕೆ ಒಪ್ಪದ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಈ ಬಗ್ಗೆಯೇ ಪ್ರತ್ಯೇಕ ಚರ್ಚೆ ನಡೆಸಬೇಕು. ಸರ್ಕಾರ ಈ ವಿಚಾರವನ್ನು ಪ್ರತಿಷ್ಠೆ ಮಾಡಿಕೊಳ್ಳುವುದು ಬೇಡ ಎಂದರು.
ಬಿಜೆಪಿ ಸದಸ್ಯರು ಧರಣಿ ಹಿಂತೆಗೆದುಕೊಳ್ಳಲು ಒಪ್ಪದೆ ಧರಣಿ ಮುಂದುವರೆಸಿದ್ದರಿಂದ ಸಭಾಧ್ಯಕ್ಷರು ಧರಣಿಯ ನಡುವೆಯೇ ಪ್ರಶ್ನೋತ್ತರ ಕಲಾಪವನ್ನು ಔಪಚಾರಿಕವಾಗಿ ಪೂರ್ಣಗೊಳಿಸಿ ಕಾಗದ ಪತ್ರಗಳ ಮಂಡನೆಯ ಕಲಾಪವನ್ನು ಪೂರೈಸಿದರು.
ಈ ಹಂತದಲ್ಲಿ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸದನ ಸುವ್ಯವಸ್ಥೆಯಲ್ಲಿ ಇಲ್ಲ. ಕಲಾಪ ನಡೆಸುವುದು ಸರಿಯಲ್ಲ ಎಂದರೂ ಸಭಾಧ್ಯಕ್ಷರು ಮಾತ್ರ ಅದಕ್ಕೆ ಗಮನ ಕೊಡಲಿಲ್ಲ. ಬಿಜೆಪಿ ಸದಸ್ಯರು ವಾಚ್ ವಾಚ್ ಎಲ್ಲಿಂದ ಬಂತು ವಾಚ್, ಚರ್ಚೆಗೆ ಅವಕಾಶ ನೀಡಿ, ಹೇಡಿ ಸರ್ಕಾರಕ್ಕೆ ಧಿಕ್ಕಾರ ಎಂಬ ಘೋಷಣೆಯನ್ನು ನಿರಂತರವಾಗಿ ಕೂಗಿದರು.
ಈ ಗದ್ದಲದ ನಡುವೆಯೇ ವಿಧಾನಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ಎರಡನೇ ತಿದ್ದುಪಡಿ ವಿಧೇಯಕವನ್ನು ಮಂಡಿಸಿ ಅಂಗೀಕಾರವನ್ನು ಪಡೆಯಲಾಯಿತು.
ಇಂದು ಮಂಡನೆಯಾದ ವಿಧೇಯಕ 26.12.1978ಕ್ಕೆ ಮೊದಲು ಮೃತನಾದ ವ್ಯಕ್ತಿಯ ಕುಟುಂಬದ ಸದಸ್ಯರಿಗೆ 22.2.2014 ರಿಂದ ಜಾರಿಗೆ ಬರುವಂತೆ ಕುಟುಂಬ ನಿವೃತ್ತಿ ವೇತನವನ್ನು ನೀಡಲು ಅವಕಾಶ ಕಲ್ಪಿಸಿದೆ.
ಇದಾದ ನಂತರ ಸಭಾಧ್ಯಕ್ಷರು ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.

Write A Comment