ಕರ್ನಾಟಕ

106 ರೈತರ ಆತ್ಮಹತ್ಯೆ, 32 ಕುಟುಂಬಕ್ಕಷ್ಟೇ ಪರಿಹಾರ!

Pinterest LinkedIn Tumblr

raithaಮಂಡ್ಯ: ರಾಜ್ಯದಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿರುವ ಜಿಲ್ಲೆ ಮಂಡ್ಯ. ಇಲ್ಲಿ ಕಳೆದ ವರ್ಷದ ಜೂನ್‌ನಿಂದ ಈವರೆಗೆ ಒಟ್ಟು 106 ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಆದರೆ ಪರಿಹಾರ ಮಾತ್ರ ಕೇವಲ 32 ರೈತರ ಕುಟುಂಬಗಳಿಗೆ ವಿತರಣೆಯಾಗಿದೆ.

ಸಾಲಬಾಧೆ, ಬೆಳೆಹಾನಿ ಸೇರಿದಂತೆ ಮತ್ತಿತರ ಸಮಸ್ಯೆಗಳಿಂದ ರೈತರ ಆತ್ಮಹತ್ಯೆ ಸರಣಿ ಕಳೆದ
ವರ್ಷದಿಂದ ನಡೆಯುತ್ತಲೇ ಇದೆ. ಮಂಡ್ಯ ಜಿಲ್ಲೆಯಲ್ಲಿ ಜೂನ್‌ 18ರಿಂದ ಆರಂಭವಾಗಿರುವ ರೈತರ ಆತ್ಮಹತ್ಯೆ ಪ್ರಕರಣಗಳು ಇನ್ನು ಮುಂದುವರಿಯುತ್ತಲೇ ಇವೆ. ರೈತರಲ್ಲಿ ಆತ್ಮವಿಶ್ವಾಸ ತುಂಬಬೇಕು. ಸರಣಿ ಆತ್ಮಹತ್ಯೆ ಪ್ರಕರಣಗಳಿಗೆ ತಡೆ ನೀಡಬೇಕೆಂದು ರಾಜ್ಯ ಸರ್ಕಾರ ಹಲವು ಬಗೆಯ ಜಾಗೃತಿ ಮಾಡಿದೆ. ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿಯೇ ಮಂಡ್ಯ ಜಿಲ್ಲೆಗೆ ಧೈರ್ಯ ಹೇಳಿ ಹೋಗಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ನೀಡುತ್ತಿದ್ದ 1 ಲಕ್ಷ ರೂ. ಪರಿಹಾರವನ್ನು ಸರ್ಕಾರ 5 ಲಕ್ಷ ರೂ.ಗೆ ಹೆಚ್ಚಿಸಿದೆ.

ಎಷ್ಟು ಕುಟುಂಬಗಳಿಗೆ ಪರಿಹಾರ?: ಜಿಲ್ಲೆಯಲ್ಲಿ ದಾಖಲಾಗಿರುವ 106 ಪ್ರಕರಣಗಳಲ್ಲಿ ಕೇವಲ 32
ರೈತ ಕುಟುಂಬಗಳಿಗೆ ಮಾತ್ರ 5 ಲಕ್ಷ ರೂ. ಪರಿಹಾರ ವಿತರಣೆಯಾಗಿದೆ. ಇನ್ನು 20 ಪ್ರಕರಣಗಳನ್ನು ಅರ್ಹ ಪ್ರಕರಣಗಳಲ್ಲವೆಂದು ಉಪವಿಭಾಗದ ಮಟ್ಟದ ಸಮಿತಿ ತಿರಸ್ಕರಿಸಿದೆ. ಉಳಿದ 54 ಪ್ರಕರಣಗಳು
ಪರಿಶೀಲನಾ ಹಂತದಲ್ಲಿವೆ. ಸಾಲ ಪಡೆದಿರುವ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಹಾಗೂ
ಇತರೆ ಪೂರಕ ದಾಖಲೆಗಳ ಅಲಭ್ಯತೆಯಿಂದಾಗಿ ಸಭೆ ನಡೆದಿಲ್ಲ. ಹೀಗಾಗಿ ಪರಿಹಾರ ನೀಡುವುದು
ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಆದರೆ ಆತ್ಮಹತ್ಯೆ ತಡೆಯುವಲ್ಲಿ ವಿಫ‌ಲವಾಗಿರುವ ಸರ್ಕಾರ ಪರಿಹಾರ ವಿತರಿಸುವಲ್ಲಿಯೂ ವಿಳಂಬ
ನೀತಿ ಅನುಸರಿಸುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಸಾಲು- ಸಾಲು ಚುನಾವಣೆಗಳಿಂದ ಸಮಯಕ್ಕೆ ಸರಿಯಾಗಿ ಸಭೆಗಳು ನಡೆಯದಿರುವುದು ಪರಿಹಾರ
ವಿತರಣೆ ವಿಳಂಬಕ್ಕೆ ಕಾರಣವೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೂ, ಸಾಲಬಾಧೆಯಿಂದ
ಸಾವನ್ನಪ್ಪಿರುವ ರೈತರ ಕುಟುಂಬಗಳಿಗೆ ಪರಿಹಾರ ನೀಡುವ ವೇಳೆ ವಿಧಿಸಲಾಗಿದ್ದ ಹಲವು ನಿಯಮಾವಳಿಗಳನ್ನು ಸಡಿಲಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಅಧಿಕಾರಿಗಳು
ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕಾಲಮಿತಿ ಅಗತ್ಯ: ರೈತರ ಸಾವನ್ನು ಮಾನವೀಯ ನೆಲೆಗಟ್ಟಿನಲ್ಲಿ ನೋಡಬೇಕು. ಎಷ್ಟೋ ಮಂದಿ
ರೈತರು ಆತ್ಮಹತ್ಯೆಗೆ ಶರಣಾಗಿ ವರ್ಷವೇ ಸಮೀಪಿಸುತ್ತಿದೆ. ಅಂತಹ ಕುಟುಂಬದವರಿಗೂ ಪರಿಹಾರ ದೊರೆತಿಲ್ಲ. ರೈತರ ಆತ್ಮಹತ್ಯೆ ಜರುಗಿದ ಕಾಲಮಿತಿಯೊಳಗೆ ಕುಟುಂಬಗಳಿಗೆ ಪರಿಹಾರ
ಕೊಡುವಂತಾಗಬೇಕು. ಆತ್ಮಹತ್ಯೆ ಪ್ರಕರಣಗಳಲ್ಲಿ ಅಧಿಕಾರಿಗಳು ಕಾರ್ಯಕ್ಷಮತೆ ಪ್ರದರ್ಶಿಸಬೇಕೆಂ
ಬುದು ರೈತ ಮುಖಂಡರ ಆಗ್ರಹ.
-ಉದಯವಾಣಿ

Write A Comment