ಕರ್ನಾಟಕ

ಐವರಿಗೆ ಹೊಸ ಬದುಕು ಕೊಟ್ಟ ವಿದ್ಯಾರ್ಥಿನಿ

Pinterest LinkedIn Tumblr

yuvatiಬೆಂಗಳೂರು: ಅಪಘಾತದಲ್ಲಿ ತಲೆಗೆ ಗಂಭೀರವಾಗಿ ಏಟು ಬಿದ್ದು ಮಿದುಳು ನಿಷ್ಕ್ರಿಯಗೊಂಡಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ. ಆಕೆ ಅಂಗಾಂಗ ದಾನದ ಮೂಲಕ ಐವರಿಗೆ ಹೊಸ ಜೀವನ ಸಿಕ್ಕಿದೆ. ಸಾವಿನ ಅಂಚಿನಲ್ಲಿದ್ದ ಯುವಕನಿಗೆ ವಿದ್ಯಾರ್ಥಿನಿ ಹೃದಯ ಮರುಜನ್ಮ ನೀಡಿದೆ.

ಆಲೂರು ತಾಲೂಕು ಕಾರಿನಹಳ್ಳಿಯ ಸಂಜನಾ (19) ಸಾವಿನಲ್ಲೂ ಮತ್ತೊಬ್ಬರಿಗೆ ಬದುಕು ಕೊಟ್ಟ ಯುವತಿ. ಹೃದಯವನ್ನು ಚೆನ್ನೈ ಮೂಲದ ಶಿವನ್(30) ಎಂಬಾತನಿಗೆ ಕಸಿ ಮಾಡಲಾಗಿದೆ. ಯುಕೃತ್ ಮತ್ತು ಮೂತ್ರಪಿಂಡವನ್ನು ಬಿಜಿಎಸ್ ಆಸ್ಪತ್ರೆಯಲ್ಲಿ 44 ವರ್ಷದ ಮಹಿಳೆಗೆ ಜೋಡಿಸಲಾಗಿದೆ. ಮತ್ತೊಂದು ಕಿಡ್ನಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ನೀಡಲಾಗಿದೆ. ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ಕಳುಹಿಸಲಾಗಿದೆ.

ಮೈಸೂರಿನ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ದ್ವಿತೀಯ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದ ಸಂಜನಾ ಫೆ.21ರಂದು ಸ್ನೇಹಿತೆ ಜೊತೆ ದ್ವಿಚಕ್ರ ವಾಹನದಲ್ಲಿ ಕೆಆರ್​ಎಸ್​ಗೆ ಹೋಗಿ ವಾಪಸಾಗುತ್ತಿದ್ದಾಗ ಅಪಘಾತ ಸಂಭವಿಸಿ ಆಕೆಯ ಮಿದುಳು ನಿಷ್ಕ್ರಿಯವಾಗಿತ್ತು. ಸಂಜನಾ ತಂದೆ ಈರಣ್ಣ, ನೋವಿನ ನಡುವೆಯೂ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರು. ಹಾಸನದ ಖಾಸಗಿ ಆಸ್ಪತ್ರೆಯಿಂದ ಬುಧವಾರ ಬೆಳಗಿನ ಜಾವ ನಗರದ ಬಿಜಿಎಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಂಗಾಂಗ ದಾನದ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ನಾರಾಯಣ ಹೃದಯಾಲಯದ ಡಾ.ಜುಲಿಯಸ್ ಪುನ್ನೆನ್ ನೇತೃತ್ವದ ವೈದ್ಯರ ತಂಡ ಸಂಜನಾಳ ಜೀವಂತ ಹೃದಯವನ್ನು ನಾರಾಯಣ ಹೃದಯಾಲಯದಲ್ಲಿದ್ದ ಶಿವನ್​ಗೆ ಕಸಿ ಮಾಡಿದ್ದಾರೆ.

ಹರೀಶ್ ಪ್ರೇರಣೆ

ನೆಲಮಂಗಲ ಬಳಿ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹರೀಶ್ ಅವರ ಅಂಗಾಂಗ ದಾನ ಕುರಿತು ಮಾಧ್ಯಮಗಳಲ್ಲಿ ವರದಿ ನೋಡಿ ಪ್ರೇರಿತರಾದ ಸಂಜನಾ ಪಾಲಕರು ಮಗಳ ಅಂಗಾಂಗ ದಾನಕ್ಕೆ ಸಮ್ಮತಿಸಿದ್ದಾರೆ.

Write A Comment