ಕರ್ನಾಟಕ

ದುಬಾರಿ ವಾಚ್‌: ಸಿಎಂ ಪರ ಸಚಿವ ಎಸ್ಸಾರ್ಪಿ, ಖಾದರ್‌ ಬ್ಯಾಟಿಂಗ್‌

Pinterest LinkedIn Tumblr

utಬೆಂಗಳೂರು: ದುಬಾರಿ ವಾಚ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಸಚಿವರಾದ ಡಾ.ಜಿ. ಪರಮೇಶ್ವರ್‌, ಡಿ.ಕೆ. ಶಿವಕುಮಾರ್‌, ದಿನೇಶ್‌ ಗುಂಡೂರಾವ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಬ್ಯಾಟಿಂಗ್‌ ಮಾಡಿದ್ದರು. ಇದೀಗ ಸಚಿವರಾದ ಎಸ್‌.ಆರ್‌.ಪಾಟೀಲ್‌ ಮತ್ತು ಯು.ಟಿ.ಖಾದರ್‌ ಕೂಡ ಅವರಿಗೆ ಸಾಥ್‌ ಕೊಟ್ಟಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಹಿತಿ ತಂತ್ರಜ್ಞಾನ ಸಚಿವ ಎಸ್‌.ಆರ್‌.ಪಾಟೀಲ್‌, ದುಬಾರಿ ವಾಚ್‌ ಪ್ರಕರಣ ದೊಡ್ಡದೇನಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಉದ್ಯಮಿಯಿಂದ ಹತ್ತು ಲಕ್ಷ ರೂ. ಮೌಲ್ಯದ ಸೂಟ್‌ ಉಡುಗೊರೆ ಪಡೆದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ವಾಚ್‌ ವಿಚಾರದಲ್ಲಿ ನಮ್ಮ ಮುಖ್ಯಮಂತ್ರಿಗಳು ಜನ ಮೆಚ್ಚುವ ನಿರ್ಣಯ ಕೈಗೊಳ್ಳಲಿದ್ದಾರೆ. ಎಲ್ಲಾ ಹಿರಿಯ ಸಚಿವರು ಮುಖ್ಯಮಂತ್ರಿಗಳ ಜತೆ ಇರುತ್ತೇವೆ. ದುಬಾರಿ ವಾಚ್‌ ಹರಾಜು ಹಾಕುವ ಬಗ್ಗೆ ಮುಖ್ಯಮಂತ್ರಿಗಳು ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಇನ್ನೊಂದೆಡೆ ಆರೋಗ್ಯ ಸಚಿವ ಯು.ಟಿ.ಖಾದರ್‌, ಮುಖ್ಯಮಂತ್ರಿಗಳ ಬಳಿ ಇರುವ ದುಬಾರಿ ವಾಚ್‌ಗೆ ಬೆಲೆ ಕಟ್ಟಿದವರು ಯಾರು? ಅದರಲ್ಲಿ ವಜ್ರವಿತ್ತೇ ಎಂಬುದನ್ನು ಹೇಳಿದವರು ಯಾರು ಎಂದು ಪ್ರಶ್ನಿಸಿದ್ದಾರೆ. ಇಂದು ವಾಟ್ಸ್‌ಆ್ಯಪ್‌ನಲ್ಲಿ ಬಂದ ಮೆಸೇಜ್‌ಗಳನ್ನೇ ನಂಬುತ್ತಾರೆಯೇ ಹೊರತು ಅದರ ಸತ್ಯಾಸತ್ಯತೆ ತಿಳಿದು ಕೊಳ್ಳುವುದಿಲ್ಲ. ಹೀಗಾಗಿ ಮುಖ್ಯಮಂತ್ರಿಗಳ ವಾಚ್‌ ವಿಚಾರದಲ್ಲಿ ಅನಗತ್ಯ ಮಾಹಿತಿ ಹರಿದಾಡಿತು ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ವಾಚ್‌ ವಿಚಾರ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ಯಾವುದೇ ಪರಿಣಾಮ ಬೀರಿಲ್ಲ. ಅಷ್ಟಕ್ಕೂ ಅದಕ್ಕೆ ಬೆಲೆ ಕಟ್ಟಿದವರು ಮತ್ತು ಅದು ವಜ್ರ ಖಚಿತ ವಾಚ್‌ ಎಂಬುದನ್ನು ಹೇಳಿದವರು ಯಾರು ಎಂದು ಪ್ರಶ್ನಿಸಿದರು.
-ಉದಯವಾಣಿ

Write A Comment