
ಬೆಂಗಳೂರು: ಫೀಸ್ ಕಟ್ಟೋಕೆ ದುಡ್ಡಿಲ್ಲದ ಕಾರಣ ತಂದೆಯೇ ತನ್ನ ಮಕ್ಕಳನ್ನ ಕೊಂದು ಮೋರಿಗೆ ಎಸೆದಿರುವ ಘಟನೆ ನಗರದ ಕೆಪಿ ಅಗ್ರಹಾರದ ಭುವನೇಶ್ವರಿ ನಗರದಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಶಿವಕುಮಾರ 11 ವರ್ಷಗಳ ಹಿಂದೆ ತಾಯಮ್ಮ ಎಂಬವರನ್ನ ಮದುವೆಯಾಗಿದ್ದ. ಇವರಿಗೆ 9 ವರ್ಷದ ಪವನ ಮತ್ತು 6 ವರ್ಷದ ಸಿಂಚನ ಅನ್ನೋ ಇಬ್ಬರು ಮುದ್ದಾದ ಮಕ್ಕಳಿದ್ರು. ಶಿವಕುಮಾರ ಬಳೆಪೇಟೆಯಲ್ಲಿ ಬ್ಯಾಗ್ ಅಂಗಡಿಯಲ್ಲಿ ಕೆಲಸ ಮಾಡಿದ್ರೆ. ತಾಯಮ್ಮ ಮನೆ ಕೆಲಸ ಮಾಡಿ ಮಕ್ಕಳನ್ನ ಸಾಕ್ತಿದ್ರು.
ಕೊಂದು ಬಿಟ್ಟು ಬಸ್ ಹತ್ತಿದ್ದ ಕಿರಾತಕ: ಪತ್ನಿ ತಾಯಮ್ಮ ಶಿವಕುಮಾರನಿಗೆ ಮಕ್ಕಳ ಸ್ಕೂಲ್ ಫೀಸ್ ಕಟ್ಟುವಂತೆ ಹೇಳಿದ್ರು. ಕಳೆದ ಶನಿವಾರ ಈ ಮಕ್ಕಳಿಗೆ ಸ್ಕೂಲ್ ಡೇ ಇದ್ದಿದ್ದರಿಂದ ಅದನ್ನ ಮುಗಿಸಿಕೊಂಡು ಬಂದು ಮಕ್ಕಳು ಮನೆಯಲ್ಲಿ ಆಟವಾಡ್ತಿದ್ದರು. ಈ ವೇಳೆ ಮನೆಗೆ ಬಂದ ಶಿವಕುಮಾರ ಇಬ್ಬರು ಮಕ್ಕಳ ಬಾಯಿಗೆ ಬಟ್ಟೆ ತುರುಕಿ, ಕೈ ಕಾಲು ಕಟ್ಟಿ, ಚಾಕುವಿನಿಂದ ಇರಿದು ಕೊಲೆ ಮಾಡಿ ಮನೆ ಹತ್ತಿರದ ಮೋರಿಯಲ್ಲಿ ಬಿಸಾಕಿ ಮಲೆ ಮಹದೇಶ್ವರಕ್ಕೆ ಬಸ್ ಹತ್ತಿದ್ದಾನೆ.
ಮಕ್ಕಳು ಕಾಣದ ಹಿನ್ನೆಲೆಯಲ್ಲಿ ತಾಯಮ್ಮ ಇಡೀ ಏರಿಯಾದಲ್ಲಿ ಹುಡುಕಾಡಿದ್ದಾರೆ. ಕೊನೆಗೆ ಪತಿದೇವ ಶವಕುಮಾರನಿಗೆ ಫೋನ್ ಮಾಡಿದಾಗ ಮಕ್ಕಳು ನನ್ನ ಜೊತೆ ಇವೆ. ಮಲೆ ಮಹದೇಶ್ವರ ಬೆಟ್ಟದಲ್ಲೀದ್ದೀನಿ ಎಂದಿದ್ದಾನೆ. ಇವನ ಮಾತಲ್ಲಿ ಅನುಮಾನ ಬಂದು ಪೊಲೀಸ್ ಠಾಣೆಗೆ ದೂರು ಕೊಡ್ತೀವಿ ಅಂದಾಗ ಇರೋ ಸತ್ಯವನ್ನ ಬಾಯ್ಬಿಟ್ಟಿದ್ದಾನೆ.
ದಯವಿಟ್ಟು ಪೊಲೀಸ್ರಿಗೆ ಹೇಳಬೇಡಿ ನನ್ನದು ತಪ್ಪಾಯಿತು. ಫೀಸ್ ಕಟ್ಟಲು ಹಣ ಇರ್ಲಿಲ್ಲ. ಮಕ್ಕಳೇ ಇರದಿದ್ರೆ ಫೀಸ್ ಕಟ್ಟೋ ಹಾಗೆ ಇಲ್ವಲ್ಲ ಅಂತಾ ಮಕ್ಕಳನ್ನ ಕೊಲೆ ಮಾಡಿದ್ದೇನೆ ಅಂತಾ ಫೋನ್‍ನಲ್ಲಿ ಹೇಳಿದ್ದಾನೆ. ವಿಷಯ ತಿಳಿದ ಕೂಡಲೇ ಕೆಪಿ ಅಗ್ರಹಾರ ಪೊಲೀಸರು ಸ್ಥಳಕ್ಕೆ ಬಂದು ಮಕ್ಕಳ ಮೃತದೇಹಗಳನ್ನ ಮೋರಿಯಿಂದ ಮೇಲೆತ್ತಿಸಿ ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.
ಸದ್ಯ ಆರೋಪಿ ತಂದೆಯನ್ನ ಮಲೆಮಹದೇಶ್ವರ ಬೆಟ್ಟದಲ್ಲಿ ಬಂಧಿಸಲಾಗಿದೆ. ಈ ಮುದ್ದಾದ ಮಕ್ಕಳನ್ನ ಕೊಲೆ ಮಾಡಿದ ಕಟುಕನಿಗೆ ಸರಿಯಾದ ಶಿಕ್ಷೆಯಾಗಬೇಕು ಅಂತಾ ಸ್ಥಳೀಯರು ಒತ್ತಾಯಿಸಿದ್ದಾರೆ.