ಬೆಂಗಳೂರು: ರಾಜ್ಯ ವಿಧಾನ ಸಭೆಯ ಮೂರು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು. ಆಡಳಿತಾರೂಢ ಕಾಂಗ್ರೆಸ್ ಪಕ್ಷ ಮೂರರಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಜಯಗಳಿಸಿ ತೀವ್ರ ಮುಖ ಭಂಗ ಅನುಭವಿಸಿದೆ.
ಪ್ರತಿಷ್ಠಿತ ಕ್ಷೇತ್ರವಾದ ಹೆಬ್ಬಾಳದಲ್ಲಿ ಕಾಂಗ್ರೆಸ್ ಇನ್ನಿಲ್ಲದಂತೆ ನೆಲ ಕಚ್ಚಿದೆ. ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ ಠೇವಣಿ ತೆರೆಯದೇ ಸೋತು ಸುಣ್ಣವಾಗಿದೆ. ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಕನಿಷ್ಠ ಎರಡು ಕ್ಷೇತ್ರಗಳಲ್ಲಾದರೂ ಜಯ ಸಾಧಿಸಬಹುದೆಂಬ ಭರವಸೆ ಕೂಡ ಹುಸಿಯಾಗಿದೆ. ಹೆಬ್ಬಾಳ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲು ಕಾರಣ ಗಳು ಏನು ಎಂಬುದರ ಬಗ್ಗೆ ಒಂದಷ್ಟು ವಿವರ ಇಲ್ಲಿದೆ.
ಉಪ ಚುನಾವಣೆ ವೇಳಾ ಪಟ್ಟಿ ಘೋಷಣೆಯಾದ ದಿನದಿಂದ ಹೆಬ್ಬಾಳ ಕ್ಷೇತ್ರ ಭಾರೀ ಕುತೂಹಲ ಮೂಡಿಸಿತ್ತು. ಚುನಾವಣೆ ದಿನಾಂಕ ಘೋಷಣೆ ಮಾಡುವ ಮೊದಲೇ ಟಿಕೆಟ್ ಗಾಗಿ ಪೈಪೋಟಿ ನಡೆದಿತ್ತು. ಸಿಎಂ ಸಿದ್ದರಾಮಯ್ಯ ಅವರ ಬೆಂಬಲಿಗ ಭೈರತಿ ಸುರೇಶ್ ಅವರಿಗೆ ಟಿಕೆಟ್ ಕೊಡಿಸಲು ಸಿದ್ದರಾಮಯ್ಯ ಇನ್ನಿಲ್ಲದ ಹರಸಾಹಸ ಪಟ್ಟಿದ್ದರು. ಆದರೆ ಅಂತಿಮವಾಗಿ ಮಾಜಿ ಸಂಸದ ಜಾಫರ್ ಷರೀಫ್ ಅವರು ಮೊಮ್ಮಗ ರೆಹಮಾನ್ ಷರೀಫ್ ಅವರಿಗೆ ಟಿಕೆಟ್ ಕೊಡಿಸಲಾಗಿತ್ತು. ಆದರೆ ತಮ್ಮನ ಮೊಮ್ಮಗನನ್ನು ಗೆಲ್ಲಿಸುವಲ್ಲಿ ಷರೀಫ್ ವಿಫಲರಾಗಿದ್ದಾರೆ. ಅಂತಿಮ ಹಂತದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದು, ಪಕ್ಷದ ಸೋಲಿಗೆ ಪ್ರಮುಖ ಕಾರಣವಾಯಿತು.
ಕಾಂಗ್ರೆಸ್ ನಾಯಕರ ನಡುವಿನ ಅಸಮಾಧಾನ ಹೆಬ್ಬಾಳ ಕ್ಷೇತ್ರದ ಟಿಕೆಟ್ ಪಡೆಯಲು ಭೈರತಿ ಸುರೇಶ್, ರೆಹಮಾನ್ ಷರೀಫ್, ಎಚ್.ಎಂ.ರೇವಣ್ಣ ನಡುವೆ ಪೈಪೋಟಿ ನಡೆದಿತ್ತು. ಟಿಕೆಟ್ ಕೈ ತಪ್ಪಿದ ನಂತರ ಭೈರತಿ ಸುರೇಶ್ ಮತ್ತು ಎಚ್.ಎಂ.ರೇವಣ್ಣ ಅವರು ಚುನಾವಣೆಯಿಂದ ದೂರ ಉಳಿದರು. ನಾಯಕರ ನಡುವಿನ ಈ ಅಸಮಾಧಾನ ಚುನಾವಣೆ ಮೇಲೆ ಪ್ರಭಾವ ಬೀರಿತು. ಕಾಂಗ್ರೆಸ್‌ಗೆ ಸೋಲು ಉಂಟಾಯಿತು.
ವೈ.ನಾರಾಯಣಸ್ವಾಮಿ ಅವರು ಅಭ್ಯರ್ಥಿ ಎಂದು ಘೋಷಣೆಯಾಗುತ್ತಿದ್ದಂತೆ ಪಕ್ಷ ಬಿರುಸಿನ ಪ್ರಚಾರ ನಡೆಸಿತು. ಕೇಂದ್ರ ಸಚಿವ ಮತ್ತು ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ.ಸದಾನಂದ ಗೌಡ ಅವರ ಒಂದು ವಾರಕ್ಕೂ ಹೆಚ್ಚು ಕಾಲ ಹೆಬ್ಬಾಳದಲ್ಲಿಯೇ ಇದ್ದು, ಪ್ರಚಾರ ನಡೆಸಿದರು. ಕಾರ್ಯಕರ್ತರು ಬಿರುಸಿನ ಪ್ರಚಾರ ನಡೆಸಿ ಅಭ್ಯರ್ಥಿಯನ್ನು ಗೆಲ್ಲಿಸಿದರು.
ಅರಮನೆ ಮೈದಾನದಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ತಯಾರಿಯಲ್ಲಿ ತೊಡಗಿದ ಬೆಂಗಳೂರು ನಗರ ವ್ಯಾಪ್ತಿಯ ಸಚಿವರು ನಾಲ್ಕು ದಿನಗಳ ಕಾಲ ಹೆಬ್ಬಾಳ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿಲ್ಲ.
ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ಮೂರು ಕ್ಷೇತ್ರಗಳ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜ್ಯ ಚುನಾವಣಾ ಆಯೋಗ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ಘೋಷಣೆ ಮಾಡಿತು. ಇದರಿಂದಾಗಿ ಪಕ್ಷದ ನಾಯಕರು ರಾಜ್ಯದ ತುಂಬಾ ಪ್ರವಾಸ ಮಾಡಬೇಕಾಗಿ ಬಂದಿತು. ಸಿದ್ದರಾಮಯ್ಯ ಅವರ ದುಬಾರಿ ವಾಚ್ ವಿವಾದ ಕೂಡ ಪಕ್ಷದ ಸೋಲಿಗೆ ಕಾರಣವಾಯಿತು.
ಒಟ್ಟಿನಲ್ಲಿ ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆಯಂತೆ ಈ ಎಲ್ಲಾ ಕಾರಣಗಳಿಂದಾಗಿ ಕಾಂಗ್ರೆಸ್ ವಿಧಾನ ಸಭೆ ಉಪ ಚುನಾವಣೆಯಲ್ಲಿ ಹೆಬ್ಬಾಳ ಕ್ಷೇತ್ರದಲ್ಲಿ ಸೋಲನುಭವಿಸಲು ಕಾರಣವಾಯ್ತು.