ಬೆಂಗಳೂರು, ಫೆ.9- ಕೇಂದ್ರದ ಕಾನೂನು ಸಚಿವ ಡಿ.ವಿ.ಸದಾನಂದಗೌಡ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಅವರ ಪರವಾಗಿ ಇಂದು ಸಂಜೆ ಜಂಟಿ ಪ್ರಚಾರ ನಡೆಸಲಿದ್ದಾರೆ. ಕ್ಷೇತ್ರ ವ್ಯಾಪ್ತಿಯ ಆರ್‌ಎಂವಿ 2ನೇ ಹಂತದ ಡಾಲರ್ಸ್ ಕಾಲೋನಿಯಲ್ಲಿ ಈ ಇಬ್ಬರು ನಾಯಕರು ನಾರಾಯಣಸ್ವಾಮಿ ಅವರ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಡಾಲರ್ಸ್ ಕಾಲೋನಿಯಲ್ಲಿ ಚುನಾವಣಾ ಬಹಿರಂಗ ಪ್ರಚಾರ ನಡೆಸಲಿದ್ದು, ಯಡಿಯೂರಪ್ಪ ಅವರಲ್ಲದೆ, ಪಕ್ಷದ ಇತರೆ ಮುಖಂಡರು ಕೂಡ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಇಂದು ಬೆಳಗ್ಗೆ ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ, ವಿಧಾನಪರಿಷತ್‌ನ ಮಾಜಿ ಸದಸ್ಯ ಅಬ್ದುಲ್ ಅಜೀಂ, ಪಕ್ಷದ ಕಾನೂನು ವಿಭಾಗದ ವಿವೇಕರೆಡ್ಡಿ, ಸುಬ್ಬಾರೆಡ್ಡಿ ಮತ್ತಿತರ ಮುಖಂಡರು ನಾರಾಯಣಸ್ವಾಮಿ ಅವರೊಂದಿಗೆ ಪಾದಯಾತ್ರೆ ಕೈಗೊಂಡು ಮತಯಾಚನೆ ಮಾಡಿದರು. ಕ್ಷೇತ್ರ ವ್ಯಾಪ್ತಿಯ ಗೆದ್ದಲಹಳ್ಳಿ, ಚೋಳನಾಯಕನಹಳ್ಳಿಯಲ್ಲಿ ಪಾದಯಾತ್ರೆ ನಡೆಸುವ ಮೂಲಕ ಮನೆ ಮನೆಗೆ ತೆರಳಿ ಮತಯಾಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ನಗರಸಭಾ ಮಾಜಿ ಸದಸ್ಯರಾದ ಮುನಿಕೃಷ್ಣ, ಜಯಪ್ಪರೆಡ್ಡಿ ಮತ್ತಿತರರು ನಾರಾಯಣಸ್ವಾಮಿಗೆ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಾರಾಯಣಸ್ವಾಮಿ, ಹೆಬ್ಬಾಳ ಕ್ಷೇತ್ರದ ಕಾವಲುಗಾರರಾಗಿ ಜನ ಸೇವೆ ಮಾಡಲು ಸಿದ್ಧರಿರುವುದಾಗಿ ತಿಳಿಸಿದರು. ತಮ್ಮ ಎದುರಾಳಿ ಪಕ್ಷಗಳ ಅಭ್ಯರ್ಥಿಗಳು ಪ್ರಚಾರ ಸಂದರ್ಭದಲ್ಲೂ ಬಾಯಿ ಬಿಡುತ್ತಿಲ್ಲ. ಇಂಥವರಿಂದ ಕ್ಷೇತ್ರದ ಅಭಿವೃದ್ಧಿ ಹೇಗಾಗುತ್ತದೆ ಎಂದು ಪ್ರಶ್ನಿಸಿದರು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳು ಚುನಾವಣಾ ಕಣಕ್ಕಿಳಿಯಲು ಹಿಂದೇಟು ಹಾಕುವ ರೀತಿಯಲ್ಲಿ ಈ ಉಪಚುನಾವಣೆಯಲ್ಲಿ ತಮ್ಮನ್ನು ಚುನಾಯಿಸಬೇಕೆಂದು ನಾರಾಯಣಸ್ವಾಮಿ ಮತದಾರರಲ್ಲಿ ಮನವಿ ಮಾಡಿದರು.