ಬೆಂಗಳೂರು, ಫೆ.7- ಕೇಂದ್ರ ಸರ್ಕಾರ, ಕಾಂಗ್ರೆಸ್ ಹೈಕಮಾಂಡ್‌ನ ಒತ್ತಡ, ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಭಾವದಿಂದ ವಿದೇಶಿ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆದ ಪ್ರಕರಣ ಇನ್ನೂ ಗಂಭೀರ ಸ್ವರೂಪಕ್ಕೆ ತಿರುಗಿದೆ. ನೆಲದ ಕಾನೂನಿಗೂ ನಮಗೂ ಸಂಬಂಧ ಇಲ್ಲವೆಂಬಂತೆ ವರ್ತಿಸುವ ವಿದ್ಯಾರ್ಥಿಗಳ ಮೇಲೆ ಸ್ಥಳೀಯರು ರೊಚ್ಚಿಗೆದ್ದಿದ್ದಾರೆ. ಅಪಘಾತ ಪ್ರಕರಣವನ್ನು ವಿಪರೀತವಾಗಿ ವೈಭವೀಕರಿಸಲು ಹೋಗಿ ಈಗ ನಿಜವಾದ ಜನಾಂಗೀಯ ಸಂಘರ್ಷವನ್ನು ಹುಟ್ಟಿ ಹಾಕಿದಂತಾಗಿದೆ. ರಾಜ್ಯ ಸರ್ಕಾರವೂ ಕೂಡ ಏಕಪಕ್ಷೀಯವಾಗಿ ನಡೆದುಕೊಂಡಿದ್ದು, ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯುವ ಸಂದರ್ಭದಲ್ಲಿ ವಿದೇಶಿಯರಲ್ಲಿ ಅಪನಂಬಿಕೆ ಬರದಂತೆ ಬದ್ಧತೆ ತೋರಿಸಲು ಹೋಗಿ ಇನ್ನಷ್ಟು ಅವಾಂತರಗಳಿಗೆ ಎಡೆ ಮಾಡಿಕೊಟ್ಟಿದೆ.
ಸೂಡಾನ್ ವಿದ್ಯಾರ್ಥಿ ಕುಡಿದ ಮತ್ತಿನಲ್ಲಿ ಅಪಘಾತ ಮಾಡಿದ ಪರಿಣಾಮ ಶಬಾನ್‌ತಾಜ್ ಎಂಬ ಮಹಿಳೆ ಮೃತಪಟ್ಟಿದ್ದರು. ಅಂದು ವಿದೇಶಿ ವಿದ್ಯಾರ್ಥಿಯು ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಶಬಾನ್‌ತಾಜ್ 10 ಅಡಿ ದೂರಕ್ಕೆ ಎಗರಿ ಬಿದ್ದಿದ್ದರು. ಆ ಮಟ್ಟಿಗೆ ಪ್ರe ಕಳೆದುಹೋಗುವಂತೆ ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವಿಸಿದ್ದರು. ಅಪಘಾತ ಮಾಡಿ ಉದ್ಧಟತನ ತೋರಿಸಿ ಪರಾರಿಯಾಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ಸ್ಥಳೀಯರು ಸ್ವಾಭಾವಿಕವಾಗಿ ಸಿಟ್ಟಿನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡುವುದು ಸರಿಯಲ್ಲ ಎನ್ನುವಂತೆಯೇ ಪ್ರಾಣಹಾನಿಯಂತಹ ಕೃತ್ಯ ಎಸಗುವುದೂ ಕೂಡ ಅಪರಾಧವಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ವಿದೇಶಿ ವಿದ್ಯಾರ್ಥಿಗಳಿಗೆ ನಾಟಕೀಯ ರಕ್ಷಣೆ:ವಿದೇಶಿ ವಿದ್ಯಾರ್ಥಿಗಳ ಮೇಲಿನ ಹಲ್ಲೆ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿದೆ. ವಿದೇಶಾಂಗ ಸಚಿವರು, ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಸರ್ಕಾರದ ವರದಿ ಕೇಳಿದೆ. ಅಲ್ಲಿಂದ ಪ್ರಕರಣ ಗಂಭೀರ ಸ್ವರೂಪಕ್ಕೆ ತಿರುಗಿದೆ. ತಾಂಜೇನಿಯಾದ ರಾಯಭಾರಿ ವಿಕಾಸಸೌಧಕ್ಕೆ ಬಂದು ರಾಜ್ಯ ಸರ್ಕಾರದ ಪ್ರಮುಖರ ಜೊತೆ ವಿಶೇಷ ಚರ್ಚೆ ನಡೆಸಿದ್ದಾರೆ. ವಿದೇಶಿ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡುವ ಭರವಸೆಯನ್ನು ಗೃಹ ಸಚಿವರು ವಿದೇಶಿ ರಾಯಭಾರಿಗೆ ನೀಡಿದ್ದಾರೆ. ಆದರೆ ಸ್ಥಳೀಯರ ರಕ್ಷಣೆ ಹೊಣೆ ಕುರಿತು ಯಾರು ಖಾತ್ರಿ ನೀಡುತ್ತಾರೆ ಎಂಬ ಪ್ರಶ್ನೆ ಈಗ ಮೂಡಿದೆ.
ಹಲ್ಲೆ ನಡೆಸಿದ ಆರೋಪಕ್ಕೆ 9 ಜನ ಸ್ಥಳೀಯರನ್ನು ಈವರೆಗೂ ಬಂಧಿಸಲಾಗಿದೆ. ಅಪಘಾತ ಮಾಡಿದ್ದು ಕ್ರಿಮಿನಲ್ ಪ್ರಕರಣವಾಗಿದ್ದರೂ ಆರೋಪಿಯನ್ನು ಆ ಸಂದರ್ಭದಲ್ಲಿ ಬಂಧಿಸಲಿಲ್ಲ. ಅಪಘಾತ ಸ್ಥಳಕ್ಕೆ ಬಂದಿದ್ದ ಪೊಲೀಸರು ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿದ್ದಾರೆ. ಹಲ್ಲೆ ನಡೆಸಿದ ಪ್ರರಕಣಕ್ಕೆ ಸಂಬಂಧಿಸಿದಂತೆ ವಿದೇಶಿ ವಿದ್ಯಾರ್ಥಿಯೊಬ್ಬ ದೂರು ನೀಡಲು ಬಂದಿದ್ದಾನೆ. ಅಪಘಾತ ಮಾಡಿದವನನ್ನು ಕರೆ ತರುವಂತೆ ಹೇಳಿ ಪೊಲೀಸರು ಕಳುಹಿಸಿದ್ದಾರೆ. ಇದನ್ನು ಪ್ರಕರಣ ದಾಖಲಿಸಲು ವಿಳಂಬ ಎಂದು ಭಾವಿಸಿದ ಸರ್ಕಾರ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದೆ.
ನೆಲದ ಕಾನೂನನ್ನು ಕಡೆಗಣಿಸಿರುವ ವಿದೇಶಿ ವಿದ್ಯಾರ್ಥಿಗಳು:
ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ವ್ಯಾಸಂಗ ಮಾಡಲು ವಿಶ್ವದ ನಾನಾ ದೇಶಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಲಕ್ಷಗಳ ಲೆಕ್ಕದಲ್ಲಿ ಹಣ ಕೊಟ್ಟು ಕಾಲೇಜು ಸೇರಿಕೊಂಡ ವಿದ್ಯಾರ್ಥಿಗಳು ಸ್ಥಳೀಯರನ್ನು ಮತ್ತು ನೆಲದ ಕಾನೂನನ್ನು ಕಡೆಗಣಿಸಿದ್ದಾರೆ. ಸೋಲದೇವನ ಹಳ್ಳಿಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಐದಾರು ಪ್ರತಿಷ್ಠಿತ ಕಾಲೇಜುಗಳಿದ್ದು, ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.
ವಿದ್ಯಾರ್ಥಿನಿಲಯದಲ್ಲಿ ಇವರಿಗೆ ವಾಸಕ್ಕೆ ವ್ಯವಸ್ಥೆ ಇದ್ದರೂ ಸ್ವೇಚ್ಛಾಚಾರಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಮೂರ್ನಾಮಲ್ಕು ಜನ ಸೇರಿಕೊಂಡು ಪ್ರತ್ಯೇಕ ಮನೆ ಮಾಡಿಕೊಂಡಿರುತ್ತಾರೆ. ಇವರ ಅಬ್ಬರಕ್ಕೆ ಅಕ್ಕಪಕ್ಕದ ನಿವಾಸಿಗಳ ನೆಮ್ಮದಿ ಕೆಟ್ಟಿದೆ.
ಬಹುತೇಕ ಮಾದಕ ವ್ಯಸನಿಗಳಾಗಿರುವ ಈ ವಿದ್ಯಾರ್ಥಿಗಳು ರಾತ್ರಿಯೆಲ್ಲಾ ಭಾರೀ ಸದ್ದು ಮಾಡುವ ಧ್ವನಿವರ್ಧಕಗಳ ಮೂಲಕ ಶಾಂತಿ ಭಂಗ ಮಾಡುತ್ತಾರೆ. ಮದ, ಮಾದಕ ವಸ್ತುಗಳ ಸೇವನೆಯಲ್ಲಿ ಪಳಗಿದ ಇವರನ್ನು ಮಾತನಾಡಿಸಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯವಾಗಿ ವಾಹನ ಖರೀದಿಸುವ ಇವರು, ಅವುಗಳ ಸೈಲೆನ್ಸರ್ ಕಿತ್ತು ಹಾಕಿ ಕರ್ಕಶ ಶಬ್ದ ಬರುವಂತೆ ಮಾಡಿಕೊಂಡಿರುತ್ತಾರೆ. ಮಧ್ಯ ರಾತ್ರಿಯಾದರೂ ಹೊರಗಡೆ ಒಡನಾಟ ಇರುವ ಅವರು ಏರಿದ ಧ್ವನಿಯಲ್ಲಿ ಗಲಾಟೆ ಮಾಡುತ್ತಾರೆ. ವೇಗವಾಗಿ ವಾಹನ ಓಡಿಸುವುದು, ಕೇಳಿದವರ ಮೇಲೇರಿ ಹೋಗಿ ಜಗಳ ಮಾಡುವುದು ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿದೆ.
ಇಂತಹ ಹತ್ತಾರು ಗಲಾಟೆಗಳು ಪೊಲೀಸ್ ಠಾಣೆ ಮೆಟ್ಟಿಲೇರಿವೆ. ಪ್ರಕರಣ ದಾಖಲಾದರೆ ಅದು ಮುಗಿಯುವವರೆಗೂ ಅವರು ತವರಿಗೆ ವಾಪಸ್ ಹೋಗದಂತಾಗುತ್ತದೆ, ವಿದ್ಯಾಭ್ಯಾಸ ಮುಗಿದರೂ ಇಲ್ಲೇ ಉಳಿಯ ಬೇಕಾಗುತ್ತದೆ ಎಂಬ ಕಾರಣಕ್ಕೆ ಪೊಲೀಸರು ಅನುಕಂಪ ತೋರಿಸಿ ಸ್ಥಳೀಯ ದೂರುದಾರರ ಮನವೊಲಿಸಿ ರಾಜಿ ನ್ಯಾಯ ಮಾಡಿಕಳುಹಿಸುತ್ತಿದ್ದಾರೆ. ಇದಕ್ಕೆ ಕಾಲೇಜು ಆಡಳಿತ ಮಂಡಳಿಗಳ ಒತ್ತಡವೂ ಸಹ ಇದೆ.
ಪ್ರರಕಣದ ಬಿಸಿ ಅನುಭವಿಸದೆ ಇರುವ ವಿದ್ಯಾರ್ಥಿಗಳಿಗೆ ನೆಲದ ಕಾನೂನಿನ ಮೇಲೆ ಉಡಾಫೆಯಿದೆ ಎನ್ನಲಾಗುತ್ತಿದೆ. ವೇಗವಾಗಿ ಕಾರು ಓಡಿಸಿದ ವಿದೇಶಿ ವಿದ್ಯಾರ್ಥಿಯೊಬ್ಬನ್ನು ಪ್ರಶ್ನಿಸಿದ್ದಕ್ಕಾಗಿ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ಸಾರ್ವಜನಿಕವಾಗಿ ಆತನಿಂದ ಥಳಿತಕ್ಕೆ ಒಳಗಾದ ಪ್ರಸಂಗ ಜಾಲಹಳ್ಳಿಯಲ್ಲಿ ಇತ್ತೀಚೆಗೆ ನಡೆದಿದೆ. ತಡರಾತ್ರಿ ಸಂಚರಿಸುವ ವಿದೇಶಿಯರನ್ನು ಪ್ರಶ್ನಿಸಿದರೆ ಮೇಲೇರಿ ಬರುತ್ತಾರೆ ಎಂಬ ಕಾರಣಕ್ಕೆ ಪೊಲೀಸರು ಅವರನ್ನು ಕಂಡರೂ ಕಾಣದಂತೆ ಹೋಗುತ್ತಾರೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ವಿದೇಶಿ ವಿದ್ಯಾರ್ಥಿಗಳು ಪೊಲೀಸರಿಗೆ ಬಿಸಿ ತುಪ್ಪವಾಗಿದ್ದಾರೆ.
ಅವರು ತಪ್ಪು ಮಾಡಿದಾಗ ಕ್ರಮ ಕೈಗೊಂಡರೆ ವಿದೇಶಿ ರಾಯಭಾರಿವರೆಗೂ ಸ್ಪಷ್ಟನೆ ನೀಡಬೇಕು. ಅವರು ತಪ್ಪು ಮಾಡಲು ಬಿಟ್ಟರೆ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬ ಟೀಕೆಗಳನ್ನು ಕೇಳಬೇಕು ಎಂಬ ಅಡಕತ್ತರಿಯಲ್ಲಿ ಪೊಲೀಸರು ಸಿಲುಕಿದ್ದಾರೆ. ಅಡ್ಡೆಗಳಾಗಿರುವ ಹೊರ ವಲಯಗಳು:ಬೆಂಗಳೂರಿನ ಹೊರ ವಲಯದಲ್ಲಿನ ಪ್ರತಿಷ್ಠಿತ ಕಾಲೇಜುಗಳು ವಿದೇಶಿ ವಿದ್ಯಾರ್ಥಿಗಳನ್ನು ಹೆಚ್ಚು ಆಕರ್ಷಿಸಿವೆ. ದೇಶಿಯ ವಿದ್ಯಾರ್ಥಿಗಳಿಗಿಂತಲೂ ದುಪ್ಪಟ್ಟು ಡೊನೇಷನ್ ಕೊಡುವ ವಿದೇಶಿ ವಿದ್ಯಾರ್ಥಿಗಳು ಖಾಸಗಿ ಕಾಲೇಜು ಆಡಳಿತ ಮಂಡಳಿಗಳ ಪಾಲಿಗೆ ವರವಿದ್ದಂತೆ. ಈ ರೀತಿ ಬಂದು ಸೇರಿಕೊಳ್ಳುವ ವಿದ್ಯಾರ್ಥಿಗಳ ಪೈಕಿ ಬಹುತೇಕರು ಎಲ್ಲಾ ರೀತಿಯ ಕಾನೂನು ಬಾಹಿರ ಕೃತ್ಯಗಳಲ್ಲೂ ತೊಡಗಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮಾದಕ ವಸ್ತು ಕಳ್ಳ ಸಾಗಾಣಿಕೆ, ಕಳ್ಳತನ, ವಂಚನೆ, ಆನ್‌ಲೈನ್ ವಂಚನೆ, ವೇಶ್ಯಾವಾಟಿಕೆಯಂತಹ ಕೃತ್ಯಗಳಲ್ಲೂ ವಿದೇಶಿ ವಿದ್ಯಾರ್ಥಿಗಳು ಅಪರಾಧಿಗಳಾಗಿರುವ ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿದ್ದು, ಹೊರ ವಲಯಗಳು ವಿದೇಶಿ ವಿದ್ಯಾರ್ಥಿಗಳ ಅಡ್ಡೆಗಳಾಗಿವೆ.
ಕರ್ನಾಟಕ