ಕರ್ನಾಟಕ

ದಿನಕರ್ ತೂಗುದೀಪ್ ರಿಂದ ಹಲ್ಲೆ : ಪೊಲೀಸ್ ಠಾಣೆ ಮೆಟ್ಟಿಲೇರಿದ ಬುಲೆಟ್ ಪ್ರಕಾಶ್

Pinterest LinkedIn Tumblr

dina

ಬೆಂಗಳೂರು,ಫೆ.4: ಸಿನಿಮಾ ನಿರ್ಮಾಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಖ್ಯಾತನಟ ದರ್ಶನ್ ಸಹೋದರ ಹಾಗೂ ಚಿತ್ರ ನಿರ್ದೇಶಕ ದಿನಕರ್ ತೂಗುದೀಪ್ ಕೊಲೆ ಬೆದರಿಕೆಹಾಕಿದ್ದಾರೆ ಎಂದು ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರು ಅಮೃತಳ್ಳಿ ಠಾಣೆಗೆ ದೂರು ನೀಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಟನೆಯಲ್ಲಿ ಬುಲೆಟ್ ಪ್ರಕಾಶ್ ಅವರು ಸಿನಿಮಾ ನಿರ್ಮಾಣ ಮಾಡಲು ಮುಂದಾಗಿರುವ ವಿಚಾರ ವಿಕೋಪಕ್ಕೆ ತಿರುಗಿ ನಿನ್ನೆ ರಾಜನ್ ಸ್ಟುಡಿಯೋದಲ್ಲಿ ದಿನಕರ್ ತೂಗುದೀಪ್ ಹಾಗೂ ಬುಲೆಟ್ ನಡುವೆ ಪರಸ್ಪರ ಜಗಳ ನಡೆದಿದೆ. ಬುಲೆಟ್ ಪ್ರಕಾಶ್ ಅವರ ನಿರ್ಧಾರಕ್ಕೆ ದಿನಕರ್ ತೂಗುದೀಪ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನನ್ನ ಅಣ್ಣನನ್ನು ಹಾಕಿಕೊಂಡು ಚಿತ್ರ ಮಾಡಲು ಅವನ್ಯಾರು ಎಂದು ಕಿಡಿಕಾರಿದ್ದಾರೆ.

ಬುಲೆಟ್ ಹಾಗೂ ದಿನಕರ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಪರಸ್ಪರ ನಿಂಧನೆ ಆರೋಪಗಳನ್ನು ಮಾಡಲಾಗಿದೆ. ದಿನಕರ್ ಮತ್ತು ಆತನ ಸ್ನೇಹಿತ ತಿಸ್ತಾ ಸೀನಾ ಅವರು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಬುಲೆಟ್ ಪ್ರಕಾಶ್ ಅವರು ಅಮೃತಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಟ ದರ್ಶನ್ ನನಗೆ ಕಾಲ್ ಸೀಟ್ ಕೊಟ್ಟಿದ್ದಾರೆ. ಈ ಕುರಿತು ಪ್ರಶ್ನಿಸಲು ದಿನಕರ್ ತೂಗುದೀಪ್ ಯಾರು. ಏಕಾಏಕಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನನಗೆ ನನ್ನ ಕುಟುಂಬಕ್ಕೆ ತೊಂದರೆಯಾದರೆ ದಿನಕರ್ ಮತ್ತು ಅವರ ಸ್ನೇಹಿತರೆ ಕಾರಣ ಎಂದು ಬುಲೆಟ್ ಆರೋಪಿಸಿದ್ದಾರೆ.

ಆರೋಪ ನಿರಾಧಾರ: ಇದಕ್ಕೆ ಪ್ರತಿಕ್ರಿಯಿಸಿರುವ ದಿನಕರ್ ತೂಗುದೀಪ್, ಬುಲೆಟ್ ಪ್ರಕಾಶ್ ಆರೋಪವನ್ನು ನಿರಾಕರಿಸಿದ್ದಾರೆ. ಅವರ ಆರೋಪ ಸತ್ಯಕ್ಕೆ ದೂರವಾದದ್ದು. ನಾನು ಕೊಲೆ ಬೆದರಿಕೆಯಾಕಿಲ್ಲ. ನಾನಾಗಲಿ ನನ್ನ ಸ್ನೇಹಿತರಾಗಲಿ ಅವರ ಮೇಲೆ ಹಲ್ಲೆ ಮಾಡಿಲ್ಲ. ನನ್ನ ಸಹೋದರ ದರ್ಶನ್ ಅವರು ಬ್ಯುಸಿ ಇದ್ದಾರೆ. ಅವರ ಕಾಲ್ ಸೀಟ್ ಇಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದೆವು. ಅವರು ಪಾನಮತ್ತರಾಗಿ ಬಂದಿದ್ದರು. ಬಾಯಿಗೆ ಬಂದಂತೆ ನನ್ನ ವಿರುದ್ಧ ಮಾತನಾಡುತ್ತಿದ್ದರು. ಜೊತೆಗೆ ತನ್ನ ಮಗಳನ್ನು ಕರೆದುಕೊಂಡು ಬಂದಿದ್ದರು. ಅವರ ಮಗಳು ಇದ್ದುದ್ದರಿಂದ ನಾನು ಸುಮ್ಮನಿದ್ದೆ. ಹೆಣ್ಣು ಮಗು ಇರುವಾಗ ಮಾತನಾಡುವುದು ಸರಿಯಲ್ಲ ಎಂದು ನಾವು ಸುಮ್ಮನಿದ್ದೆವು. ಸುಮ್ಮನೆ ನಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

Write A Comment