ಬೆಂಗಳೂರು: ಖಾಸಗಿ ಬಸ್ಗಳ ಬೆಂಗಳೂರು ನಗರ ಪ್ರವೇಶಕ್ಕೆ ಸರ್ಕಾರ ಸೋಮವಾರದಿಂದ ಐದು ದಿನಗಳ ಕಾಲ ನಿರ್ಬಂಧ ಹೇರಿದ್ದರ ಪರಿಣಾಮ ಪ್ರಯಾಣಿಕರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬೆಳಗ್ಗೆಯಿಂದಲೇ ಖಾಸಗಿ ಬಸ್ಗಳ ಬೆಂಗಳೂರು ಪ್ರವೇಶ ನಿಂತಿದ್ದು, ಅಲ್ಲಿಂದ ಮನೆಗಳಿಗೆ, ಬೇರೆ ಬೇರೆ ಕಚೇರಿಗಳಿಗೆ ಸಮಯಕ್ಕೆ ಸರಿಯಾಗಿ ಸೇರಿಕೊಳ್ಳಲಾಗದೇ ಜನ ಹಿಡಿಶಾಪ ಹಾಕುತ್ತಿರುವ ದೃಶ್ಯಗಳು ಕಂಡುಬಂದವು.
‘ಇನ್ವೆಸ್ಟ್ ಕರ್ನಾಟಕ’ ನೆಪದಲ್ಲಿ ನಿರ್ಬಂಧ ಹೇರುತ್ತಿರುವ ತನ್ನ ನಿರ್ಧಾರವನ್ನು ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆಯಾದರೂ, ಪರ್ಯಾಯ ವಾಗಿ ನಗರ ಸಾರಿಗೆ ವ್ಯವಸ್ಥೆಯನ್ನು ಸೂಕ್ತವಾಗಿ ಮಾಡದೇ ಇರುವುದು ಸಾರ್ವಜನಿಕರಿಗೆ ಸಮಸ್ಯೆಯಾಗಿ ಪರಿಣಮಿಸುತ್ತಿದ್ದು, ಬಸ್ ನಿರ್ವಾಹಕರ ಮತ್ತು ಡ್ರೖೆವರ್ಗಳ ಜತೆ ಜಗಳ ಮಾಡುತ್ತಿರುವ ದೃಶ್ಯಗಳೂ ಕಂಡುಬರುತ್ತಿವೆ. ಕೆಲವರು ಮಾನಸಿಕವಾಗಿ ಸಿದ್ಧರಾಗಿ ಬಂದು, ಹೊರ ವಲಯಗಳಿಂದ ನಗರಕ್ಕಾಗಮಿಸುವ ಬಿಎಂಟಿಸಿ ಬಸ್ಗಳನ್ನು ಅವಲಂಭಿಸುತ್ತಿರುವುದು ಕಂಡುಬಂತು.
ಬೆಳಗ್ಗೆ 6ರಿಂದ ಕೆಂಗೇರಿ ಬಳಿ ಪೊಲೀಸರು ಖಾಸಗಿ ಬಸ್ಗಳ ಪ್ರವೇಶಕ್ಕೆ ಕಡಿವಾಣ ಹಾಕಿದ್ದರಿಂದ ಎಲ್ಲಾ ಪ್ರಯಾಣಿಕರು ಅಲ್ಲಿಯೇ ಇಳಿದು ಬಿಎಂಟಿಸಿ ಬಸ್ಗಳನ್ನೇರಿ ನರಗರಕ್ಕೆ ಆಗಮಿಸಿದರು.