ಬೆಂಗಳೂರು, ಫೆ.1-ಡೆಂಗ್ಯೂ ಮತ್ತು ಚಿಕುನ್‌ಗುನ್ಯಾ ಮಾರಕ ರೋಗಗಳ ನಂತರ ಇದೀಗ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಝಿಕಾ ವೈರಾಣುಗಳು ಇತ್ತ ಬೆಂಗಳೂರನ್ನು ಪ್ರವೇಶಿಸುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿದ್ದು, ಪ್ರಮುಖವಾಗಿ ಬೆಂಗಳೂರು ಮತ್ತು ಪಶ್ಚಿಮಘಟ್ಟಗಳಲ್ಲಿ ಈ ವೈರಾಣುಗಳು ದಾಳಿ ಇಡಲಿವೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಸಾಮಾನ್ಯವಾಗಿ ಆಡಿಸ್ ಈಜಿಪ್ಟ್ ಎಂಬ ಪ್ರಭೇದದ ಸೊಳ್ಳೆ ಕಡಿತದಿಂದ ಹರಡುತ್ತಿರುವ ಈ ರೋಗ ಈಗಾಗಲೇ ವಿಶ್ವದ 120ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ತಲೆದೋರಿದ್ದು, ಪ್ರಸ್ತುತ ಭಾರತದ ವಿವಿಧೆಡೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಆಡಿಸ್ ಈಜಿಪ್ಟ್ ಸೊಳ್ಳೆಗಳು ಹೊಸ ನೀರಿನಲ್ಲಿ ಉತ್ಪತ್ತಿಯಾಗುತ್ತಿದ್ದು, ಇವು ಕಚ್ಚುವ ಮೂಲಕ ವೈರಾಣುಗಳನ್ನು ಹರಡುತ್ತವೆ. ಸ್ವಚ್ಛತೆ ಇಲ್ಲದಿರುವ ಕಾರಣ, ಎಲ್ಲೆಂದರಲ್ಲಿ ಕೊಳೆತ ಕಸದ ರಾಶಿ ತುಂಬಿರುವ ಪ್ರದೇಶದಲ್ಲಿ ಹಾಗೂ ನೀರು ನಿಲ್ಲುವ ಸ್ಥಳಗಳಲ್ಲಿ ಈ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಇವು ಕಚ್ಚಿದರೆ ಝಿಕಾ ವೈರಸ್ ಹರಡುತ್ತದೆ.
ಬೆಂಗಳೂರಿನ ಹಲವು ಮಂದಿ ವೈದ್ಯರು ವಿಶ್ವದ ಇತರೆ ರಾಷ್ಟ್ರಗಳೊಂದಿಗೆ ತಮ್ಮ ವಾಟ್ಸಪ್‌ಗಳ ಮೂಲಕ ಸಂಪರ್ಕವಿಟ್ಟುಕೊಂಡಿದ್ದು, ಈ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ. ಮುಖ್ಯವಾಗಿ ಬೆಂಗಳೂರಿನಂತಹ ಸ್ವಚ್ಛತೆ ಕೊರತೆಯಿರುವ ನಗರ ಹಾಗೂ ಎಲ್ಲೆಂದರಲ್ಲಿ ನೀರು ನಿಂತಿರುವ ಪಶ್ಚಿಮಘಟ್ಟಗಳ ಪ್ರಾಂತ್ಯಗಳಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಿನ ಸಂಖ್ಯೆಯಲ್ಲಿ ಆಗುವುದರಿಂದ ಈ ಪ್ರದೇಶಗಳಿಗೆ ಝಿಕಾ ಭೀತಿ ಆವರಿಸಬಹುದು ಎಂದು ಹೇಳಲಾಗಿದೆ.
ಸದ್ಯ ಭೀತಿಯಿಲ್ಲ:
ಆದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಡಾ.ಜಿ.ಎಂ.ವಾಮದೇವ ಅವರು ಏನೇ ಆದರೂ ನಾವು ಝಿಕಾ ವೈರಾಣುಗಳಿಗೆ ಹೆದರುವ ಅಗತ್ಯವಿಲ್ಲ. ಇನ್ನು ಭಾರತಕ್ಕೆ ವೈರಾಣು ಪ್ರವೇಶವಾಗಿಲ್ಲ. ನಾವು ಮೈಮರೆತರೆ ವೈರಾಣು ಪ್ರವೇಶಿಸುವ ಸಾಧ್ಯತೆ ಇದೆಯಷ್ಟೆ ಎಂದು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಜನಜಾಗೃತಿ ಮೂಡಿಸುವಂತಹ ಯಾವುದೇ ಸೂಚನೆಗಳನ್ನು ನೀಡಲು ನಮಗೆ ಅಧಿಕಾರವಿಲ್ಲ. ಇದನ್ನು ಕೇಂದ್ರ ಸರ್ಕಾರ ಮಾಡಬೇಕು. ಯಾವ ರೀತಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ನಾವು ಮಾರ್ಗಗಳನ್ನು ಹುಡುಕುತ್ತಿದ್ದೇವೆ. ಇಂತಹ ಮಾರ್ಗಸೂಚಿಗಳನ್ನು ಪಟ್ಟಿ ಮಾಡಿ ನಾವು ಮೇಲಾಧಿಕಾರಿಗಳಿಗೆ ನಾವು ನೀಡಬಹುದು ಎಂದರು.
ಇಲ್ಲಿನ ಮಣಿಪಾಲ್ ಆಸ್ಪತ್ರೆಯಲ್ಲಿರುವ ಗುಣಮಟ್ಟ ನಿಯಂತ್ರಣ ಅಧಿಕಾರಿ ಡಾ.ಸತೀಶ್ ಅಮರ್‌ನಾಥ್ ಅವರೂ ಕೂಡ ಭಾರತಕ್ಕೆ ಝಿಕಾ ವೈರಾಣುಗಳು ದಾಳಿ ಇಡುವ ಸಾಧ್ಯತೆಗಳು ಇಲ್ಲದಿಲ್ಲ. ದಕ್ಷಿಣ ಅಮೆರಿಕ ದೇಶಗಳಲ್ಲಿ ಸಾಕಷ್ಟು ಜನ ಭಾರತೀಯರು, ವಿಶೇಷವಾಗಿ ಕನ್ನಡಿಗರು ಇದ್ದಾರೆ. ಅವರ ಸಂಚಾರದಿಂದ ಈ ಸೋಂಕು ತಗಲುವ ಎಲ್ಲಾ ಸಾಧ್ಯತೆಗಳು ಇವೆ ಎಂಬುದು ಅವರ ಅಭಿಪ್ರಾಯ.
ಇದಕ್ಕೆ ಪರಿಹಾರವಾಗಿ ಬೆಂಗಳೂರು ಸೇರಿದಂತೆ ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಆಗಮಿಸುವ ಮತ್ತು ನಿರ್ಗಮಿಸುವ ಜನರನ್ನು ತಪಾಸಣೆಗೊಳಪಡಿಸಬೇಕು. ಎಲ್ಲಾ ಕಡೆ ಸುಸಜ್ಜಿತ ತಪಾಸಣಾ ಕಿಟ್‌ಗಳನ್ನು ಒದಗಿಸಬೇಕು. ಇದನ್ನು ಕೇಂದ್ರ ಆರೋಗ್ಯ ಇಲಾಖೆ ನೋಡಿಕೊಳ್ಳಬೇಕು ಎಂದು ಡಾ.ಸತೀಶ್ ಅಮರ್‌ನಾಥ್ ಹೇಳಿದ್ದಾರೆ.
ಔಷಧ ಅಲಭ್ಯ:
ಈಗಾಗಲೇ ವಿಶ್ವದಾದ್ಯಂತ ಝಿಕಾ ವೈರಾಣುಗಳು ತಮ್ಮ ದಾಳಿ ಆರಂಭಿಸಿದ್ದು, ಈ ವೈರಾಣುಗಳನ್ನು ನಾಶ ಮಾಡುವಂತಹ ಯಾವುದೇ ರೀತಿಯ ಚುಚ್ಚುಮದ್ದುಗಳಾಗಲಿ, ಲಸಿಕೆಗಳಾಗಲಿ ಸದ್ಯ ಅಸ್ತಿತ್ವದಲ್ಲಿಲ್ಲ. ಆ ಔಷಧಗಳನ್ನು ಆವಿಷ್ಕರಿಸಲು ಕೆಲವು ವರ್ಷಗಳೇ ಬೇಕಾಗುತ್ತದೆ ಎನ್ನುತ್ತಾರೆ ಜಗತ್ತಿನ ತಜ್ಞ ವೈದ್ಯರು. ಹಾಗಾಗಿ ವೈರಾಣುಗಳು ದಾಳಿ ಮಾಡದಂತೆ ಮತ್ತು ಯಾವುದೇ ಪ್ರದೇಶಗಳಿಗೆ ಪ್ರವೇಶಿಸದಂತೆ ಮುಂಜಾಗ್ರತೆ ವಹಿಸುವುದೊಂದೇ ಇದಕ್ಕೆ ಇರುವ ಮಾರ್ಗ.
ಏನು ವೈರಾಣು?
ಝಿಕಾ ವೈರಾಣುಗಳು ಒಮ್ಮೆ ಮನುಷ್ಯರ ದೇಹವನ್ನು ಪ್ರವೇಶಿಸಿದರೆ ಅವರಲ್ಲಿನ ಸಂತಾನಶಕ್ತಿಯನ್ನೇ ಹರಣಗೊಳಿಸುತ್ತವೆ. ವಿಶೇಷವಾಗಿ ಗರ್ಭಿಣಿ ಮಹಿಳೆಯರಿಗೆ ವೈರಾಣು ಸೋಂಕು ತಗುಲಿZದರೆ ಹೊಟ್ಟೆಯಲ್ಲಿರುವ ಮಗುವಿನ ಮಿದುಳಿನ ಬೆಳವಣಿಗೆ ಕುಂಠಿತಗೊಳುತ್ತದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಅನೇಕ ರಾಷ್ಟ್ರಗಳಲ್ಲಿ ಮುಂದಿನ ಎರಡು ವರ್ಷ ಗರ್ಭ ಧರಿಸದಂತೆ ಮಹಿಳೆಯರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ವಿವಾಹ ಮಾಡಿಕೊಳ್ಳುವವರು ಕೂಡ ಇನ್ನೂ ಎರಡು ವರ್ಷಗಳ ಕಾಲ ತಮ್ಮ ವಿವಾಹವನ್ನು ಮುಂದೂಡುವಂತೆಯೂ ಸೂಚನೆ ನೀಡಲಾಗಿದೆ. ಅಂದರೆ, ಈ ವೈರಾಣುಗಳ ಭೀತಿ ಯಾವ ಹಂತದಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.