ಚಿತ್ರದುರ್ಗ, ಜ.18-ಪರಿಚಯಸ್ಥ ವ್ಯಕ್ತಿ ತನ್ನ ಮನೆ ಮುಂದೆ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಗಾಬರಿಯಾದ ಮಹಿಳೆ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜೆಸಿಆರ್ ಬಡಾವಣೆ, 6ನೆ ಕ್ರಾಸ್ ನಿವಾಸಿ ಮಲ್ಲಿಕಾರ್ಜುನ (30) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ಭವಾನಿ (28) ಆತ್ಮಹತ್ಯೆಗೆ ಯತ್ನಿಸಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ.
ಮಲ್ಲಿಕಾರ್ಜುನನಿಗೂ ವಿವಾಹವಾಗಿ ಮಕ್ಕಳಿವೆ. ಭವಾನಿಗೂ ವಿವಾಹವಾಗಿ ಮಕ್ಕಳಿದ್ದಾರೆ ಎನ್ನಲಾಗಿದೆ. ಜೆಸಿಆರ್ ಬಡಾವಣೆಯ 4ನೆ ಕ್ರಾಸ್‌ನಲ್ಲಿ ವಾಸವಾಗಿರುವ ಭವಾನಿ ಹೊಟೇಲ್ ನಡೆಸುತ್ತಿದ್ದು, ಈಕೆಗೂ ಹಾಗೂ ಮಲ್ಲಿಕಾರ್ಜುನನಿಗೂ ಪರಿಚಯವಿತ್ತು ಎನ್ನಲಾಗಿದೆ.
ಈ ನಡುವೆ ಇವರಿಬ್ಬರ ನಡುವೆ ಯಾವ ವಿಷಯಕ್ಕೆ ಮನಸ್ತಾಪವಾಗಿತ್ತೋ ತಿಳಿಯದು. ಮಧ್ಯರಾತ್ರಿ ಮಲ್ಲಿಕಾರ್ಜುನ ವಿಷದ ಬಾಟಲಿಯೊಂದಿಗೆ ಭವಾನಿ ಮನೆ ಬಳಿ ಬಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮುಂಜಾನೆ ಭವಾನಿ ಹೊರಬಂದಾಗ ಮಲ್ಲಿಕಾರ್ಜುನ ವಿಷ ಸೇವಿಸಿ ಮೃತಪಟ್ಟಿರುವುದು ತಿಳಿದು ಗಾಬರಿಗೊಂಡು ಮನೆಯೊಳಗೆ ಹೋಗಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತಕ್ಷಣ ಈಕೆಯ ಕೂಗಾಟ, ಚೀರಾಟ ಕೇಳಿದ ನೆರೆಹೊರೆಯವರು ಬಂದು ಬೆಂಕಿಯನ್ನು ನಂದಿಸುವಲ್ಲಿ ಶೇ.80ರಿಂದ 90ರಷ್ಟು ಭಾಗ ದೇಹ ಸುಟ್ಟಿತ್ತು. ತಕ್ಷಣ ಆಂಬುಲೆನ್ಸ್‌ನಲ್ಲಿ ದಾವಣಗೆರೆ ಖಾಸಗಿ ಆಸ್ಪತ್ರೆಗೆ ಭವಾನಿಯನ್ನು ರವಾನಿಸಲಾಗಿದ್ದು, ಜೀವನ್ಮರಣದಲ್ಲಿ ಹೋರಾಡುತ್ತಿದ್ದಾಳೆ. ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.