ಕರ್ನಾಟಕ

ಬೆಂಗಳೂರಿನಲ್ಲಿರುವ ಹುತಾತ್ಮ ಲೆಫ್ಟಿನೆಂಟ್ ನಿರಂಜನ್ ಮನೆಯಲ್ಲಿ ಈಗ ನೀರವ ಮೌನ

Pinterest LinkedIn Tumblr

Niranjan

ಬೆಂಗಳೂರು: ದೇಶಕ್ಕೆ ಮಗನನ್ನೇ ಅರ್ಪಿಸಿದ ಬೆಂಗಳೂರು ನಿವಾಸಿ ಶಿವರಾಜನ್ ಅವರ ಮನೆಯಲ್ಲೀಗ ನೀರವ. ಒಂದು ಕಡೆ ದೇಶಕ್ಕೆ ತಮ್ಮ ಮಗನನ್ನು ಅರ್ಪಿಸಿದ ಹೆಮ್ಮೆ, ಇನ್ನೊಂದು ಕಡೆ ಕುಟುಂಬದ ಪ್ರೀತಿಪಾತ್ರ ಕುಡಿಯನ್ನು ಕಳೆದುಕೊಂಡ ತಳಮಳ. ಇದು ವೀರಯೋಧ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಮನೆಯ ವೀರಕಥೆ.

ಪಂಜಾಬ್ ನ ಪಠಾಣ್ ಕೋಟ್ ನಲ್ಲಿ ಸಂಭವಿಸಿದ ಗ್ರೆನೇಡ್ ಸ್ಫೋಟಕ್ಕೆ ತಮ್ಮ ಮಗ ಬಲಿಯಾದ ಸುದ್ದಿ ನಿರಂಜನ್ ತಂದೆಯನ್ನು ದಿಗ್ಭ್ರಾಂತರನ್ನಾಗಿಸಿದೆ. ನಿರಂಜನ್ ತಂದೆ ಶಿವರಾಜನ್ ಅವರೊಂದಿಗೆ ಇಡೀ ಕುಟುಂಬವೇ ಈ ಸುದ್ದಿಯಿಂದ ತಬ್ಬಿಬ್ಬಾಗಿದೆ, ಬರಸಿಡಿಲು ಬಡಿದಂತಾಗಿದೆ.

ಮಗ ವೀರಮರಣವನ್ನಪ್ಪಿದ ಸುದ್ದಿಯನ್ನು ಒಂದು ಕಡೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಶಿವರಾಜನ್, ಇನ್ನೊಂದು ಕಡೆ ಮನದೊಳಗೆ ಬಿಕ್ಕುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಆ ಮನೆಯ ತಾಯಿಗೆ ನಾಲ್ವರು ಮಕ್ಕಳು. ಅದರಲ್ಲಿಬ್ಬರನ್ನು ದೇಶ ಸೇವೆಗಾಗಿಯೇ ಹಡೆದಿದ್ದು ಎಂಬಂತೆ ಸೈನ್ಯಕ್ಕೆ ಕಳುಹಿಸಿದ್ದಳು. ಆದರೆ, ಆ ಎರಡು ಕಣ್ಮಣಿಗಳಲ್ಲಿ ಒಬ್ಬ ಉಗ್ರರ ಕೃತ್ಯಕ್ಕೆ ಪ್ರಾಣ ತೊರೆದ್ದಾನೆ.

ಇನ್ನು ನಿರಂಜನ್ ಅವರೊಂದಿಗೆ ಕಳೆದ ಮೂರು ವರ್ಷದ ಹಿಂದಷ್ಟೆ ಜೀವನ ಹಂಚಿಕೊಂಡಿದ್ದ ರಾಧಿಕಾ ಅವರಿಗೆ ವಿಷಯ ಅರಗಿಸಿಕೊಳ್ಳಲು ಈ ವರೆಗೆ ಸಾಧ್ಯವಾಗಿಲ್ಲ. ಇವರಿಬ್ಬರ ದಾಂಪತ್ಯಕ್ಕೆ ಸಾಕ್ಷಿಯಾದಂತಹ ಎರಡು ವರ್ಷದ ಕಂದಮ್ಮ ವಿಸ್ಮಯಳಿಗೆ ತಂದೆ ಕಾಲನ ಕರೆಗೆ ಹೊರಟ ಬಗ್ಗೆ ಪರಿವೆಯೇ ಇಲ್ಲ. ನಿರಂಜನ್ ಅವರ ಸಹೋದರ, ಸಹೋದರಿ, ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಒಂದು ಕಡೆ ಹೆಮ್ಮೆಯಿಂದ ಮಾತನಾಡು ತ್ತಾರೆ, ಇನ್ನೊಂದು ಕಡೆ ಬಿಕ್ಕುತ್ತಾರೆ.

ವಿಷಯ ತಿಳಿಯುತ್ತಿದ್ದಂತೆ ಕುಟುಂಬ ವರ್ಗದ ಕೆಲ ವರು, ಆತ್ಮೀಯ ವರ್ಗದವರು ಬೆಂಗಳೂರಿನ ದೊಡ್ಡಬೊಮ್ಮಸಂದ್ರದಲ್ಲಿನ ಶಿವರಾ ಜನ್ ಅವರಿರುವ ಮನೆಗೆ ಧಾವಿಸಿದ್ದಾರೆ. ಕೇರಳ ಮೂಲದ ಬಿಇಎಲ್ ನಿವೃತ್ತ ಉದ್ಯೋಗಿ ಶಿವರಾಜನ್ ಹಾಗೂ ಪಾರ್ವತಿ ಅವರಿಗೆ ನಾಲ್ವರು ಮಕ್ಕಳು. ಇವರಲ್ಲಿ ಹುತಾತ್ಮ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕುಮಾರ್ 2ನೇ ಪುತ್ರ. ಮೊದಲನೇ ಪುತ್ರ ಶರತ್ ಚಂದ್ರ ಏರ್ ಫೋರ್ಸ್‍ನಲ್ಲಿ ಅಧಿಕಾರಿಯಾಗಿದ್ದಾರೆ. ಮೂರನೇ ಮಗ ಶಶಾಂಕ್ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಸಹೋದರಿ ಭಾಗ್ಯಲಕ್ಷ್ಮೀ ಮದುವೆಯಾಗಿ ಬೆಂಗಳೂರಿನಲ್ಲೇ ವಾಸವಾಗಿದ್ದಾರೆ.

ಬೆಂಗಳೂರು ಶಿಕ್ಷಣ: ಹುತಾತ್ಮ ನಿರಂಜನ್ ಕುಮಾರ್ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನಲ್ಲಿ ಬಿಎಎಲ್‍ನಲ್ಲಿ ಮುಗಿಸಿದ್ದರು. ಮುಂದಿನ ವ್ಯಾಸಂಗವನ್ನು ಮಲ್ಲೇಶ್ವರಂನ ಬಿ.ಪಿ.ಇಂಡಿಯನ್ ಪಬ್ಲಿಕ್ ಸ್ಕೂಲ್‍ನಲ್ಲಿ ಮುಗಿಸಿ, ಬಿಇ ಪದವಿ ಪಡೆದು 12 ವರ್ಷಗಳ ಹಿಂದೆ ಮದ್ರಾಸ್ ಎಂಜಿನಿಯರ್ ಗ್ರೂಪ್‍ನಲ್ಲಿ ಸೇನೆಗೆ ಸೇರಿದ್ದರು. ನಂತರ ಕೆಲ ವರ್ಷಗಳ ಹಿಂದೆ ಇವರ ಕಾರ್ಯಕ್ಷಮತೆ ಆಧಾರದ ಮೇಲೆ ರಾಷ್ಟ್ರೀಯ ಭದ್ರತಾ ಪಡೆಗೆ ಬಡ್ತಿ ಪಡೆದರು. ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. 3 ವರ್ಷಗಳ ಹಿಂದೆ ಡಾ. ರಾಧಿಕಾರನ್ನು ಮದುವೆಯಾಗಿದ್ದರು.

ಹುತಾತ್ಮ ಯೋಧನ ಪಾರ್ಥಿವ ಶರೀರವನ್ನು ವಿಶೇಷ ವಿಮಾನದಲ್ಲಿ ಭಾನುವಾರ ರಾತ್ರಿ 11.30ಕ್ಕೆ ತರಲಾಯಿತು.
ನಂತರ ಕಮಾಂಡೋ ಮಿಲಿಟರಿ ಆಸ್ಪತ್ರೆಗೆ ಮೃತ ದೇಹವನ್ನು ಕೊಂಡೊಯ್ಯಲಾಯಿತು.

ಸೋಮವಾರ ಬೆಳಿಗ್ಗೆ ಮರಣೋತ್ತರ ಪರೀಕ್ಷೆ
ನಂತರ ಸೇನೆಯಿಂದ ಗೌರವ ಸಲ್ಲಿಕೆ
ಸೇನೆ ವಿಧಿವಿಧಾನದ ಬಳಿಕ ನಿರಂಜನ್ ಅವರ ಮನೆಯಲ್ಲಿ ನಿವಾಸಕ್ಕೆ ಮೃತ ದೇಹ ವೀಕ್ಷಣೆಗೆ ಅವಕಾಶ
ಅಂತಿಮ ದರ್ಶನಕ್ಕೆ ಸಾರ್ವಜನಿಕ ಸಂಖ್ಯೆ ಹೆಚ್ಚಾದಲ್ಲಿ ವಿದ್ಯಾರಣ್ಯಪುರ ಮೈದಾನದಲ್ಲಿ ಅವಕಾಶ
ಅಂತಿಮ ದರ್ಶನದ ಬಳಿಕ ರಸ್ತೆ ಅಥವಾ ವಾಯು ಮಾರ್ಗದಲ್ಲಿ ಪಾರ್ಥಿವ ಶರೀರವನ್ನು ಸ್ವಗ್ರಾಮ ಕೇರಳದ ಪಾಲಕಡ್ ಜಿಲ್ಲೆಯ ಎಳಂಬರ್ಸಿ ರವಾನೆ
ಸಂಜೆ ವೇಳೆ ಅಂತ್ಯಕ್ರಿಯೆ

Write A Comment