
ಬೆಂಗಳೂರು: ಕೂಲಿ ಕಾರ್ಮಿಕನೊಬ್ಬ ಮೈಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿ ಪತ್ನಿಯನ್ನು ಕೊಲ್ಲಲು ಯತ್ನಿಸಿದ ಘಟನೆ ಎಲೆಕ್ಟ್ರಾನಿಕ್‌ಸಿಟಿ ಸಮೀಪದ ಬೆಟ್ಟದಾಸನಪುರದಲ್ಲಿ ಶನಿವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಆತನಿಗೂ ಬೆಂಕಿ ತಗುಲಿ ಗಾಯಗಳಾಗಿವೆ.
ಹಿಂದೂಪುರ ಮೂಲದ ರಾಧಾ (40) ಹಾಗೂ ಕೊಂಡಪ್ಪ (45) ಗಾಯಗೊಂಡವರು. ರಾಧಾ ಅವರ ದೇಹ ಶೇ 40ರಷ್ಟು ಸುಟ್ಟು ಹೋಗಿದ್ದು, ಸ್ಥಿತಿ ಗಂಭೀರವಾಗಿದೆ. ಇಬ್ಬರೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ದಂಪತಿ, ಬೆಟ್ಟದಾಸನಪುರದಲ್ಲಿ ನೆಲೆಸಿದ್ದಾರೆ. ಅವರ ಮಗ ಹಿಂದೂಪುರದ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದಾನೆ.
ಪತ್ನಿ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಅನುಮಾನ ಹೊಂದಿದ್ದ ಕೊಂಡಪ್ಪ, ಇದೇ ವಿಚಾರವಾಗಿ ಮನೆಯಲ್ಲಿ ನಿತ್ಯ ಜಗಳವಾಡುತ್ತಿದ್ದ. ಶನಿವಾರ ರಾತ್ರಿಯೂ ಇದೇ ಕಾರಣಕ್ಕೆ ಜಗಳ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಕುಪಿತಗೊಂಡ ಆತ, ಮನೆಯಲ್ಲಿದ್ದ ಡೀಸೆಲ್ ಕ್ಯಾನ್ ತಂದು ಪತ್ನಿಯ ಮೈಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಜಗಳದ ವೇಳೆ ಕೊಂಡಪ್ಪನ ಮೇಲೂ ಡೀಸೆಲ್ ಚೆಲ್ಲಿದ್ದರಿಂದ ಆತನಿಗೂ ಬೆಂಕಿ ಹೊತ್ತಿಕೊಂಡಿದೆ. ದಂಪತಿಯ ಚೀರಾಟ ಕೇಳಿ ಎಚ್ಚರಗೊಂಡ ಅಕ್ಕಪಕ್ಕದ ಮನೆಯವರು, ನೀರೆರಚಿ ಬೆಂಕಿ ನಂದಿಸಿದ್ದಾರೆ. ನಂತರ ಆಂಬುಲೆನ್ಸ್‌ನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಮಗನಿಗೆ ಕರೆ ಮಾಡಿ ವಿಷಯ ತಿಳಿಸಿದ್ದೇವೆ. ಗಾಯಾಳು ರಾಧಾ ಅವರ ಹೇಳಿಕೆ ಆಧರಿಸಿ ಆರೋಪಿ ವಿರುದ್ಧ ಕೊಲೆ ಯತ್ನ (ಐಪಿಸಿ 307) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಲೆಕ್ಟ್ರಾನಿಕ್‌ಸಿಟಿ ಪೊಲೀಸರು ತಿಳಿಸಿದರು.