ಕರ್ನಾಟಕ

ಕೈದಿಗಳಿಗೆ ಬಿಡುಗಡೆ ಭಾಗ್ಯ : ಜೈಲಿನಲ್ಲಿ ಗೃಹ ಸಚಿವರ ಹೊಸವರ್ಷಾಚರಣೆ

Pinterest LinkedIn Tumblr

21

ಬೆಂಗಳೂರು: ಸಹೋದ್ಯೋಗಿ ಸಚಿವರು, ಹಿರಿಯ ಅಧಿಕಾರಿಗಳ ಜತೆ ಹೊಸ ವರ್ಷ ಆಚರಿಸಿಕೊಳ್ಳಬೇಕಾಗಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಕೈದಿಗಳ ಜತೆ ಹೊಸ ವರ್ಷ ಆಚರಿಸಿ ಹೊಸತನಕ್ಕೆ ಮುನ್ನುಡಿ ಬರೆದಿದ್ದಾರೆ.

ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿದ ಗೃಹ ಸಚಿವರು ಸುಮಾರು ೨ ಗಂಟೆಗಳ ಕಾಲ ಅಲ್ಲಿನ ಅಡುಗೆ ಕೋಣೆ, ಗ್ರಂಥಾಲಯ, ಬ್ಯಾರಕ್‌ಗಳು, ಆಸ್ಪತ್ರೆ, ಶೌಚಾಲಯ ಸೇರಿದಂತೆ ಎಲ್ಲೆಡೆ ತೆರಳಿ ಅಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿದರು.

ಗ್ರಂಥಾಲಯದಲ್ಲಿ ಪುಸ್ತಕಗಳ ಸಂಖ್ಯೆ ಹೆಚ್ಚಿಸಿ ಉತ್ತಮ ಓದಿನ ವಾತಾವರಣ ಕಲ್ಪಿಸುವುದರ ಜೊತೆಗೆ ಶಿಕ್ಷಣಕ್ಕೆ ಆದ್ಯತೆ ನೀಡುವಂತೆ ಜೈಲಿನ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜೈಲಿನಲ್ಲಿದ್ದ ಸುಮಾರು ೪ಸಾವಿರಕ್ಕೂ ಹೆಚ್ಚು ಕೈದಿಗಳಿಗೆ ಸಿಹಿ ಹಂಚಿದ ನಂತರ ಮಾತನಾಡಿದ ಪರಮೇಶ್ವರ್ ಅವರು, ಸನ್ನಡತೆ ಹೊಂದಿರುವ ಕೈದಿಗಳನ್ನು ಗಣರಾಜ್ಯೋತ್ಸವದಂದು ಬಿಡುಗಡೆ ಮಾಡಲು ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ಸಚಿವ ಸಂಪುಟದ ಒಪ್ಪಿಗೆ ಪಡೆಯಲಾಗುವುದು ಎಂದು ಭರವಸೆ ನೀಡಿದರು.

ಜೈಲಿನಲ್ಲಿ ಖಾಲಿ ಇರುವ ೩೫೦ ಸಿಬ್ಬಂದಿ ನೇಮಕಾತಿ ಆದೇಶವನ್ನು ಹೊರಡಿಸಲಾಗಿದೆ. ಜೈಲಿನ ಲೋಪದೋಷಗಳ ನಿವಾರಣೆಗೆ ಕೆಲವು ನಿಯಮಗಳನ್ನು ಮಾರ್ಪಾಟು ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಆಕಸ್ಮಿಕ ಆಘಾತಗಳಿಗೆ ಒಳಗಾಗಿ ಅಪರಾಧ ಕೃತ್ಯಕ್ಕಿಳಿದು ಜೈಲಿಗೆ ಸೇರಿರುವ ಕೈದಿಗಳು ಶಿಕ್ಷಣ ಕಲಿತು ಸನ್ನಡತೆಯಿಂದ ನಡೆದುಕೊಳ್ಳಬೇಕು. ಜೈಲಿನಿಂದ ಹೊರಬಂದ ನಂತರ ಸಮಾಜಕ್ಕೆ ಮಾದರಿಯಾಗಿ ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು.

ರೋಗ ಪೀಡಿತ ಕೈದಿಗಳಿಗೆ ಉತ್ತಮ ಚಿಕಿತ್ಸೆ ದೊರಕುವಂತೆ ಮಾಡಿ ಆದಷ್ಟು ಶೀಘ್ರ ಅವರ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಕಾರಾಗೃಹಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕಮಲ್ ಪಂತ್ ಅವರಿದ್ದರು.

Write A Comment