ಕರ್ನಾಟಕ

ಹಣ ಪಡೆದು ಕೆಲಸ ಮಾಡಿದರೆ ಹುಷಾರ್ : ಪೊಲೀಸರಿಗೆ ಪರಮೇಶ್ವರ್ ಎಚ್ಚರಿಕೆ

Pinterest LinkedIn Tumblr

parameshಬೆಂಗಳೂರು, ಡಿ.೩೦-ಯಾವುದೇ ಕಾರಣಕ್ಕೂ ಪೊಲೀಸರು ಹಣ ಪಡೆದು ಕೆಲಸ ಮಾಡುವುದನ್ನು ಸಹಿಸುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಎಚ್ಚರಿಕೆ ನೀಡಿದರು. ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಅಪರಾಧ ತಡೆ ಮಾಸಾಚರಣೆ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಂದು ವೇಳೆ ಹಣ ಪಡೆದು ಕೆಲಸ ಮಾಡುವುದು ಕಂಡುಬಂದರೆ ಕಠಿಣ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಸಾರ್ವಜನಿಕರ ಕೆಲಸ ಮಾಡಲು ವಿನಾಕಾರಣ ಅಲೆದಾಡಿಸುವುದು, ಎಫ್‌ಐಆರ್ ದಾಖಲಿಸಲು ವಿಳಂಬ ಮಾಡುವುದು ಕೂಡ ಸಹಿಸುವುದಿಲ್ಲ ಎಂದರು. ಯಾರೋ ಒಬ್ಬರು ಇಂತಹ ಕೆಲಸ ಮಾಡುವುದರಿಂದ ಇಡೀ ವ್ಯವಸ್ಥೆಗೆ ಹಾಗೂ ಇಲಾಖೆಗೆ ಕೆಟ್ಟ ಹೆಸರು ಬರಲಿದೆ ಎಂದರು.
ಬೆಂಗಳೂರು ಸೇರಿದಂತೆ ಯಾವುದೇ ನಗರಕ್ಕೆ ಬರಬಹುದು. ಇಂಥವರ ಮೇಲೆ ಹೆಚ್ಚಿನ ನಿಗಾ ಹಾಗೂ ಎಚ್ಚರಿಕೆಯಿಂದ ಇರಬೇಕು. ಕೋಮು ಸಂಘರ್ಷದಂತಹ ಘಟನೆಗಳು ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಪ್ರತಿ ಸಮುದಾಯದಲ್ಲೂ ಕೂಡ ಶಾಂತಿ ಕದಡುವವರು ಇರುತ್ತಾರೆ. ನಗರದ ಹೊರವಲಯಗಳಲ್ಲಿ ಹೆಚ್ಚಿನ ನಿಗಾ ಇಡಬೇಕು ಎಂದು ತಿಳಿಸಿದರು.
ಪೊಲೀಸ್ ಠಾಣೆಗಳಲ್ಲಿ ಯಾವುದೇ ಕಾರಣಕ್ಕೂ ಉದಾಸೀನ ಪ್ರವೃತ್ತಿ ತಾಳದೆ ನಿಯಮಗಳ ಚೌಕಟ್ಟಿನಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ತಾವು ಠಾಣೆಯೊಂದಕ್ಕೆ ಭೇಟಿ ನೀಡಿದ್ದಾಗ ಪೊಲೀಸ್ ಕೈಪಿಡಿಗೆ ಧೂಳು ಹಿಡಿದಿತ್ತು. ಆ ಧೂಳು ಕೊಡವಿ ಕೊಟ್ಟರು. ಅಂತಹ ಕೆಲಸ ಮಾಡಬೇಡಿ. ನಿಮ್ಮ ಮನಸ್ಸಿಗೂ ಕೂಡ ಧೂಳು ಕೂರಬಾರದು ಎಂದು ಹೇಳಿದರು. ಅಪರಾಧ ತಡೆಯುವುದು, ಮಹಿಳೆಯರು-ಮಕ್ಕಳು, ಸಾರ್ವಜನಿಕರ ಆಸ್ತಿ-ಪಾಸ್ತಿ ರಕ್ಷಣೆಗೆ ಗಮನಹರಿಸಬೇಕು. ಇದು ಪೊಲೀಸ್ ಇಲಾಖೆ ಜವಾಬ್ದಾgರಿ ಕೂಡ ಆಗಿದೆ ಎಂದು ತಿಳಿಸಿದರು.
ಗಾರ್ಡನ್‌ಸಿಟಿ ಆಗಿದ್ದ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಾರ್ಬೇಜ್ ಸಿಟಿ ಎಂದು ಬಿಂಬಿತವಾಗುತ್ತಿದೆ. ಅತ್ಯಾಚಾರ, ಅಪರಾಧ, ಕಳ್ಳತನ, ರಾಬರಿಯಂತಹ ಪ್ರಕರಣಗಳು ಕಡಿಮೆಯಾದರೆ ಸಾಲದು, ನಡೆಯದಂತೆ ಎಚ್ಚರಿಕೆ ವಹಿಸಬೇಕು. ಕೆಟ್ಟ ಹೆಸರು ತರಲು ಒಂದೇ ಒಂದು ಘಟನೆ ಸಾಕಾಗುತ್ತದೆ. ಸುಮಾರು ಒಂದೂವರೆ ಕೋಟಿಯಷ್ಟು ಜನಸಂಖ್ಯೆಯಿದ್ದು, ಬೆಂಗಳೂರು ನಗರದಲ್ಲಿ ಸಂಚಾರ ನಿಯಂತ್ರಣ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದು ಸವಾಲಿನ ಕೆಲಸ. ಆದರೂ ಕುಂದುಕೊರತೆಗಳ ಬಗ್ಗೆ ಗಮನಹರಿಸದೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್
ಬೆಂಗಳೂರು, ಡಿ.೩೦- ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ಹೊಸ ವರ್ಷಾಚರಣೆ ವೇಳೆ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ಎಲ್ಲಾ ಕಡೆ ಸೂಕ್ತ ಮತ್ತು ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುವುದು ಎಂದರು.
ಕಾನೂನು ಬಾಹಿರ ಚಟುವಟಿಕೆ ನಡೆಯದಂತೆ ಮತ್ತು ಸಂಚಾರ ನಿಯಂತ್ರಿಸಲು ಎಲ್ಲಾ ರೀತಿಯ ಕ್ರಮಕೈಗೊಂಡಿರುವುದಾಗಿ ಅವರು ತಿಳಿಸಿದರು.

Write A Comment