ಕರ್ನಾಟಕ

ಸಿದ್ದರಾಮಯ್ಯ ನಾನು ಹಾಕಿರೋ ಸವಾಲು ಸ್ವೀಕರಿಸಲಿ: ಕೆ.ಎಸ್.ಈಶ್ವರಪ್ಪ

Pinterest LinkedIn Tumblr

eshwarappaಬೆಂಗಳೂರು: `ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುರುಡೆ ಬಿಡುವುದನ್ನು ಬಿಟ್ಟು ತಾವು ಹಾಕಿರುವ ಸವಾಲು ಸ್ವೀಕರಿಸಲಿ’ ಎಂದು ಮೇಲ್ಮನೆ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರು ಮತ್ತೆ ಸವಾಲು ಎಸೆದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್‍ಗಿಂತ ಒಂದು ಸ್ಥಾನ ಹೆಚ್ಚಿಗೆ ಪಡೆಯದಿದ್ದರೆ ರಾಜಕೀಯ ಸನ್ಯಾಸ ಸ್ವೀಕರಿಸುವುದಾಗಿ ಹೇಳಿದ್ದೆ. ಅದಕ್ಕೆ ಈಗಲೂ ನಾನು ಬದ್ಧ. ಆದರೆ ಮುಖ್ಯಮಂತ್ರಿಯವರು ತಮ್ಮ ಸವಾಲು ಸ್ವೀಕರಿಸುವ ಬದಲು `ಈಶ್ವರಪ್ಪ ಸಿಕ್ಕಾಕಂಡ’ ಎಂದು ಹೇಳಿದ್ದಾರೆ.

ಸಿಕ್ಕಿ ಹಾಕಿಕೊಳ್ಳುವ ಪ್ರಶ್ನೆಯೇ ಇಲ್ಲ. ನನ್ನ ಜೀವಮಾನದಲ್ಲಿಯೇ ಇಲ್ಲ ಎಂದು ಹೇಳಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿಯೂಬಿಜೆಪಿಗೆ ಹೆಚ್ಚು ಸ್ಥಾನ ಬರಲ್ಲ, ನರೇಂದ್ರ ಮೋದಿ ಪ್ರಧಾನಿ ಆಗಲ್ಲ ಎಂದು ಬುರುಡೆ ಬಿಟ್ಟಿದ್ದರು. ಬಿಬಿಎಂಪಿ ಚುನಾವಣೆಯಲ್ಲಿಯೂ ಬಿಜೆಪಿಗೆ ಅಧಿಕ ಸ್ಥಾನ ಬರಲ್ಲವೆಂದು ಬುರುಡೆ ಮಾತು ಹೇಳಿದ್ದರು. ಏನಾಯಿತು? ಎಂಬುದನ್ನು ತಿಳಿದುಕೊಂಡು ಮಾತನಾಡಲಿ. ಈ ಚುನಾವಣೆಯಲ್ಲಿಯೂ ಬಿಜೆಪಿಗೆ ಕಾಂಗ್ರೆಸ್‍ಗಿಂತ ಹೆಚ್ಚು ಸ್ಥಾನಗಳು ಬರಲಿವೆ. ಬುರುಡೆ ಸಿದ್ದರಾಮಯ್ಯ ಸವಾಲು ಸ್ವೀಕರಿಸಲಿ ಎಂದು ತಾಕೀತು ಮಾಡಿದರು.

ರೈತರ ಆತ್ಮಹತ್ಯೆ, ಅಕ್ರಮ ಮರಳುಗಾರಿಕೆ ಹಾಗೂ ಆಡಳಿತ ವೈಫಲ್ಯಕ್ಕೆ ಈ ಚುನಾವಣೆಯಲ್ಲಿ ಉತ್ತರ ಸಿಗಲಿದೆ. ಕಾಂಗ್ರೆಸ್‍ಗಿಂತ ಹೆಚ್ಚು ಸ್ಥಾನ ಬಂದರೆ ಖಂಡಿತವಾಗಿಯೂ ಆ ಫಲಿತಾಂಶ ಜನಾದೇಶ ಆಗುತ್ತದೆ. ನಾವೇನು ರಾಜಿನಾಮೆ ಕೊಟ್ಟು ಮನೆಗೆ ಹೋಗಲಿ ಅಂಥ ಹೇಳುವುದಿಲ್ಲ, ಆಡಳಿತ ವೈಫಲ್ಯಕ್ಕೆ ರಾಜ್ಯದ ಜನತೆಯ ಕ್ಷಮೆ ಕೇಳಿ ಉಳಿದ ಅವಧಿಯಲ್ಲಾದರೂ ಒಳ್ಳೆಯ ಕೆಲಸ ಮಾಡಲಿ ಎಂದು ಆಗ್ರಹಿಸಿದರು.

Write A Comment