ಕರ್ನಾಟಕ

ಮುಕ್ತ ಮನಸು ಮಾಡಿ ಮುಖ್ಯಕಾರ್ಯದರ್ಶಿ ಹುದ್ದೆ ಕನ್ನಡಿಗರಿಗೆ ನೀಡಿ

Pinterest LinkedIn Tumblr

kann

ಬೆಂಗಳೂರು, ಡಿ.21-ಕಾರ್ಯಾಂಗದ ಮುಖ್ಯಸ್ಥರಾಗಿ (ಮುಖ್ಯ ಕಾರ್ಯದರ್ಶಿ) ಕನ್ನಡಿಗರೊಬ್ಬರು ನೇಮಕವಾಗುತ್ತಾರೆಂಬುದು ಹೆಮ್ಮೆಯ ವಿಷಯವಾಗಬೇಕು. ಅಂತಹ ಅವಕಾಶ ಕನ್ನಡಿಗರೊಬ್ಬರಿಗೆ ಸಿಕ್ಕರೆ ಸರ್ಕಾರವು  ಸಹಕಾರ ನೀಡಬೇಕು. ಪೂರಕವಾಗಿ ಸ್ಪಂದಿಸಿ ನೇಮಕಕ್ಕೆ ಅವಕಾಶ ಕಲ್ಪಿಸಬೇಕು.  ನಾಡಿನ ನಾಡಿ ಮಿಡಿತದ ಅರಿವು ನಮ್ಮ ರಾಜ್ಯದ ಐಎಎಸ್ ಅಧಿಕಾರಿಗಳಿಗೆ ಹೆಚ್ಚಾಗಿರುತ್ತದೆ. ರಾಜ್ಯದ ಸಮಸ್ಯೆ, ಅಭಿವೃದ್ಧಿಗೆ ಕೈಗೊಳ್ಳಬೇಕಾದ ಜ್ಞಾನ ಬೇರೆ ರಾಜ್ಯದ ಅಧಿಕಾರಿಗಳಿಗಿಂತ ನಮ್ಮ ನಾಡಲ್ಲೇ ಹುಟ್ಟಿ, ಬೆಳೆದ ಅಧಿಕಾರಿಗಳಿಗೆ ಹೆಚ್ಚಾಗಿರುತ್ತದೆ. ಕಾರ್ಯಾಂಗ ನಿರ್ವಹಣೆಗೆ ನಮ್ಮ ನಾಡಿನ ಅಧಿಕಾರಿಯೊಬ್ಬರಿಗೆ ಅವಕಾಶ ಸಿಕ್ಕಿದರೆ ಶಾಸಕಾಂಗ ಹೆಮ್ಮೆ  ಪಡಬೇಕು. ಅವರ ನೇಮಕಕ್ಕೆ ಮುಂದಾಗಬೇಕು.

ಅಂತಹ ಒಂದು ಅವಕಾಶ ದಶಕಗಳ ನಂತರ ಸೇವಾ ಹಿರಿತನ  ಹಾಗೂ ಎಲ್ಲಾ ಅರ್ಹತೆ ಹೊಂದಿರುವ ಅಪ್ಪಟ ಕನ್ನಡಿಗ,
ಐಎಎಸ್ ಅಧಿಕಾರಿ ವಿ.ಉಮೇಶ್ ಅವರಿಗೆ ಸಿಕ್ಕಿದೆ.

ಸರ್ಕಾರ ಮುಕ್ತ ಮನಸ್ಸು ಮಾಡಿ  ಅವರಿಗೆ ಅವಕಾಶ ನೀಡಬೇಕು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಪರ್ಯಾಯ ಚಿಂತನೆ ನಡೆಸಿರುವುದು ವಿಪರ್ಯಾಸ. ನಮ್ಮ ರಾಜ್ಯದ ಐಎಎಸ್ ಅಧಿಕಾರಿಯಾದ ವಿ.ಉಮೇಶ್ ಅವರನ್ನು ಕಡೆಗಣಿಸಿ ಬೇರೆ ರಾಜ್ಯದ ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ಹುದ್ದೆ ನೀಡಲು ಮುಂದಾಗಿರುವುದು ಎಷ್ಟು ಸಮಂಜಸ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಎಲ್ಲಾ ವಿಷಯಗಳಲ್ಲೂ ಜಾತಿ ಸಮೀಕರಣ ಮಾಡುವುದೂ ಕೂಡ ತಪ್ಪು  ಎಂಬ ಮಾತುಗಳು ರಾಜ್ಯದ ಅಧಿಕಾರಿ ವಲಯಗಳಲ್ಲಿ ಕೇಳಿ ಬಂದಿವೆ. ಬೇರೆ ರಾಜ್ಯದ ಅಧಿಕಾರಿಗಳು ದಕ್ಷರಲ್ಲ ಎನ್ನುವ ಆಕ್ಷೇಪ ನಮ್ಮದಲ್ಲ. ಆದರೆ ನಾಡಿನ ಅಧಿಕಾರಿಯೊಬ್ಬರಿಗೆ ಈಗ ಅವಕಾಶ ತಪ್ಪಿದರೆ ಮುಂದಿನ 17 ವರ್ಷಗಳ ಕಾಲ ಯಾರಿಗೂ ಈ ಉನ್ನತ ಹುದ್ದೆ ಅಲಂಕರಿಸುವ ಅವಕಾಶವೇ ದಕ್ಕುವುದಿಲ್ಲ. ಇದನ್ನು ಸರ್ಕಾರ ಮನಗಾಣಬೇಕೆಂಬುದು ಹಿರಿಯ ಅಧಿಕಾರಿಗಳ ವಲಯದ ಆಗ್ರಹವಾಗಿದೆ.

ಸರ್ಕಾರದ ಸಕಾರಾತ್ಮಕ ನಿಲುವು ಕೂಡ ಅಗತ್ಯವಾಗಿದೆ. ನಾಡು-ನುಡಿ, ನೆಲ-ಜಲ-ಭಾಷೆ, ಸಂಸ್ಕೃತಿ ಬಗ್ಗೆ ಅಪಾರ ಒಲವು ಹೊಂದಿರುವ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಕನ್ನಡವನ್ನು ಜತನ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾಡಿನ ಅಧಿಕಾರಿಗಳ ಬಗ್ಗೆ ಒಲವಿರಬೇಕಿತ್ತು. ಒಲವಿರುತ್ತದೆ ಎಂಬ ಭಾವನೆಯೂ ಇತ್ತು. ಆದರೆ ಹಿರಿಯ ಐಎಎಸ್ ಅಧಿಕಾರಿ ವಿ.ಉಮೇಶ್ ಅವರಿಗೆ ಮುಖ್ಯ ಕಾರ್ಯದರ್ಶಿ ಹುದ್ದೆ ತಪ್ಪಿಸಿ ಬೇರೆಯವರಿಗೆ ಆದ್ಯತೆ ನೀಡುತ್ತಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.

ಹಾಲಿ ಮುಖ್ಯ  ಕಾರ್ಯದರ್ಶಿ ಕೌಶಿಕ್ ಮುಖರ್ಜಿ ನಿವೃತ್ತರಾದರೂ, ಅವರಿಗೆ 3 ತಿಂಗಳ ಅವಧಿಯನ್ನು ಹೆಚ್ಚುವರಿಯಾಗಿ ವಿಸ್ತರಣೆ ಮಾಡಲಾಗಿತ್ತು. ನಮ್ಮ ರಾಜ್ಯದವರೇ ಆದ ಉಮೇಶ್ ಅವರಿಗೆ ಮುಖ್ಯಕಾರ್ಯದರ್ಶಿ ಹುದ್ದೆ ನೀಡುವ ಎಲ್ಲಾ ಅರ್ಹತೆ ಇದ್ದರೂ ಸರ್ಕಾರ ಪರ್ಯಾಯ ಚಿಂತನೆ ಮಾಡುತ್ತಿರುವುದು ಏಕೆ ಎಂಬುದು ಅರ್ಥವಾಗುತ್ತಿಲ್ಲ. ಉಮೇಶ್ ಅವರಿಗೆ ಅಧಿಕಾರಾವಧಿ ಕಡಿಮೆ ಇದೆ ಎಂಬ ಕಾರಣಕ್ಕೆ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಪರಿಗಣಿಸದಿರುವುದು ಅಧಿಕಾರಿ ವಲಯಗಳಲ್ಲಿ ಅಸಮಾಧಾನ ಮೂಡಿಸಿದೆ. ಎಷ್ಟೇ ಕಾಲಾವಕಾಶವಿರಲಿ ಅಷ್ಟಾದರೂ ನಮ್ಮ ಕನ್ನಡದ ಅಧಿಕಾರಿಯೊಬ್ಬರು ಮುಖ್ಯ ಕಾರ್ಯದರ್ಶಿಯಾಗಬೇಕು ಎಂಬ ಚಿಂತನೆ ಆಳುವವರಿಗೆ ಇರಬೇಕು. ಆದರೆ ಬೇರೆ ಬೇರೆ ಸಮೀಕರಣಗಳನ್ನು ಲೆಕ್ಕ ಹಾಕಿ ಬೇರೆಯವರನ್ನು ನೇಮಿಸಿ ನಮ್ಮವರಿಗೆ ಅನ್ಯಾಯ ಮಾಡುತ್ತಿರುವುದು ಒಂದು ರೀತಿಯಲ್ಲಿ ಕನ್ನಡಿಗರಿಗೇ ಮಾಡುತ್ತಿರುವ ಅಪಮಾನ ಎಂದೇ ವ್ಯಾಖ್ಯಾನಿಸಲಾಗಿದೆ.

ಕಡಿಮೆ ಅವಧಿ ಇರುವ ಅಧಿಕಾರಿಯನ್ನು ಉನ್ನತ ಹುದ್ದೆಗೆ ನೇಮಿಸುವುದು ಹೊಸದೇನಲ್ಲ. ಈ ಹಿಂದೆ ಐಎಎಸ್ ಅಧಿಕಾರಿಯಾಗಿದ್ದ ಮಾಲತಿದಾಸ್ ಅವರಿಗೆ ಕೇವಲ 2 ತಿಂಗಳ ಅಧಿಕಾರಾವಧಿ ಇತ್ತು. ಅಂತಹ ಸಂದರ್ಭದಲ್ಲೇ ಅವರನ್ನು ಮುಖ್ಯಕಾರ್ಯದರ್ಶಿ ಹುದ್ದೆಗೆ ಸರ್ಕಾರ ನೇಮಿಸಿತ್ತು.  ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ವಿ.ಉಮೇಶ್ ರವರಿಗೆ ಮುಖ್ಯ ಕಾರ್ಯದರ್ಶಿ ಹುದ್ದೆ  ನೀಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮುಕ್ತ ಮನಸ್ಸು ಮಾಡಬೇಕು. ಉನ್ನತ ಸ್ಥಾನದಲ್ಲಿ ಕನ್ನಡಿಗ ಅಧಿಕಾರಿಗಳಿದ್ದರೆ ರಾಜ್ಯಕ್ಕೆ  ಹೆಚ್ಚು ಅನುಕೂಲವಾಗುತ್ತದೆ.

ತಮಿಳುನಾಡಿನಲ್ಲಿ ಆ  ರಾಜ್ಯದ  ಅಧಿಕಾರಿಗಳಿಗೆ ಹೆಚ್ಚು ಅವಕಾಶ ನೀಡಲಾಗುತ್ತದೆ. ಹಾಗಾಗಿಯೇ ಕೇಂದ್ರ ಸರ್ಕಾರದ ಅನುದಾನ ಅಭಿವೃದ್ಧಿ ಕೆಲಸಗಳು ಹೆಚ್ಚಾಗುತ್ತವೆ ಎಂಬ ಮಾತಿದೆ.  ಉತ್ತರ ಭಾರತ ಮೂಲದ ಅಧಿಕಾರಿಗಳು ಮುಖ್ಯ ಕಾರ್ಯದರ್ಶಿಗಳಾದರೆ ಕೇವಲ ಅಧಿಕಾರದ ದರ್ಪ ತೋರಿಸುತ್ತಾರೆ. ನಾಡಿನ ನೆಲ-ಜಲ-ಸಂಸ್ಕೃತಿ ವಿಷಯದ ಬಗ್ಗೆ ಕಾಳಜಿ ವಹಿಸುವುದಿಲ್ಲ.  ಆದರೆ ನಮ್ಮ ನೆಲದ ಸೊಗಡಿನ ಮಹಿಮೆ ಅರಿತಿರುವವರು ಮುಖ್ಯಕಾರ್ಯದರ್ಶಿಯಾದರೆ ಅವರ ಅಧಿಕಾರಾವಧಿಯಲ್ಲಾದರೂ ಒಂದಷ್ಟು  ಕಾಲ ನಾಡಿನ ಹಿರಿಮೆ, ಗರಿಮೆ ಮೆರೆಯಬಹುದು. ನಾಡಿನ ಸಮಸ್ಯೆಗಳಿಗೆ ಭಾವನಾತ್ಮಕವಾಗಿ ಸ್ಪಂದಿಸುವ ಗುಣ ಈ ನೆಲದ ಅಧಿಕಾರಿಗಳಿರುತ್ತದೆ. ಅದಕ್ಕಾಗಿ ನಮ್ಮವರಿಗೆ ಆದ್ಯತೆ ನೀಡಬೇಕೆಂಬುದು ಅಧಿಕಾರಿಗಳ ವಲಯದ ಆಗ್ರಹವೂ ಆಗಿದೆ.

ಶಾಸ್ತ್ರೀಯ ಭಾಷೆಗೆ ಸ್ಥಾನಮಾನ ಸಿಕ್ಕರೂ ಅದಕ್ಕೆ ಬರಬೇಕಿದ್ದ ನೂರಾರು ಕೋಟಿ ಅನುದಾನವನ್ನು ಪಡೆದುಕೊಳ್ಳಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ನಮ್ಮ ನಾಡಿನ ನಾಡಿಮಿಡಿತದ ಅಧಿಕಾರಿಯೊಬ್ಬರು ಉನ್ನತ ಸ್ಥಾನದಲ್ಲಿದ್ದರೆ ಈ ಪರಿಸ್ಥಿತಿ ಬರುವುದಿಲ್ಲ ಎಂಬ ಸಣ್ಣ ಉದಾಹರಣೆಯಷ್ಟೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಕನ್ನಡಿಗರಿಗೇ ಆದ್ಯತೆ ನೀಡಬೇಕು. ವಿ.ಉಮೇಶ್ ಅವರಿಗೆ ಬಂದೊದಗಿರುವ ಅವಕಾಶ ಕೈತಪ್ಪದಂತೆ  ನೋಡಿಕೊಳ್ಳಬೇಕು.   ಈ ರೀತಿಯ ಆಗ್ರಹ ಸಾಮಾಜಿಕ ತಾಣಗಳಲ್ಲಿ, ಸಾರ್ವಜನಿಕ ಚರ್ಚೆಗಳಲ್ಲಿ ಕೇಳಿ ಬಂದಿದೆ. ಅಧಿಕಾರಿ ವಲಯದಲ್ಲೂ ಒತ್ತಡ ಹೆಚ್ಚಾಗಿದೆ. ಸಾರ್ವಜನಿಕ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಕೂಡ ಆಗ್ರಹಿಸಿವೆ.   ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶಾಲ ಮನೋಭಾವ ಪ್ರದರ್ಶಿಸಬೇಕು. ಕನ್ನಡಿಗರಿಗೆ ಅವಕಾಶ ನೀಡಬೇಕು.

Write A Comment