ಬಳ್ಳಾರಿ, ಡಿ.15-ಕಾಂಗ್ರೆಸ್ನ ದುರಾಡಳಿತದಿಂದ ರಾಜ್ಯದ ಜನ ಬೇಸತ್ತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಬಿಜೆಪಿ ಮುಖಂಡ ಗೋವಿಂದ ಕಾರಜೋಳ ವಿಧಾನ ಪರಿಷತ್ ಚುನಾವಣೆಯಲ್ಲಿ 15 ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನೂತನ ಮದ್ಯ ಪರವಾನಗಿ ನೀಡಲು ಸರ್ಕಾರ ಮುಂದಾಗಿದೆ. ಇದು ಮರ್ಯಾದೆಗೇಡಿನ ವಿಷಯ. ಮಹಾತ್ಮಾಗಾಂಧಿಯವರ ರಾಮರಾಜ್ಯದ ಕನಸನ್ನು ನುಚ್ಚುನೂರು ಮಾಡಲು ಸರ್ಕಾರ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೆಂಡ ಮಾರಿ ಜನರನ್ನು ಲೂಟಿ ಮಾಡಿ ಸರ್ಕಾರ ನಡೆಸಬೇಕೇ ಎಂದು ಪ್ರಶ್ನಿಸಿದ ಗೋವಿಂದ ಕಾರಜೋಳ, ಚುನಾವಣೆಗಳಿಗೆ ಬೇಕಾದ ಹಣ ಸಂಗ್ರಹ ಮಾಡುವ ಉದ್ದೇಶದಿಂದ ನೂತನ ಮದ್ಯ ಪರವಾನಗಿಗಳನ್ನು ನೀಡಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.
ಮದ್ಯದಂಗಡಿಗಳಿಗೆ ಪರವಾನಗಿ ನೀಡಲು ಕಿಕ್ಬ್ಯಾಕ್ ಪಡೆಯುವ ಮೂಲಕ ಕೋಟ್ಯಂತರ ರೂ. ಸಂಗ್ರಹಿಸುವ ದುರುದ್ದೇಶವನ್ನು ಕಾಂಗ್ರೆಸ್ ಹೊಂದಿದೆ ಎಂದು ಹೇಳಿದ ಕಾರಜೋಳ ಅವರು, ದಿನದಿಂದ ದಿನಕ್ಕೆ ಈ ಪಕ್ಷದ ದುರಾಡಳಿತ ಹೆಚ್ಚಾಗುತ್ತಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆಂದು ತಿಳಿಸಿದರು.