ಕರ್ನಾಟಕ

ಬೆಳ್ಳಂಬೆಳಗ್ಗೆ ಪೊಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿ ಪೊಲೀಸರ ಚಳಿ ಬಿಡಿಸಿದ ಗೃಹ ಸಚಿವ ಪರಮೇಶ್ವರ್

Pinterest LinkedIn Tumblr

param

ಬೆಂಗಳೂರು, ಡಿ.1: ಬೆಳ್ಳಂಬೆಳಗ್ಗೆಯೆ ನಗರದ ವಿವಿಧ ಠಾಣೆಗಳಿಗೆ ದಿಢೀರ್ ಭೇಟಿ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಚಳಿಯಲ್ಲೂ ಪೊಲೀಸರಿಗೆ ಬಿಸಿ ಮುಟ್ಟಿಸಿದರು. ಪೊಲೀಸರ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆಯೆ ವಿವಿಧ ಠಾಣೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಡಿವಾಳ ಠಾಣೆಗೆ ಭೇಟಿ ನೀಡಿದ ವೇಳೆ ಡಿಸಿಪಿ ರೋಹಿಣಿ ಕಟೋಚ್‌ಸಪೆಟ್ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಇತ್ತೀಚೆಗೆ ಬಿಪಿಒ ಉದ್ಯೋಗಿ ಮೇಲೆ ಚಲಿಸುವ ವಾಹನದಲ್ಲೇ ನಡೆದ ಅತ್ಯಾಚಾರ ಪ್ರಕರಣ ಕುರಿತು ಸಚಿವರು ಮಾಹಿತಿ ಪಡೆದುಕೊಂಡಿದ್ದಾರೆ.

ಅಲ್ಲದೆ ಸರಗಳವು, ದರೋಡೆ, ರೌಡಿಶೀಟರ್‌ಗಳ ಹತ್ಯೆ ಸೇರಿದಂತೆ ಮಡಿವಾಳ ಠಾಣೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಪರಾಧ ಕೃತ್ಯಗಳು ನಡೆಯುತ್ತಿರುವ ಬಗ್ಗೆ ಡಿಸಿಪಿ ರೋಹಿಣಿ ಕಟೋಚ್ ಸಪೆಟ್ ಅವರನ್ನು ತರಾಟೆಗೆ ತೆಗೆದುಕೊಂಡರು ಎಂದು ಮೂಲಗಳು ತಿಳಿಸಿವೆ.

ಠಾಣೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೆಚ್ಚಿನ ಸಿಬ್ಬಂದಿಗಳು ಹಾಜರಿರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್ಲ ಠಾಣೆಗಳಲ್ಲೂ ಹಾಜರಾತಿ, ಸೇವಾ ಪುಸ್ತಕಗಳನ್ನು ಪರಿಶೀಲಿಸಿದರೆಂದು ಮೂಲಗಳು ಹೇಳಿವೆ.ನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳ ಬಗ್ಗೆ ಕೈಗೊಂಡ ಕ್ರಮ, ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳು, ಅವುಗಳ ಪ್ರಗತಿ ಇತ್ಯಾದಿ ಕುರಿತು ಸಚಿವರು ಸ್ಥಳದಲ್ಲಿದ್ದ ಡಿಸಿಪಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ರಾತ್ರಿ ವೇಳೆ ಅಪರಾಧ ಕೃತ್ಯಗಳು ನಡೆಯುತ್ತಿರುವುದನ್ನು ತಪ್ಪಿಸಲು ರಾತ್ರಿ ಗಸ್ತನ್ನು ಹೆಚ್ಚಿಸಿ ಕ್ರಮ ಜರುಗಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.

Write A Comment