ಕರ್ನಾಟಕ

‘ಚಂದನವನ’ ಬಿಡುಗಡೆ, ‘ವೆಬ್‌ಸೈಟ್’ಗೆ ಚಾಲನೆ: ಚಿತ್ರರಂಗವನ್ನು ಶಿಕ್ಷಣ ನೀಡುವ ಮಾಧ್ಯಮವಾಗಿ ರೂಪಿಸಿ- ನಿರ್ದೇಶಕ ಟಿ.ಎಸ್.ನಾಗಾಭರಣ

Pinterest LinkedIn Tumblr

Chairman Karnataka Film Academy SV Rajendrasingh Babu, President of KFCC Sa Ra Govindu, Actress Tara Anuradha, Film Director Girish Kasaravalli, Director of Information and Public Relations Department NR Vishukumar and Film Director TS Nagabharana seen during the “Chandanavana” book release at P-2 Hall, KSCA in Bengaluru on Saturday Nov 28 2015 - KPN ### Book release by Karnataka Film Academy

ಬೆಂಗಳೂರು, ನ 28: ಕರ್ನಾಟಕ ಚಲನಚಿತ್ರ ಅಕಾಡಮಿ ಚಿತ್ರರಂಗದ ವಾಣಿಜ್ಯ ವಿಚಾರಗಳಿಗಿಂತ ಚಲನಚಿತ್ರರಂಗವನ್ನು ಶಿಕ್ಷಣ ಮಾಧ್ಯಮವನ್ನಾಗಿಸುವ ಕುರಿತು ಹೆಚ್ಚು ಗಮನ ಹರಿಸಬೇಕು ಎಂದು ಹಿರಿಯ ನಿರ್ದೇಶಕ ಟಿ.ಎಸ್.ನಾಗಾಭರಣ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡಮಿ ಆಯೋಜಿಸಿದ್ದ ‘ಚಂದನವನ’ ಹಾಗೂ ‘ವರ್ಷದ ಹಾದಿ’ ಪುಸ್ತಕಗಳ ಬಿಡುಗಡೆ ಮತ್ತು ಅಕಾಡಮಿಯ ‘ವೆಬ್‌ಸೈಟ್’ಗೆ ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚಿತ್ರರಂಗದ ವ್ಯಾಪಾರ ವಹಿವಾಟು ಹೆಚ್ಚಿಸಲು ಯಾವ ರೀತಿಯ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ತೀರ್ಮಾನಿಸಲು ಹಲವು ಮಂಡಳಿಗಳಿದ್ದು, ಚಲನಚಿತ್ರರಂಗವನ್ನು ಶಿಕ್ಷಣ ನೀಡುವ ಮಾಧ್ಯಮವನ್ನಾಗಿ ಮಾಡಲು ಹಾಗೂ ಸಿನೆಮಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ರೂಪಿಸಲು ಅಕಾಡಮಿ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಈ ಹಿಂದೆ ಜಾರಿಯಲ್ಲಿದ್ದ ‘ಬೆಳ್ಳಿ ಮಂಡಲ’ ಹಾಗೂ ‘ಬೆಳ್ಳಿ ಸಾಕ್ಷಿ’ ಕಾರ್ಯಕ್ರಮಗಳನ್ನು ಪುನರಾರಂಭಿಸಬೇಕು ಎಂದ ಅವರು, ಕನ್ನಡ ಚಿತ್ರರಂಗಕ್ಕೆ ಕವಿದಿರುವ ಕತ್ತಲನ್ನು ‘ಚಂದನವನ’ ಪುಸ್ತಕ ದೂರ ಮಾಡಲಿದ್ದು, ವಿದ್ಯಾರ್ಥಿ ದೆಸೆಯಲ್ಲಿ ಆಗುವ ತೊಂದರೆಗಳನ್ನು ಈ ಪುಸ್ತಕ ನಿವಾರಿಸುವ ಶಕ್ತಿಯನ್ನು ಹೊಂದಿದೆ ಎಂದು ಆಶಯ ವ್ಯಕ್ತಪಡಿಸಿದರು.
ಹಿರಿಯ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಮಾತನಾಡಿ, ಕನ್ನಡ ಚಿತ್ರರಂಗದ ಇತಿಹಾಸವನ್ನು ತಿಳಿಸಲು ಹಲವಾರು ಪುಸ್ತಕಗಳಿವೆ. ಆದರೆ, ಚಿತ್ರರಂಗದ ಆತ್ಮವನ್ನು ಗುರುತಿಸುವ ಪುಸ್ತಕಗಳ ಸಂಖ್ಯೆ ಕಡಿಮೆಯಿದ್ದು, ಈ ನಿಟ್ಟಿನಲ್ಲಿ ಅಕಾಡಮಿ ಕೈಗೊಂಡಿರುವ ಕಾರ್ಯಕ್ರಮಗಳು ಸ್ವಾಗತಾರ್ಹ ಎಂದು ಹೇಳಿದರು.
ಅಕಾಡಮಿ ಪ್ರಾರಂಭಿಸಿರುವ ‘ಬೆಳ್ಳಿಮಾತು- ಬೆಳ್ಳಿಸಿನೆಮಾ’ ಕಾರ್ಯಕ್ರಮ ಯಶಸ್ವಿಯಾಗಿದ್ದು, ಈ ಕಾರ್ಯಕ್ರಮವನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಬೇಕು ಎಂದ ಅವರು, ಚಿತ್ರರಂಗದ ಕುರಿತ ಪುಸ್ತಕಗಳು ಹಾಗೂ ಸಿನೆಮಾಗಳ ಕುರಿತು ವಿಚಾರ ಸಂಕಿರಣಗಳನ್ನು ನಡೆಸುವ ಅಗತ್ಯವಿದೆ ಎಂದರು.
ಅಕಾಡಮಿಯ ಅಧ್ಯಕ್ಷ ರಾಜೇಂದ್ರಸಿಂಗ್ ಬಾಬು ಮಾತನಾಡಿ, ಕನ್ನಡದಲ್ಲಿ ಸ್ವಮೇಕ್ ಚಿತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿ ನಲ್ಲಿ ಅಕಾಡಮಿ ‘ಜೇನುಗೂಡು ಕಥಾ ಬ್ಯಾಂಕ್’ ಆರಂಭಿಸಲು ಯೋಜನೆ ರೂಪಿಸಿದೆ ಎಂದರು.
ಮೈಸೂರು ವಿವಿಯೊಂದಿಗೆ ಆರಂಭಿಸಿರುವ ಚಲನಚಿತ್ರ ಕೋರ್ಸ್‌ಗೆ ಹೆಚ್ಚು ಹೆಚ್ಚು ವಿದ್ಯಾರ್ಥಿ ಗಳು ಪ್ರವೇಶ ಪಡೆಯುತ್ತಿದ್ದು, ಕೋರ್ಸ್‌ನ್ನು ರಾಜ್ಯದಾದ್ಯಂತ ಆರಂಭಿಸಲಾಗುವುದು. ಕನ್ನಡ ಚಿತ್ರರಂಗದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಚ್ಚಿನ ಬೆಂಬಲ ನೀಡುತ್ತಿದ್ದು, ಸರಕಾರ 30 ಜನತಾ ಚಿತ್ರಮಂದಿರಗಳನ್ನು ನಿರ್ಮಿಸಲು ಒಪ್ಪಿಕೊಂಡಿದೆ ಎಂದು ಅವರು ಹರ್ಷವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್, ಚಂದನವನ-ಸಂಪಾದಕ ಮಂಡಳಿಯ ಸದಸ್ಯರಾದ ಚ.ಹ.ರಘುನಾಥ್, ಎನ್.ವಿಶಾಖ, ಚೇತನ್ ನಾಡಿಗೇರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Write A Comment