ಕರ್ನಾಟಕ

64 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ: ಕೃಷ್ಣ ಭೈರೇಗೌಡ

Pinterest LinkedIn Tumblr

krishnabyregowdaಬೆಂಗಳೂರು, ನ.27: ರಾಜ್ಯದಲ್ಲಿ 2015ನೆ ಸಾಲಿನ ಮುಂಗಾರು ಹಂಗಾಮಿನಲ್ಲಿ 64 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರಾದ ಗೋವಿಂದ ಎಂ.ಕಾರಜೋಳ ಹಾಗೂ ಆರ್.ಅಶೋಕ್ ಕೇಳಿದ ಚುಕ್ಕೆಗುರುತಿಲ್ಲದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ಪ್ರಸ್ತಕ ಸಾಲಿನ ಮುಂಗಾರು ಹಂಗಾಮಿನಲ್ಲಿ 73 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆ ಗುರಿಯನ್ನು ಹಮ್ಮಿ ಕೊಳ್ಳಲಾಗಿತ್ತು ಎಂದರು.

ಮಳೆಯ ಅಭಾವ ಹಾಗೂ ವಿವಿಧ ಜಲಾಶಯಗಳಲ್ಲಿ ಕಡಿಮೆ ನೀರಿನ ಸಂಗ್ರಹಣೆಯ ಕಾರಣ ಕೃಷಿ ಬೆಳೆಗಳ ಬಿತ್ತನೆ ಕುಂಠಿತಗೊಂಡು 64 ಲಕ್ಷ ಹೆಕ್ಟೇರ್ ಪ್ರಗತಿಯಾಗಿದೆ. ಉಳಿದ 9 ಲಕ್ಷ ಹೆಕ್ಟೇರ್ ಬಿತ್ತನೆಯಾಗದೆ ಉಳಿದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮಳೆಯ ಅಭಾವದಿಂದ ಸುಮಾರು 33.10 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ವಿವಿಧ ಕೃಷಿ ಬೆಳೆಗಳು ತೇವಾಂಶದ ಕೊರತೆಗೆ ಒಳಪಟ್ಟಿದ್ದು ಸುಮಾರು 28.88 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆಗಳ ಇಳುವರಿಯಲ್ಲಿ ಶೇ.33ಕ್ಕಿಂತ ಹೆಚ್ಚು ನಷ್ಟ ಆಗಬಹುದು ಎಂದು ಕೃಷಿ ಹಾಗೂ ಕಂದಾಯ ಇಲಾಖೆಯ ಜಂಟಿ ಸಮೀಕ್ಷೆ ಮೂಲಕ ಅಂದಾಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಬಿತ್ತನೆಯಾಗಿ ಬೆಳೆ ನಷ್ಟ ಕ್ಕೊಳಗಾದ ರೈತರಿಗೆ ‘ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ(ಎನ್‌ಡಿಆರ್‌ಎಫ್)’ಯಡಿಯಲ್ಲಿ ಪರಿಹಾರ ನೀಡುವ ಸಲು ವಾಗಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಅನುದಾನ ಬಂದ ನಂತರ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಬಿತ್ತನೆಯಾಗದ ಪ್ರದೇಶದ ರೈತರಿಗೆ ಪರಿಹಾರ ನೀಡಲು ಅವಕಾಶವಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಬೆಳೆ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ನೀಡಲು ಸರಕಾರ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯ ಅಧಿ ಕಾರಿಗಳ ಜಂಟಿ ತಂಡಗಳನ್ನು ರಚಿಸಿ ಸಮೀಕ್ಷೆಯ ಮೂಲಕ ರೈತರ ವಿವರಗಳನ್ನು ಸಂಗ್ರಹಿಸಲಾಗಿದೆ. ಪರಿಹಾರದ ಮೊತ್ತವನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೃಷ್ಣ ಭೈರೇಗೌಡ ಹೇಳಿದ್ದಾರೆ.
854 ರೈತರ ಆತ್ಮಹತ್ಯೆ
ರಾಜ್ಯದಲ್ಲಿ ಪ್ರಸಕ್ತ ಸಾಲಿನ ಎಪ್ರಿಲ್ ತಿಂಗಳಿನಿಂದ ನ.21ರವರೆಗೆ 854 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, ಸಾಲ ಬಾಧೆ, ಸಾಮಾಜಿಕ, ಸಾಂಸಾರಿಕ ಸಮಸ್ಯೆ, ವೈಯಕ್ತಿಕ ಸಾಲಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 289 ಪ್ರಕರಣಗಳಲ್ಲಿ 284 ಪ್ರಕರಣಗಳಿಗೆ ತಲಾ 5 ಲಕ್ಷ ರೂ.ಗಳಂತೆ 142 ಕೋಟಿ ರೂ.ಗಳನ್ನು ಪರಿಹಾರವಾಗಿ ನೀಡಲಾಗಿದೆ. ಉಳಿದ ಪ್ರಕರಣಗಳಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ.

Write A Comment