ರಾಷ್ಟ್ರೀಯ

ಕವಿಮನೆ ಕಳವು ಪ್ರಕರಣ: ಮೂವರ ಬಂಧನ; 2 ಪದಕಗಳು ವಶ

Pinterest LinkedIn Tumblr

Kallaru

ಶಿವಮೊಗ್ಗ, ನ.27: ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿರುವ ರಾಷ್ಟ್ರಕವಿ ಕುವೆಂಪು ಅವರಿಗೆ ಸೇರಿದ ‘ಕವಿಮನೆ’ಯಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

‘ಕವಿಮನೆ’ಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಳವು ಮಾಡಲಾಗಿದ್ದ ಮೂರು ಪದಕಗಳಲ್ಲಿ ಎರಡು ಪದಕಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದಾವಣಗೆರೆ ಜಿಲ್ಲೆಯ ತುರುಚಘಟ್ಟ ಗ್ರಾಮದ ನಿವಾಸಿ ಹಾಗೂ ಹಲವು ವರ್ಷ ಗಳಿಂದ ‘ಕವಿಮನೆ’ಯ ಮ್ಯೂಝಿಯಂ ನಲ್ಲಿ ಅಟೆಂಡರ್ ಆಗಿ ಕೆಲಸ ಮಡುತ್ತಿದ್ದ ರೇವಣಸಿದ್ದಪ್ಪ ಯಾನೆ ಕಾಯಕದ ರೇವಣ್ಣ(56), ಮೂಲತಃ ದಾವಣಗೆರೆ ಜಿಲ್ಲೆ ಕಾರಿಗನೂರಿನ ನಿವಾಸಿ, ಪ್ರಸ್ತುತ ತೀರ್ಥಹಳ್ಳಿಯಲ್ಲಿ ನೆಲೆಸಿರುವ ಅಂಜನಪ್ಪ(45) ಬಂಧಿತ ಪ್ರಮುಖ ಆರೋಪಿಗಳಾಗಿದ್ದಾರೆ.

ಆರೋಪಿಗಳು ಕಳ್ಳತನ ಮಾಡಿದ ಪದಕಗಳನ್ನು ಖರೀದಿಸಿದ್ದ ಶಿವಮೊಗ್ಗ ತಾಲೂಕಿನ ಮಂಡರಹಳ್ಳಿ ಗ್ರಾಮದ ನಿವಾಸಿ ಪ್ರಕಾಶ್(48) ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ಆರೋಪಿ ರೇವಣಸಿದ್ದಪ್ಪನ ಭಾವಚಿತ್ರಗಳನ್ನು ಸಾರ್ವಜನಿಕರ ಗಮನಕ್ಕಾಗಿ ಪ್ರಕಟಿಸಲಾಗಿತ್ತು. ಇದನ್ನು ಗಮನಿಸಿದ ದಾವಣಗೆರೆಯ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಸಿಬ್ಬಂದಿ ಮಂಜುನಾಥ್ ಎಂಬವರು ರೇವಣಸಿದ್ದಪ್ಪ ದಾವಣಗೆರೆಯ ತುರುಚಘಟ್ಟದ ನಿವಾಸಿ ಎಂಬುದು ಪತ್ತೆ ಹಚ್ಚಿದ್ದರು. ಜೊತೆಗೆ ಈ ಹಿಂದೆ ಆತ ಹಲವು ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಮಾಹಿತಿ ನೀಡಿದ್ದರು.

ಈ ಮಾಹಿತಿಯ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಈತನಿಗೆ ಕಳ್ಳತನ ಮಾಡಲು ನೆರವಾಗಿದ್ದ ‘ಕವಿಮನೆ’ಯ ಅಟೆಂಡರ್ ಅಂಜನಪ್ಪನನ್ನು ಕೂಡ ಸೆರೆ ಹಿಡಿಯಲಾಗಿದೆ. ಈ ಇಬ್ಬರು ನೀಡಿದ್ದ ಮಾಹಿತಿಯ ಆಧಾರದ ಮೇಲೆ ಪದಕಗಳನ್ನು ಖರೀದಿಸಿದ್ದ ಪ್ರಕಾಶನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೂರ್ವ ವಲಯ ಐಜಿಪಿ ಎಂ.ನಂಜುಂಡಸ್ವಾಮಿ ತಿಳಿಸಿದ್ದಾರೆ.

ಶುಕ್ರವಾರ ನಗರದ ಡಿ.ಎ.ಆರ್. ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಿಗಳಾದ ರೇವಣಸಿದ್ದಪ್ಪ ಹಾಗೂ ಅಟೆಂಡರ್ ಅಂಜನಪ್ಪನಿಗೆ ಮೊದಲಿನಿಂದಲೂ ಪರಸ್ಪರ ಪರಿಚಯವಿತ್ತು. ‘ಕವಿಮನೆ’ಯಲ್ಲಿ ಕಳ್ಳತನ ಮಾಡುವಂತೆ ಅಂಜನಪ್ಪನೇ ರೇವಣಸಿದ್ದಪ್ಪಗೆ ಹೇಳಿದ್ದ. ಜೊತೆಗೆ ಹಣ ಕೂಡ ನೀಡಿದ್ದ ಎಂದು ಐಜಿಪಿ ಮಾಹಿತಿ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಸೇರಿದಂತೆ ಮೊದಲಾದವರಿದ್ದರು.

Write A Comment