ಹುಬ್ಬಳ್ಳಿ: ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶ ಬಿಡುವ ಕುರಿತ ಚಿಂತನೆ ವ್ಯಕ್ತಪಡಿಸಿ ನಟ ಅಮೀರ್ ಖಾನ್ ಭಾರೀ ಟೀಕೆ, ಆಕ್ರೋಶಕ್ಕೆ ಗುರಿಯಾಗಿದ್ದರೆ, ಮತ್ತೊಂದೆಡೆ ಇಸ್ಲಾಂ ಮತ್ತು ಅಮೀರ್ ಖಾನ್ ವಿರುದ್ಧ ಮಾತನಾಡದಂತೆ ಶ್ರೀರಾಮಸೇನೆ ವರಿಷ್ಠ ಪ್ರಮೋದ್ ಮುತಾಲಿಕ್ ಗೆ ಬೆದರಿಕೆ ಕರೆ ಬಂದಿರುವುದಾಗಿ ಎಂದು ಮಾಧ್ಯಮದ ವರದಿ ತಿಳಿಸಿದೆ.
ಅಮೀರ್ ಖಾನ್ ಮತ್ತು ಇಸ್ಲಾಂ ಬಗ್ಗೆ ಮಾತನಾಡದಂತೆ ನನಗೆ ಬೆದರಿಕೆಯ ಕರೆ ಬಂದಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ. ಆದರೆ ಇಂತಹ ಬೆದರಿಕೆ ಕರೆಗಳಿಂದ ನನ್ನ ಹಿಂದುತ್ವದ ಕೆಲಸವನ್ನು ತಡೆಯಲು ಸಾಧ್ಯವಿಲ್ಲ ಎಂದು ಮುತಾಲಿಕ್ ಹೇಳಿದ್ದಾರೆ.
ಈ ಹಿಂದೆಯೂ ಬೇರೆ, ಬೇರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುತಾಲಿಕ್ ಬೆದರಿಕೆ ಕರೆಗಳನ್ನು ಸ್ವೀಕರಿಸಿದ್ದರು. ಇದೀಗ ಅಸಹಿಷ್ಣುತೆ ಕುರಿತ ಬಿಸಿ, ಬಿಸಿ ಚರ್ಚೆ, ಪ್ರತಿಭಟನೆ ನಡೆಯುತ್ತಿರುವ ನಡುವೆ ಮತ್ತೆ ಮುತಾಲಿಕ್ ಗೆ ಬೆದರಿಕೆ ಕರೆ ಬಂದಿದೆ.
-ಉದಯವಾಣಿ