ಬೆಂಗಳೂರು, ನ.24: ಎಐಸಿಸಿ ಉಪಾಧ್ಯಕ್ಷ ರಾಹುಲ್ಗಾಂಧಿ ನಗರದ ವೌಂಟ್ ಕಾರ್ಮೆಲ್ ಮಹಿಳಾ ಕಾಲೇಜಿನ ಆಡಳಿತ ಮಂಡಳಿಯ ಆಹ್ವಾನದ ಹಿನ್ನೆಲೆಯಲ್ಲಿ ಬುಧವಾರ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮಂಗಳವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬುಧವಾರ ಬೆಳಗ್ಗೆ 8.45ಕ್ಕೆ ದಿಲ್ಲಿಯಿಂದ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಲಿರುವ ರಾಹುಲ್ಗಾಂಧಿ, ಮಧ್ಯಾಹ್ನ 1 ಗಂಟೆಯ ವರೆಗೆ ಕುಮಾರಕೃಪಾ ಅತಿಥಿ ಗೃಹದಲ್ಲಿ ತಂಗಲಿದ್ದಾರೆ ಎಂದರು.
ಆ ನಂತರ ವೌಂಟ್ಕಾರ್ಮೆಲ್ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಬಳಿಕ ವಿದ್ಯಾರ್ಥಿಗಳೊಂದಿಗೆ ಸುಮಾರು ಒಂದೂವರೆ ಗಂಟೆಗಳ ಕಾಲ ಸಂವಾದ ನಡೆಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರನ್ನು ಹೊರತುಪಡಿಸಿ ಬೇರೆ ಯಾವ ರಾಜಕೀಯ ಮುಖಂಡರು, ಶಾಸಕರು, ಸಚಿವರಿಗೂ ಆಹ್ವಾನವಿಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.
ಕೇಂದ್ರದ ಮಲತಾಯಿ ಧೋರಣೆ: ತಮಿಳುನಾಡಿಗೆ 950 ಕೋಟಿ ರೂ. ನೆರವು ನೀಡಿರುವ ಕೇಂದ್ರ ಸರಕಾರವು, ತೀವ್ರ ಬರಗಾಲ ಎದುರಿಸುತ್ತಿರುವ ರಾಜ್ಯಕ್ಕೆ ನಿಯಮಾವಳಿಗಳ ಪ್ರಕಾರ ನೀಡಬೇಕಾದ 3,850 ಕೋಟಿ ರೂ.ಬಿಡುಗಡೆ ಮಾಡಲು ಮೀನಾಮೇಷ ಎಣಿಸುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ತಮಿಳುನಾಡಿಗೆ ನೆರವು ನೀಡಿರುವುದಕ್ಕೆ ನಮ್ಮ ವಿರೋಧವಿಲ್ಲ. ರಾಜ್ಯದಲ್ಲಿ ತೀವ್ರ ಬರಗಾಲದಿಂದ 650ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ನೆರವು ನೀಡಲು ಕೇಂದ್ರ ಸರಕಾರ ಮುಂದೆ ಬರದಿರುವುದನ್ನು ನೋಡಿದರೆ ಇಲ್ಲಿ ಕಾಂಗ್ರೆಸ್ ಸರಕಾರವಿರುವುದರಿಂದ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸ ಬೇಕಾಗುತ್ತದೆ ಎಂದು ಪರಮೇಶ್ವರ್ ಕಿಡಿಗಾರಿದರು.
