ಕರ್ನಾಟಕ

ಬೆಂಗಳೂರು ಕಸದ ಸಮಸ್ಯೆ; ಅಧಿವೇಶನದ ಬಳಿಕ ಶಾಸಕರ ಸಭೆ: ಕೆ.ಜೆ.ಜಾರ್ಜ್

Pinterest LinkedIn Tumblr

georgeಬೆಂಗಳೂರು, ನ.23: ರಾಜಧಾನಿ ಬೆಂಗಳೂರಿನ ಕಸ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಪ್ರಸಕ್ತ ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನ ಮುಗಿದ ನಂತರ ಶಾಸಕರು, ಸಂಸದರ ಸಭೆಯನ್ನು ಕರೆದು ಚರ್ಚೆ ನಡೆಸಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ ನಿಯಮ 69ರ ಅಡಿಯಲ್ಲಿ ಬೆಂಗಳೂರಿನ ಕಸದ ಸಮಸ್ಯೆ ಕುರಿತು ಶಾಸಕರಾದ ಬಿ.ಎನ್.ವಿಜಯ ಕುಮಾರ್, ಎಸ್.ಸುರೇಶ್ ಕುಮಾರ್, ಎಲ್.ಎ.ರವಿಸುಬ್ರಮಣ್ಯ ಹಾಗೂ ಅರವಿಂದ ಲಿಂಬಾವಳಿ ಪಾಲ್ಗೊಂಡಿದ್ದ ಚರ್ಚೆಗೆ ಅವರು ಉತ್ತರ ನೀಡಿದರು.

ಬೆಂಗಳೂರು ನಗರದಲ್ಲಿ ಪ್ರತಿದಿನ ಸುಮಾರು 3,500 ಟನ್ ಘನ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಈ ತ್ಯಾಜ್ಯವನ್ನು ಸಂಪೂರ್ಣವಾಗಿ ಸಂಸ್ಕರಣೆ ಮಾಡುವ ಉದ್ದೇಶದಿಂದ 7 ಘಟಕಗಳನ್ನು ಸ್ಥಾಪಿಸಲು ಸರಕಾರ ಮಂಜೂ ರಾತಿ ನೀಡಿದೆ ಎಂದು ಅವರು ಹೇಳಿದರು.

ಕನ್ನಹಳ್ಳಿ-500 ಟನ್, ಸೀಗೆಹಳಿ, ದೊಡ್ಡಬಿದರಕಲ್ಲು, ಲಿಂಗಧೀರನಹಳ್ಳಿ (ಎನ್‌ಜಿಟಿ) ಹಾಗೂ ಸುಬ್ಬರಾಯನಪಾಳ್ಯದಲ್ಲಿ ತಲಾ 200 ಟನ್, ಚಿಕ್ಕನಾಗಮಂಗಲ ಹಾಗೂ ಕೆಸಿಡಿಸಿ(ಹಾಲಿ ಘಟಕದ ವಿಸ್ತರಣೆ)ಯಲ್ಲಿ ತಲಾ 500 ಟನ್‌ಗಳಂತೆ ಒಟ್ಟು 2,300ಟನ್ ಕಸವನ್ನು ಪ್ರತಿದಿನ ಸಂಸ್ಕರಣೆ ಮಾಡಲು ಸರಕಾರ ಕ್ರಮ ಕೈಗೊಂಡಿದೆ ಎಂದು ಜಾರ್ಜ್ ತಿಳಿಸಿದರು.

ಖಾಸಗಿ ಸಹಭಾಗಿತ್ವದಲ್ಲಿ ಸತಾರೆಂ ಎಂಟರ್‌ಪ್ರೈಸೆಸ್-1000 ಟನ್, ಆರ್ಗ್ಯಾನಿಕ್ ವೇಸ್ಟ್ ಇಂಡಿಯಾ ಹಾಗೂ ಎಸ್‌ಎಲ್ ಗ್ರೂಪ್‌ನವರು ತಲಾ 600 ಟನ್‌ಗಳಂತೆ ಒಟ್ಟು 2,200 ಟನ್ ಪ್ರತಿದಿನ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಮಂಜೂರಾತಿ ನೀಡಲಾಗಿದೆ ಎಂದು ಅವರು ಹೇಳಿದರು.

ಇದಲ್ಲದೆ, ರಾಜ್ಯ ಸರಕಾರವು ನೆದರ್‌ಲ್ಯಾಂಡ್ ಸರಕಾರದೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಹಯೋಗಕ್ಕಾಗಿ ನ.9ರಂದು ಒಡಂಬಡಿಕೆ ಮಾಡಿಕೊಂಡಿದ್ದು, ಅದರಡಿಯಲ್ಲಿ ನೆದರ್‌ಲ್ಯಾಂಡ್ ದೇಶದ ವೇಸ್ಟ್-ಟು-ವ್ಯಾಲ್ಯೂ ಸಮೂಹದ ನೆಕ್ಸಸ್ ನೋವಾ ಸಂಸ್ಥೆಯವರು ಪಾಲಿಕೆಯ ತ್ಯಾಜ್ಯದಿಂದ ಇಂಧನ ಉತ್ಪಾದಿಸುವ (ವೇಸ್ಟ್-ಟು-ಎನರ್ಜಿ) ಪ್ರತಿದಿನ 600 ಟನ್ ಸಾಮರ್ಥ್ಯದ ಪ್ರಾಯೋಗಿಕ ಘಟಕ ಸ್ಥಾಪನೆಗೆ ಮುಂದೆ ಬಂದಿದೆ ಎಂದು ಜಾರ್ಜ್ ತಿಳಿಸಿದರು.

Write A Comment