ಕರ್ನಾಟಕ

RTO ರೋಡ್​ ರಾಬರಿ ! ಈ ಗ್ಯಾಂಗ್​ ಹಾಡ ಹಗಲೇ ರಸ್ತೆ ಮೇಲೆ ನಿಂತು ನಿತ್ಯ ಹತ್ತಾರು ಕೋಟಿ ರೂಪಾಯಿ ಲೂಟಿ ಹೊಡೆಯುತ್ತೆ…

Pinterest LinkedIn Tumblr

hos

ವರದಿ: ವಿಜಯಲಕ್ಷ್ಮಿ ಶಿಬರೂರು

​ ಈ ಬಾರಿ ಕವರ್​ಸ್ಟೋರಿ ತಂಡ ಮತ್ತೊಂದು ಥ್ರಿಲ್ಲಿಂಗ್​ ಬೇಟೆಗೆ ಹೊರಟಿದೆ. ಈ ಬಾರಿ ಸ್ವಲ್ಪ ಡಿಫೆರೆಂಟ್​ ಆಗಿರೋ ಕಾರ್ಯಾಚರಣೆಗೇ ಹೊರಟಿದ್ದೀವಿ. ಯಾಕಂದ್ರೆ ನಾವು ಈ ಬಾರಿ ಬೇಟೆಯಾಡ ಹೊರಟಿದ್ದು ರಾಜ್ಯದ ಅತ್ಯಂತ ನಟೋರಿಯಸ್​ ದರೋಡೆಕೋರರ ಗ್ಯಾಂಗನ್ನ. ಈ ಗ್ಯಾಂಗ್​ ಹಾಡ ಹಗಲೇ ರಸ್ತೆ ಮೇಲೆ ನಿಂತು ನಿತ್ಯ ಹತ್ತಾರು ಕೋಟಿ ರೂಪಾಯಿ ಲೂಟಿ ಹೊಡೆಯುತ್ತೆ. ಈ ಗ್ಯಾಂಗ್​ ಟಾರ್ಗೆಟ್​ ಮಾಡೋದೇ ವಾಹನ ಸವಾರರನ್ನ. ಅದು ದರೋಡೆ ಮಾಡೋ ಜಾಗ ಯಾವುದು ಗೊತ್ತಾ? ರಾಷ್ಟ್ರೀಯ ಹೆದ್ದಾರಿ.

ಹೈವೇ ಮೇಲೆ ನಿಂತು ಆ ಗ್ಯಾಂಗ್​ ವಾಹನ ಸವಾರರನ್ನ ಪರಿಪರಿಯಾಗಿ ಹಿಂಸಿಸುತ್ತೆ. ಇಲ್ಲಿಲ್ಲದಂತೆ ಪೀಡಿಸುತ್ತೆ. ಚಾಕಲರ ಮೇಲೆ ನಿರ್ದಾಕ್ಷಿಣ್ಯವಾಗಿ ದಾಳಿ ಮಾಡುತ್ತೆ. ದೊಣ್ಣೆಗಳಿಂದ ಲಾರಿ ಗಾಜು ಒಡೆಯುತ್ತೆ. ಈ ಗ್ಯಾಂಗ್​ನಿಂದ ತಪ್ಪಿಸಿಕೊಂಡು ಹೋದ್ರೆ ಅಟ್ಟಾಡಿಸಿಕೊಂಡು ಬರುತ್ತೆ. ಚಿತ್ರ ಹಿಂಸೆ ಕೊಡುತ್ತೆ. ಈ ತಂಡ ಮಾಡುತ್ತಿರೋ ಹಿಂಸೆಗೆ ವಾಹನ ಚಾಲಕರು ಯಾವ ರೀತಿ ರೋಸಿ ಹೋಗಿದ್ದಾರೆ. ಯಾವ ರೀತಿ ರೋಸಿ ಹೋಗಿದ್ದಾರೆ ಅಂದ್ರೆ ನಮ್ಮ ನಾಡಿನ ಲಾರಿ ಚಾಲಕರೆಲ್ಲಾ ಕರ್ನಾಟಕ ಬಿಟ್ಟು ಪರರಾಜ್ಯಕ್ಕೆ ಪರಾರಿಯಾಗೋ ಯೋಚನೆಯನ್ನೂ ಮಾಡ್ತಿದ್ದಾರೆ. ಇದು ಯಾರಿಂದಲೂ ಹಿಡಿಯಲಾಗದ, ಯಾರಿಗೂ ಅಂಜದ, ಸರ್ಕಾರಕ್ಕೆ ಬೆಲೆ ಕೊಡದ, ಸಚಿವರಿಗೆ ಜಗ್ಗದ ಆ ನಟೋರಿಯಸ್​ ಗ್ಯಾಂಗ್. ಆ ಗ್ಯಾಂಗ್​​ ಯಾವುದು ಗೊತ್ತಾ? ನಮ್ಮ ರಾಜ್ಯದ ಆರ್​ಟಿಓ.

ಯಸ್​…….ಈ ಆರ್​ಟಿಓ ಗ್ಯಾಂಗ್ ಸರ್ಕಾರ ಕೊಟ್ಟಿರೋ ಸಮವಸ್ತ್ರ ಧರಿಸಿ ನಮ್ಮ ರಾಜ್ಯದ ಸಂಪತ್ತನ್ನ ಬಿಂದಾಸಾಗಿ ಲೂಟಿ ಹೊಡಿತಿದೆ. ಇದು ನಮ್ಮ ರಾಜ್ಯದ ಬೊಕ್ಕಸಕ್ಕೆ ಸೇರಬೇಕಾದ ಕೋಟ್ಯಾಂತರ ರೂಪಾಯಿಯನ್ನ ತನ್ನ ಮನೆಗೆ ಅನಾಮತ್ತಾಗಿ ಒಯ್ಯತ್ತಿದೆ. ಈ ರೀತಿ ರಾತ್ರಿ ಹಗಲೆನ್ನದೆ ಲೂಟಿ ಹೊಡಿತಿರೋ ಈ ಗ್ಯಾಂಗ್​ ಒಬ್ಬೊಬ್ಬ ಅಧಿಕಾರಿ ಈಗ ನೂರಾರು ಕೋಟಿಯ ಒಡೆಯರು. ಇವರು ಇಡೀ ಸರ್ಕಾರಿ ವ್ಯವಸ್ಥೆಯನ್ನ ಕೈಯಲ್ಲಿ ಬುಗರಿಯಂತೆ ಆಟ ಆಡಿಸ ಬಲ್ಲರು. ಅಷ್ಟು ಪವರ್​ಫುಲ್​.

ಭಯಾನಕ ಗ್ಯಾಂಗ್​ ಕಟ್ಟಿ ರಾಜಾರೋಷವಾಗಿ ಜನರನ್ನ ಲೂಟಿ ಹೊಡೆಯೋ ಈ ತಂಡದ ಕರಾಳ ಕೃತ್ಯವನ್ನ ಇಡೀ ರಾಜ್ಯದ ಜನತೆಗೆ ತೋರಿಸಬೇಕು ಅಂತ ಕವರ್​ಸ್ಟೋರಿ ತಂಡ ರಹಸ್ಯ ಕಾರ್ಯಾಚರಣೆಗೆ ಇಳಿಯಿತು. ಈ ಬಾರಿಯ ಆಪರೇಷನ್​ ಆರ್​ಟಿಓಗೆ ನಾವು ಸ್ವಲ್ಪ ಡಿಫೆರೆಂಟ್​ ಗೆಟಪ್​ನಲ್ಲಿ ರೆಡಿಯಾದ್ವಿ. ಯಾಕಂದ್ರೆ ಈ ಆರ್​ಟಿಓ ಗ್ಯಾಂಗ್​ನ ಬಣ್ಣ ಬಯಲು ಮಾಡೋದು ಅಷ್ಟು ಸುಲಭದ ಕೆಲಸ ಅಲ್ಲ. ಆ ಗ್ಯಾಂಗ್​ ವಾಹನ ಚಾಲಕರನ್ನ ಬಿಟ್ಟು ಯಾರನ್ನೂ ತಮ್ಮ ಹತ್ರ ಸೇರಿಸಿಕೊಳ್ಳಲ್ಲ. ಮತ್ತೆ ಅವರ ಬಳಿ ಯಾರನ್ನೂ ಒಂದು ನಿಮಿಷವೂ ನಿಲ್ಲಲು ಬಿಡಲ್ಲ. ಅದಕ್ಕಾಗಿ ಒಂದಿಷ್ಟು ಪೂರ್ವ ತಯಾರಿ ಮಾಡಿ ನಾವೂ ವಾಹನ ಸಹಾಯಕರ ವೇಷದಲ್ಲೇ ಲಾರಿ ಹತ್ತಿದ್ದೀವಿ.

ರಾತ್ರಿ ಹಗಲು ಲಾರಿಯಲ್ಲೇ ಪ್ರಯಾಣ ಮಾಡಿ ಈ ಆರ್​ಟಿಓ ದರೋಡೆಕೋರರ ಬಣ್ಣ ಬಯಲು ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಂಡ್ವಿ. ನಾವು ಒಂದೊಂದೇ ಚೆಕ್​ ಪೋಸ್ಟ್​​ ದಾಟುತ್ತಾ ಹೋದಂತೆ ಈ ಗ್ಯಾಂಗ್​​ನ ಭಯಾನಕ ದಂಧೆಯ ಕರಾಳ ರೂಪಗಳು ಬಯಲಾಗ್ತಾ ಹೋದವು.

ಆಪರೇಪ್​ RTO ಸ್ಟಾಟ್​: ರಾಜ್ಯದ ಅತೀ ದೊಡ್ಡ ದರೋಡೆ ಗ್ಯಾಂಗ್​ನ ಬಣ್ಣ ಬಯಲು ಮಾಡಲು ನಾವು ರಾತ್ರಿ ಸುಮಾರು 10 ಗಂಟೆಗೆ ನೆಲಮಂಗಲದಿಂದಲೇ ಲಾರಿ ಹತ್ತಿದ್ವಿ. ಆರ್​ಟಿಓ ಗ್ಯಾಂಗ್​ ಎಲ್ಲಿದೆ ಅಂತ ಹುಡುಕುತ್ತಾ ಹುಡುಕುತ್ತಾ ಸಾಗಿದ್ವಿ. ನಮಗೆ ಮೊದಲು ಎದುರಾಗಿದ್ದು ಹೊಸಪೇಟೆಯ ಹೈವೇ ಪಕ್ಕಾ ನಿಂತ ಆರ್​ಟಿಓ ಗ್ಯಾಂಗ್​. ಆಗ ಸುಮಾರು ಮುಂಜಾನೆ ಆರು ಗಂಟೆಯ ಹೊತ್ತು. ಕ್ಲೀನರ್​ ವೇಷ ಧರಿಸಿ ನಾವು ಆರ್​ಟಿಓ ಗ್ಯಾಂಗ್​ ಬಳಿ ಸಾಗಿದ್ವಿ. ಆಗ ಅವರು ನಿಮ್ಮ ಲಾರಿಯಲ್ಲಿ 250 ಕೆ.ಜಿ ಜಾಸ್ತಿ ಇದೆ ಮಾಮೂಲು ಕೊಟ್ಟು ಹೋಗಿ ಅಂತ ಮಾಮೂಲಾಗಿ ಹೇಳಿದ್ರು. ನಾವೂ 500 ರೂಪಾಯಿ ಕೊಟ್ವಿ. ನಂತ್ರ ನಾವು ಅಲ್ಲೇ ಸುಮಾರು ಅರ್ಧ ಗಂಟೆ ಕಾಲ ಕಾದು ಅವರು ಮಾಡುತ್ತಿದ್ದ ದರೋಡೆಯನ್ನ ಲೈವಾಗಿ ಶೂಟ್​ ಮಾಡಿದ್ವಿ. ಒಂದು ಸೆಕೆಂಡ್​ ಕೂಡ ಪುರುಸೋತ್ತು ಇಲ್ಲದೆ ಈ ಗ್ಯಾಂಗ್​ ಬಿಂದಾಸಾಗಿ ಎರಡೂ ಬದಿಯ ರಸ್ತೆಯಲ್ಲಿ ಲಾರಿಗಳನ್ನ ಲೂಟಿ ಹೊಡಿತಾನೇ ಸಾಗುತ್ತಿತ್ತು. ಪ್ರತಿಯೊಬ್ರು ಹುಂಡಿಗೆ ಕಾಸು ಹಾಕೋ ರೀತಿಯಲ್ಲಿ 200 ರೂಪಾಯಿಯಿಂದ ಸಾವಿರ, ಎರಡು ಸಾವಿರ ರೂಪಾಯಿ ಕೊಡುತ್ತಾ ಸಾಗುತ್ತಿದ್ರು. ಯಾವ ರಶೀದಿ ಇಲ್ಲ, ದಾಖಲೆ ಚೆಕ್ಕಿಂಗ್​ ಇಲ್ಲ. ಇನ್ನೊಂದು ವಿಚಾರ ಅಂದ್ರೆ ಇವರು ಎಲ್ಲರನ್ನೂ ಅನುಮಾನದಿಂದಲೇ ದೃಷ್ಟಿಯಿಂದಲೇ ನೋಡ್ತಿರ್ತಾರೆ. ಯಾವ ಗಾಡಿ ಕೂಡ ಹತ್ತಿರ ನಿಲ್ಲಬಾರದು. ನಿಂತ್ರೆ ಪದೇ ಪದೇ ಬಂದು ವಿಚಾರಿಸ್ತಾರೆ. ಗಾಡಿಯನ್ನ ಅಲ್ಲಿಂದ ತೆಗೆಯಲು ಹೇಳ್ತಾರೆ. ಯಾರೂ ಅವರ ಜೀಪ್​ ಹತ್ತಿರ ಸುಳಿಯಲೂಬಾರದು. ಹತ್ತಿರ ಬಂದ್ರೆ ಕೆಟ್ಟ ಕೆಟ್ಟ ಮಾತುಗಳಿಂದ ಬೈಯುತ್ತಾರೆ.

ಕೊಪ್ಪಳದಲ್ಲಿ ಸಿಕ್ಕಿ ಬಿದ್ರು ಕಳ್ರು !: ಹೊಸಪೇಟೆಯ ರೋಡ್​ ರಾಬರಿ ನೋಡಿ ಗಾಬರಿಗೊಂಡ ನಾವು ಮುಂದೆ ಸಾಗಿದ್ದು ಕೊಪ್ಪಳಕ್ಕೆ. ಕೊಪ್ಪಳದಲ್ಲೂ ಇದೇ ಪರಿಸ್ಥಿತಿ. ಅಗಳಕೇರಾದಲ್ಲಿ ಈ ಗ್ಯಾಂಗ್ ಮರದ ಪೊದೆಯೊಳಗೆ ಅಡಗಿ ನಿಂತು ಲೂಟಿ ಕೆಲಸದಲ್ಲಿ ತೊಡಗಿತ್ತು. ಇವರ ಬಳಿಯೂ ನಾವು ಕ್ಲೀನರ್​ ರೀತಿ ಹೋಗಿ ಮಾತನಾಡಿದ್ವಿ. ನಮ್ಮ ಬಿಲ್​ ನೋಡಿ ಮಾಮೂಲು ಕೊಟ್ಟು ಹೋಗಲು ಹೇಳಿದ್ರು. ನಾವು ಮರು ಮಾತಾಡದೇ 200 ರೂಪಾಯಿ ಕೊಟ್ವಿ. ಇಲ್ಲಿಯಂತೂ ಯೂನಿಫಾರಂ ಇರುವವರಿಗಿಂತ ಯೂನಿಫಾರಂ ಇಲ್ಲದವರ ದರ್ಬಾರೇ ಹೆಚ್ಚಿತ್ತು. ನಾವು ಇವರ ಲೂಟಿ ಕಾರ್ಯದ ರಹಸ್ಯ ಕಾರ್ಯಾಚರಣೆ ಮಾಡುತ್ತಿದ್ದಾಗ ಇವರಿಗೆ ಅದ್ಹೇಗೋ ಅನುಮಾನ ಬಂತು. ಆರ್​ಟಿಓ ಅಧಿಕಾರಿ ನಮ್ಮ ಬಳಿ ಬಂದು ವಿಚಾರಿಸಿದ್ರು. ನಾವು ಏನೋ ಕಾರಣ ಹೇಳಿ ತಪ್ಪಿಸಿಕೊಂಡ್ವಿ. ಆದ್ರೆ ಕಳ್ಳರ ಮನಸ್ಸು ಹುಳ್ಳ ಹುಳ್ಳಗೆ ಅನ್ನೋ ರೀತಿ ಅಷ್ಟು ಹೊತ್ತು ರಾಜಾರೋಷವಾಗಿ ರಸ್ತೆಯಲ್ಲಿ ನಿಂತು ದರೋಡೆ ಮಾಡ್ತಿದ್ದ ಆರ್​ಟಿಓ ತಂಡ ಎಲ್ಲಾ ಕೆಲಸ ನಿಲ್ಲಿಸಿ ಅಲ್ಲಿಂದ ಪರಾರಿಯಾಯ್ತು. ಎಂಥಾ ನಾಚಿಕೆಗೇಡಿನ ಕೆಲಸ ಮಾಡ್ತಿದ್ದಾರೆ ನೋಡಿ. ಇವರು ಭುಜಕ್ಕೆ ಸ್ಟಾರು….. ಮುಖಕ್ಕೆ ಸಂಬಳ ಬೇರೆ ಕೇಡು.

ದಾವಣಗೆರೆಯ ದರೋಡೆ ನೋಡಿ !: ಕೊಪ್ಪಳದ ಆರ್​ಟಿಓ ಕಳ್ಳರ ಗ್ಯಾಂಗ್​ನ ರಹಸ್ಯ ಕಾರ್ಯಾಚರಣೆ ಮುಗಿಸಿ ನಾವು ದಾವಣಗೆರೆಗೆ ಸಾಗಿದ್ವಿ. ದಾವಣಗೆರೆಯ ಜಗಳೂರಲ್ಲಿ ಆರ್​ಟಿಓ ಮಾಡ್ತಿದ್ದ ರೋಡ್​ ರಾಬರಿಯಂತು ವಿಚಿತ್ರವಾಗಿತ್ತು. ಇವರ ಲೂಟಿ ಕೆಲಸಕ್ಕೆ ಸಾಟಿಯೇ ಇಲ್ಲ ಬಿಡಿ. ಹತ್ತಾರು ರೌಡಿಗಳು ಹಾಗೂ ಚೇಲಾಗಳನ್ನ ಇಟ್ಟು ಕೊಂಡು ಲಾರಿ ಚಾಲಕರನ್ನ ಇನ್ನಿಲ್ಲದಂತೆ ಪೀಡಿಸಿ ಹಣ ಪೀಕುತ್ತಿದ್ರು. ಲೋಡ್​ ಇಲ್ಲದೆ ಖಾಲಿಯಾಗಿ ಓಡುತ್ತಿದ್ದ ಗಾಡಿಯನ್ನೂ ನಿಲ್ಲಿಸಿ ಇನ್ನೂರು ರೂಪಾಯಿ ಕೀಳುತ್ತಿದ್ರು ಕೀಚಕರು. ಇವರು ಹಾಡಹಗಲೇ ದರೋಡೆ ಮಾಡ್ತಿದ್ದ ರೀತಿ ಮಾತ್ರ ನಮಲ್ಲಿ ಅಚ್ಚರಿ ಮೂಡಿಸಿತ್ತು. ಇವರು ಈ ರೀತಿ ಲೂಟಿ ಕಾರ್ಯ ಮಾಡುತ್ತಿರೋದು ಯಾರ ಕಣ್ಣಿಗೂ ಕಾಣಿಸ್ತಿಲ್ವಾ? ಅಲ್ಲಾ ನಮ್ಮ ಸರ್ಕಾರ ಸತ್ತೇ ಹೋಗಿದೆಯಾ? ಅಥವಾ ನಮ್ಮ ಸಾರಿಗೆ ಸಚಿವರೇ ಇವರನ್ನು ಲೂಟಿ ಕಾರ್ಯಕ್ಕೆ ರೋಡಿಗಿಸಿದ್ದಾರಾ? ಈ ಪ್ರಶ್ನೆ ನಮ್ಮನ್ನ ಪದೇ ಪದೇ ಕಾಡುತ್ತಿತ್ತು.

ಚಿತ್ರದುರ್ಗಾದಲ್ಲಿ ಚಿತ್ರಹಿಂಸೆ: ಅಲ್ಲಿಂದ ನಾವು ಮುಂದೆ ಸಾಗಿದಾಗ ನಮಗೆ ಹೈವೇ ಮಧ್ಯದಲ್ಲೇ ಒಂದು ಗ್ಯಾಂಗ್​ ಸಿಕ್ತು. ಈ ಆರ್​ಟಿಓ ಗ್ಯಾಂಗ್​ ಮಾತ್ರ ವಾಹನ ಚಾಲಕರಿಗೆ ಚಿತ್ರಹಿಂಸೆ ಕೊಡುತ್ತಿತ್ತು. ಇಲ್ಲೂ ಸಮವಸ್ತ್ರ ಇಲ್ಲದ ದೊಡ್ಡ ಗ್ಯಾಂಗೇ ಕಾರ್ಯನಿರ್ವಹಿಸುತ್ತಿತ್ತು. ವೇಗವಾಗಿ ಸಾಗೋ ಗಾಡಿಗಳಿಗೆ ರಸ್ತೆ ಮಧ್ಯದಲ್ಲೇ ಕೈಹಾಕಿ ಪಕ್ಕಕ್ಕೆ ಕರೀತ್ತಿತ್ತು. ಇವರ ಗ್ಯಾಂಗ್​ನಿಂದ ಯಾರೂ ತಪ್ಪಿಸಿಕೊಳ್ಳುವ ಹಾಗಿಲ್ಲ. ಮಾಮೂಲು ಕೊಟ್ರೆ ಸುಲಭವಾಗಿ ಸಾಗಬಹುದು. ಲಂಚ ಕೊಟ್ಟಿಲ್ಲಾಂದ್ರೆ ನಾನಾ ಕಾರಣ ಕೊಟ್ಟು ಪೀಡಿಸ್ತಾರೆ. ಸಮವಸ್ತ್ರ ಧರಿಸಿಲ್ಲ, ಹೆಡ್​​ಲೈಟ್​ಗೆ ಕಪ್ಪು ಪಟ್ಟಿ ಇಲ್ಲ, ನೇಮ್​ಪ್ಲೇಟ್​ ಸರಿಯಾಗಿ ಬರೆದಿಲ್ಲ, ಗಾಡಿಗೆ ಪೈಂಟ್​ ಇಲ್ಲ ಹೀಗೆ ಹತ್ತಾರು ಕಾರಣ ಹೇಳಿ ಸಾವಿರಾರು ರೂಪಾಯಿ ದಂಡ ಬರೀತಾರೆ. ಒಂದೆರೆಡು ದಿನ ಗಾಡಿಯನ್ನ ರಸ್ತೆ ಪಕ್ಕದಲ್ಲೇ ನಿಲ್ಲಿಸ್ತಾರೆ. ಇನ್ನಿಲ್ಲದ ಕಾಟ ಕೊಡ್ತಾರೆ.

ಇವರ ಈ ಕಾಟದಿಂದಲೇ ಯಾವ ಚಾಲಕರೂ ಕೂಡ ಏನೂ ಪ್ರಶ್ನಿಸದೆ ಇವರು ಕೇಳುವಷ್ಟು ಹಣ ಕೊಟ್ಟು ಮುಂದೆ ಸಾಗ್ತಾರೆ. ಈ ಚಿತ್ರ ಹಿಂಸೆಯ ಚಿತ್ರಣವನ್ನ ಕ್ಯಾಮರಾ ಕಣ್ಣಲ್ಲಿ ಸೆರೆಮಾಡಿ ನಾವು ಮುಂದೆ ಸಾಗಿದ್ವಿ.

ಶಿರಾದಲ್ಲಿ ಶಿವ ಶಿವಾ: ನಾವು ಕರಜೀವನಹಳ್ಳಿ ಟೋಲ್​ ದಾಟುತ್ತಿದ್ದಂತೆ ನಮಗೆ ಎದುರಾಯಿತು ಮತ್ತೊಂದು ರಾಬರ್ಸ್​ ಗ್ಯಾಂಗ್​. ಈ ಆರ್​ಟಿಓ ಗ್ಯಾಂಗ್​ ಮಾಡೋ ನೀಚ ಕೆಲಸದಿಂದ ಲಾರಿ ಚಾಲಕರಂತು ರೋಸಿ ಹೋಗಿದ್ದಾರೆ. ಇವರು 24×7 ಕೆಲಸ ಮಾಡ್ತಾರೆ. ಆದ್ರೆ ಸರ್ಕಾರಿ ಕೆಲಸ ಅಲ್ಲ. ಸರ್ಕಾರವನ್ನ ಲೂಟಿ ಹೊಡೆಯೋ ಕೆಲಸ. ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕೋ ಕೆಲಸ. ಗುಡಿಯಲ್ಲಿ ದೇವರು ತಪ್ಪಿದ್ರೂ, ಈ ಜಾಗದಲ್ಲಿ ಮಾತ್ರ ಆರ್​ಟಿಓ ಗ್ಯಾಂಗ್​ ತಪ್ಪಲ್ಲ. ಇವರು ದಿನಕ್ಕೆ ಕನಿಷ್ಟ ಅಂದ್ರು ಇಪ್ಪತ್ತರಿಂದ ಮೂವತ್ತು ಲಕ್ಷ ಲಂಚ ಹೊಡಿತಾರೆ. ಲಾರಿಗಳ ಮಧ್ಯೆ ಗಾಡಿ ನಿಲ್ಲಿಸಿ ಮಾಡೋ ಇವರ ಕಳ್ಳ ಕೆಲಸ ನಮ್ಮಲ್ಲಿ ಹೇಸಿಗೆ ಮೂಡಿಸುತ್ತೆ.

ಅತ್ತಿಬೆಲೆಯಲ್ಲಿ ಭರ್ಜರಿ ಲೂಟಿ: ಶಿರಾದಲ್ಲಿ ಆರ್​ಟಿಓ ಅಧಿಕಾರಿಗಳು ನಡೆಸುತ್ತಿದ್ದ ಕೆಲಸ ನೋಡಿ ನಾವು ಶಿವ ಶಿವಾ ಅಂದ ನಾವು ಮುಂದೆ ಸಾಗಿದ ನಾವು ಅತ್ತಿಬೆಲೆಗೆ ಸಾಗಿದ್ವಿ. ಇಲ್ಲಿಯ ವ್ಯವಸ್ಥೆ ವಿಚಿತ್ರವಾಗಿದೆ. ಇಲ್ಲಿಯಂತು ಲೂಟಿ ಕಾರ್ಯ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ಇಲ್ಲಿ 18ಕ್ಕಿಂತಲೂ ಹೆಚ್ಚು ಆರ್​ಟಿಓ ಇನ್ಸ್​ಪೆಕ್ಟರ್​​ಗಳಿದ್ದಾರೆ. ಅವರು ಲಂಚ ಪಡೆದ ಮೇಲೆ ಲಾರಿ ಚಾಲಕರ ಕೈಗೆ ಸೀಲ್​ ಹಾಕ್ತಾರೆ. ಆ ಸೀಲು ಲಂಚ ಕೊಟ್ಟಿದ್ದಕ್ಕೆ ಗುರುತಾಗಿರುತ್ತೆ. ಪ್ರತಿ ಲಾರಿ ಚಾಲಕರು ಇಲ್ಲಿ ಬಂದು ಸೀಲು ಹಾಕಿಸಿ ಹೋಗಬೇಕು. ಈ ಜಾಗದಲ್ಲಂತು ದಿನಕ್ಕೆ ಕನಿಷ್ಟ ಅಂದ್ರು 40 ಲಕ್ಷಕ್ಕಿಂತಲೂ ಹೆಚ್ಚು ಲಂಚ ಸಂಗ್ರಹ ಆಗುತ್ತಂತೆ. ಇದು ರಾಜ್ಯದ ಝಳಕಿ ಚೆಕ್​ಪೋಸ್ಟ್​ಗೆ ಸ್ಪರ್ಧೆ ಕೊಡುತ್ತಿದೆ. ಜಳಕಿ ಚೆಕ್​ಪೋಸ್ಟ್​ನಲ್ಲಿ ದಿನಕ್ಕೆ 80 ಲಕ್ಷ ಲಂಚ ಸಂಗ್ರವಾಗುತ್ತಂತೆ.

ಕೇಳಿ ಅಚ್ಚರಿಯಾಗುತ್ತಲ್ಲ. ಕವರ್​ಸ್ಟೋರಿ ತಂಡ ಇವರ ಲೂಟಿ ಕಾರ್ಯವನ್ನ ಸಚಿತ್ರವಾಗಿ ಸೆರೆ ಹಿಡಿದಿದೆ. ಇದು ನಿರಂತರವಾಗಿ ಸಾಗುತ್ತಿರೋ ಪ್ರಕ್ರಿಯೆ. ಇಲ್ಲಿನ ಆರ್​ಟಿಓ ಅಧಿಕಾರಿಗಳು ಕೂಡ ಪೋಸ್ಟಿಂಗ್​ಗೆ 40 ರಿಂದ 80 ಲಕ್ಷ ರೂಪಾಯಿ ಲಂಚ ಕೊಟ್ಟಿರುತ್ತಾರಂತೆ. ಅವರು ಆರೇ ತಿಂಗಳಲ್ಲಿ ತಮಗೆ ಬೇಕಾದಷ್ಟು ಹಣ ಲೂಟಿ ಹೊಡೆದು ಇನ್ನೊಂದು ಕಡೆ ಸಾಗ್ತಾರಂತೆ. ಹೇಗಿದೆ ನಮ್ಮ ಸಾರಿಗೆ ವ್ಯವಸ್ಥೆ. ಭ್ರಷ್ಟರಿಂದ ತುಂಬಿ ತುಳುಕುತ್ತಿರೋ ರಾಜ್ಯದ ಆರ್​ಟಿಓವನ್ನ ಸ್ವಚ್ಛ ಮಾಡಲು ಸಾಧ್ಯವೇ ಇಲ್ವಾ ಅನ್ನೋ ಪ್ರಶ್ನೆಯನ್ನ ನಾಡಿನ ಪ್ರತಿಯೊಬ್ಬ ಲಾರಿ ಚಾಲಕ, ಮಾಲಕ ಕೇಳುತ್ತಿದ್ದಾನೆ. ಇವರ ಈ ದರೋಡೆಯಿಂದ ಬರೀ ಲಾರಿಯವರಿಗೆ ಮಾತ್ರ ಅಲ್ಲ ನಮ್ಮ ಜೇಬಿಗೂ ಕತ್ತರಿ ಬೀಳುತ್ತಿದೆ ಅನ್ನೋದನ್ನ ಮರೆಯುವ ಹಾಗಿಲ್ಲ. ಮುಖ್ಯಮಂತ್ರಿಗಳೇ ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕೋ ಈ ಕಳ್ಳರ ಗ್ಯಾಂಗ್​ಗೆ ನೀವಾದ್ರೂ ಮೂಗುದಾರ ಹಾಕ್ತಿರಾ?

Write A Comment