ಕರ್ನಾಟಕ

ಹಿಂದುತ್ವದ ಹೆಸರಿನಲ್ಲಿ ಬುಡಕಟ್ಟು ಸಮುದಾಯದ ವಿಭಜನೆ: ಕಾರಟ್

Pinterest LinkedIn Tumblr

karathooooಬೆಂಗಳೂರು, ನ.22: ಹಿಂದುತ್ವದ ಹೆಸರಿನಲ್ಲಿ ಆದಿವಾಸಿ ಹಾಗೂ ಬುಡಕಟ್ಟು ಸಮುದಾಯವನ್ನು ತುಳಿತಕ್ಕೆ ಒಳಗಾದ ಇತರ ಸಮುದಾಯಗಳೊಂದಿಗೆ ವಿಭಜಿಸುವ ಷಡ್ಯಂತ್ರವನ್ನು ಸಂಘಪರಿವಾರ ಮಾಡುತ್ತಿದೆ ಎಂದು ರಾಷ್ಟ್ರೀಯ ಆದಿವಾಸಿ ಅಧಿಕಾರ್ ಮಂಚ್ ಉಪಾಧ್ಯಕ್ಷೆ ಬೃಂದಾ ಕಾರಟ್ ಕಿಡಿಕಾರಿದ್ದಾರೆ.
ರವಿವಾರ ನಗರದ ಕೆ.ಎಚ್.ಪಾಟೀಲ್ ಸಭಾಂಗಣದಲ್ಲಿ ರಾಜ್ಯ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಆಯೋಜಿಸಿದ್ದ ‘ಆದಿವಾಸಿ ಬುಡಕಟ್ಟು ಸಮುದಾಯಗಳ ಬದುಕು-ಬವಣೆ’ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣ ಹಾಗೂ ಹಕ್ಕೊತ್ತಾಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜವನ್ನು ಒಡೆಯುವವರ ವಿರುದ್ಧ ಧ್ವನಿ ಎತ್ತಿದರೆ ನಮ್ಮನ್ನು ರಾಷ್ಟ್ರವಿರೋಧಿಗಳು ಎಂದು ಕರೆಯುತ್ತಾರೆ. ಈ ದೇಶದ ಅತಿದೊಡ್ಡ ರಾಷ್ಟ್ರವಿರೋಧಿಗಳು ಆರೆಸ್ಸೆಸ್ ಕಚೇರಿಗಳಲ್ಲಿ ಕೂತಿದ್ದಾರೆ. ಭಾರತದ ಜಾತ್ಯತೀತ ಅಸ್ತಿತ್ವವನ್ನು ಉಳಿಸಲು, ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸಲು ಸಂಘಟಿತ ಹೋರಾಟದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹಾಗೂ ವಿಚಾರವಾದಿ ಪನ್ಸಾರೆ ಹತ್ಯೆ, ಸಾಹಿತಿ ಗಿರೀಶ್‌ಕಾರ್ನಾಡ್ ಮೇಲೆ ಇತ್ತೀಚೆಗೆ ನಡೆಯುತ್ತಿರುವ ವಾಗ್ದಾಳಿ ಗಳನ್ನು ಆ ಕ್ಷಣದಲ್ಲಿ ಉದ್ಭವಿಸುತ್ತಿರುವ ಪ್ರತಿಕ್ರಿಯೆ ಅಥವಾ ಅಸಹನೆ ಎಂದು ಪರಿಗಣಿ ಸಲು ಸಾಧ್ಯವಿಲ್ಲ. ಹಿಂದೂರಾಷ್ಟ್ರದ ಸಂಸ್ಕೃತಿಯನ್ನು ನಮ್ಮ ಮೇಲೆ ಹೇರುವಂತಹ ಒಂದು ವ್ಯವಸ್ಥಿತ ಯೋಜನೆಯ ಭಾಗ ಇದಾಗಿದೆ ಎಂದು ಅವರು ಆರೋಪಿಸಿದರು. ಪ್ರಧಾನಿ ನರೇಂದ್ರಮೋದಿ ಕೌಶಲ ಅಭಿವೃದ್ಧಿ, ಜ್ಞಾನಾಭಿವೃದ್ಧಿ, ಡಿಜಿಟಲ್ ಇಂಡಿಯಾದ ಬಗ್ಗೆ ಮಾತನಾಡುತ್ತಾರೆ. ಆದರೆ, ಬುಡಕಟ್ಟು ಸಮುದಾಯಗಳು ಹಾಗೂ ಆದಿವಾಸಿಗಳು ವಾಸಿಸುವಂತಹ ಪ್ರದೇಶಗಳಲ್ಲಿ ಒಂದೇ ಒಂದು ಕೌಶಲ ತರಬೇತಿ ಕೇಂದ್ರವನ್ನು ಯಾಕೆ ಸ್ಥಾಪಿಸಲಿಲ್ಲ ಎಂದು ಅವರು ಪ್ರಶ್ನಿಸಿದರು.
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತಮ್ಮ ಬಜೆಟ್‌ನಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು, ಕಾರ್ಪೊರೇಟ್ ವಲಯಕ್ಕೆ 5 ಲಕ್ಷ ಕೋಟಿ ರೂ.ತೆರಿಗೆ ವಿನಾಯಿತಿ ನೀಡುತ್ತಾರೆ. ಶೇ.8.6ರಷ್ಟು ಜನಸಂಖ್ಯೆಯನ್ನು ಹೊಂದಿರುವ ಬುಡಕಟ್ಟು ಹಾಗೂ ಆದಿವಾಸಿಗಳ ಕಲ್ಯಾಣಕ್ಕೆ ಲಭ್ಯವಾಗಬೇಕಿದ್ದ 40 ಸಾವಿರ ಕೋಟಿ ರೂ.ಗಳ ಪೈಕಿ ಕೇವಲ 19,800 ಕೋಟಿ ರೂ.ಗಳನ್ನು ಮಾತ್ರ ಒದಗಿಸಿದ್ದಾರೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ಅರಣ್ಯಪ್ರದೇಶದಲ್ಲಿ ತಲೆ ತಲಾಂತರದಿಂದ ವಾಸಿಸುತ್ತಿದ್ದು, ಕೃಷಿ ಚಟುವಟಕೆಗಳನ್ನು ಮಾಡುತ್ತಾ ಅರಣ್ಯವನ್ನು ಸಂರಕ್ಷಿಸುತ್ತಿರುವ ಆದಿವಾಸಿಗಳು ಹಾಗೂ ಬುಡಕಟ್ಟು ಸಮುದಾಯಗಳಿಗೆ ಭೂಮಿಯ ಹಕ್ಕು ನೀಡುವ ಅರಣ್ಯ ಹಕ್ಕು ಕಾಯ್ದೆಯನ್ನು 2005ರಲ್ಲಿ ಜಾರಿಗೆ ತರಲಾಗಿದೆ. ಆದರೆ, ಈವರೆಗೆ ಅದನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಸುಂದರ ಮಲೆಕುಡಿಯ ತಮ್ಮ ಪತ್ನಿ ರೇವತಿ ಹಾಗೂ ಮಕ್ಕಳೊಂದಿಗೆ ಹಲವು ದಶಕಗಳಿಂದ ಅರಣ್ಯ ಭೂಮಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಆ ಭೂಮಿಯನ್ನು ಲಪಟಾಯಿಸಲು 1998ರಲ್ಲಿ ಸ್ಥಳೀಯ ಬಿಜೆಪಿ ಮುಖಂಡ ಗೋಪಾಲಗೌಡ ಎಂಬವರು ರೇವತಿ ಮೇಲೆ ಹಲ್ಲೆ ನಡೆಸಿದರು. 2015ರಲ್ಲಿ ಸುಂದರ ಮಲೆಕುಡಿಯ ಅವರ ಕೈಗಳನ್ನು ಕಡಿಯಲಾಗಿದೆ ಎಂದು ಬೃಂದಾ ಕಾರಟ್ ಆಕ್ರೋಶ ವ್ಯಕ್ತಪಡಿಸಿದರು.
ವಿಚಾರ ಸಂಕಿರಣದಲ್ಲಿ ರಾಜ್ಯ ಬಂಜಾರ ಸೇವಾ ಸಂಘದ ಅಧ್ಯಕ್ಷೆ ಹಾಗೂ ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ಸಿಐಟಿಯು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಎಸ್.ವರಲಕ್ಷ್ಮಿ, ರಾಜ್ಯ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದಸ್ವಾಮಿ, ಸುಂದರ್ ಮಲೆಕುಡಿಯ ಅವರ ಪತ್ನಿ ರೇವತಿ ಉಪಸ್ಥಿತರಿದ್ದರು.

Write A Comment