ಕರ್ನಾಟಕ

ವಿದೇಶಿ ‘ಯೂರಿಯಾ’ ತಪಾಸಣೆಗೆ ಕೇಂದ್ರ ಸ್ಥಾಪನೆ: ಅನಂತಕುಮಾರ್

Pinterest LinkedIn Tumblr

Union Minister Ananthkumar presented Canara Bank award to farmers Basavaraj Gadag and Shobha Ashok at Krishi mela at GVVK in Bengaluru on Sunday. - KPN ### Krishi mela at GVVK

ಬೆಂಗಳೂರು, ನ. 22: ವಿದೇಶದಿಂದ ಬರುವ ರಾಸಾಯನಿಕ ಯೂರಿಯಾ ಪರೀಕ್ಷಿಸಲು ದೇಶ ವ್ಯಾಪ್ತಿ ಎಲ್ಲ ಬಂದರುಗಳಲ್ಲಿ ಬೇವು ಲೇಪನ ತಪಾಸಣೆ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳುವುದಾಗಿ ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಅನಂತಕುಮಾರ್ ಹೇಳಿದ್ದಾರೆ.
ರವಿವಾರ ನಗರದಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ)ಯಲ್ಲಿ ಕೃಷಿ, ಜಲಾನಯನ, ತೋಟಗಾರಿಕೆ, ಅರಣ್ಯ, ರೇಷ್ಮೆ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಹಾಗೂ ಕರ್ನಾಟಕ ಹಾಲು ಮಹಾಮಂಡಳಿ ವತಿಯಿಂದ ನಾಲ್ಕು ದಿನಗಳಿಂದ ಹಮ್ಮಿಕೊಂಡಿದ್ದ ‘ಬೃಹತ್ ಕೃಷಿ ಮೇಳ-2015’ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತದಲ್ಲಿ ತಯಾರಿಸುತ್ತಿದ್ದ ಯೂರಿಯಾದಲ್ಲಿ ಹಲವು ನ್ಯೂನತೆಗಳಿರುವ ಜೊತೆಗೆ ಅರ್ಧಕ್ಕಿಂತ ಹೆಚ್ಚು ಭಾಗ ಅಕ್ರಮವಾಗಿ ಸರಬರಾಜು ಆಗುತಿತ್ತು. ಆದರೆ, ಇದೀಗ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗಿದೆ. ಅದೇ ರೀತಿ, ವಿದೇಶಗಳಿಂದ ಆಮದು ಮಾಡಿಕೊಳ್ಳುವ ಯೂರಿಯಾದ ಗುಣಮಟ್ಟ ಪರೀಕ್ಷಿಸಲು ಹಾಗೂ ಅಕ್ರಮ ಸರಬರಾಜು ತಡೆಯುವ ಹಿನ್ನೆಲೆಯಲ್ಲಿ ಪ್ರತಿಯೊಂದೂ ಬಂದರು ಕೇಂದ್ರದಲ್ಲಿ ಬೇವು ಲೇಪನ ತಪಾಸಣೆ ಕೇಂದ್ರ ಸ್ಥಾಪಿಸಲಾಗುವುದು ಎಂದರು.
ಕೆಲವೊಂದು ರಾಜ್ಯಗಳಲ್ಲಿ ಯೂರಿಯಾ ತಯಾರಿಕ ಕಾರ್ಖಾನೆ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಯೂರಿಯಾ ತಯಾರಿಕ ಕಾರ್ಖಾನೆ ನಿರ್ಮಿಸಬೇಕು, ಇದಕ್ಕೆ 500 ಎಕರೆ ಜಮೀನು ನೀಡಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಬೆಂಗಳೂರು ವ್ಯಾಪ್ತಿಯ ಬಿಡದಿ ಸುತ್ತ-ಮುತ್ತ ಜಮೀನು ಸಿಕ್ಕರೆ ಕಾರ್ಖಾನೆಗೆ ಹೆಚ್ಚು ಉಪಯೋಗವಾಗಲಿದೆ ಎಂದು ನುಡಿದರು.
ಕೇಂದ್ರದ ಕಾನೂನು ಸಚಿವ ಡಿ.ವಿ. ಸದಾನಂದಗೌಡ ಅವರು ಕೆಲಸಕ್ಕೆ ಬಾರದೆ ಇರುವ 1,741ಕಾನೂನುಗಳಲ್ಲಿ 1,217 ಕಾನೂನುಗಳನ್ನು ವಜಾಗೊಳಿಸಿದ್ದಾರೆ. ಇಂತಹ ಕಾರ್ಯಕ್ಕೆ ಅವರನ್ನು ಗಿನ್ನಿಸ್ ದಾಖಲೆಯಲ್ಲಿ ಸೇರ್ಪಡೆಗೊಳಿಸಬೇಕು ಎಂದ ಅವರು, ಕೇಂದ್ರ ಸರಕಾರವು ಕರ್ನಾಟಕಕ್ಕೆ ಪ್ರಕೃತಿ ವಿಕೋಪ ಬೆಳೆ ನಷ್ಟ ಅನ್ವಯ ಸಾವಿರ ಕೋಟಿ ರೂ.ಕ್ಕಿಂತ ಹೆಚ್ಚು ಅನುದಾನ ನೀಡಿದೆ. ಈ ಹಣವನ್ನು ರೈತರ ಪ್ರಗತಿಗೆ ರಾಜ್ಯ ಸರಕಾರ ಬಳಕೆ ಮಾಡಬೇಕೆಂದು ಒತ್ತಾಯಿಸಿದರು.
ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ರಾಷ್ಟ್ರೀಯ ಬ್ಯಾಂಕ್‌ಗಳು ರೈತ ಸ್ನೇಹಿ ಕಾರ್ಯಕ್ರಮ ರೂಪಿಸಲು ಮುಂದಾದರೆ ರೈತರಲ್ಲಿ ಆತ್ಮ ವಿಶ್ವಾಸ ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಮಟ್ಟದ ಕೃಷಿ ಮೇಳವು ಇತರೆ ಜಿಲ್ಲೆಗಳಿಗೂ ವಿಸ್ತರಿಸಬೇಕಾಗಿದೆ. ಇದರಿಂದ ರೈತರಿಗೆ ಪ್ರೋತ್ಸಾಹ, ಮಾಹಿತಿ ಸಿಗಲಿದ್ದು, ಕೃಷಿ ಕ್ಷೇತ್ರಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದು ಕೃಷಿ ಮೇಳದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಯುವಕರು ಕೃಷಿ ಕ್ಷೇತ್ರದಲ್ಲಿ ಶಾಶ್ವತವಾಗಿ ಉಳಿಯಲು ಆಸಕ್ತಿ ವಹಿಸುತ್ತಿಲ್ಲ ಎಂದ ಅವರು, ರೈತರ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ಸಮಸ್ಯೆ ಬಂದಾಗ ಎದುರಿಸಬೇಕೆಂದು ಸದಾನಂದಗೌಡ ಹೇಳಿದರು.
ಸಮಾರಂಭದಲ್ಲಿ ನಬಾರ್ಡ್ ಮುಖ್ಯ ಮಹಾ ಪ್ರಬಂಧಕ ಎಂ.ಐ.ಗಣಗಿ, ಕೃಷಿ ವಿವಿ ಕುಲಪತಿ ಡಾ.ಎಚ್.ಶಿವಣ್ಣ, ಕೃಷಿ ವಿವಿಯ ವ್ಯವಸ್ಥಾಪನಾ ಮಂಡಳಿ ಸದಸ್ಯೆ ಎಚ್.ಸಿ.ಆಶಾ ಶೇಷಾದ್ರಿ ಸೇರಿ ಪ್ರಮುಖರು ಉಪಸ್ಥಿತರಿದ್ದರು.

Write A Comment