ಕರ್ನಾಟಕ

ಉಭಯ ಸದನಗಳಲ್ಲಿ ನಾಗಮಾರಪಲ್ಲಿಗೆ ಶ್ರದ್ಧಾಂಜಲಿ

Pinterest LinkedIn Tumblr

CM Siddaramaiah with Minister RV Deshapandey, KJ George, TB Jauachadnra, Umashree and MLAs paying tribute to MLA Gurupadappa Nagamarapalli, during winter assembly session at Vidhana soudha, who was passed away today at Vikram Hospital, in Bengaluru on Tuesday 17th November 2015 Pics: www.pics4news.com

ಬೆಂಗಳೂರು, ನ. 17: ಮಾಜಿ ಸಚಿವ, ಬೀದರ್ ವಿಧಾನಸಭಾ ಕ್ಷೇತ್ರದ ಕೆಜೆಪಿ ಶಾಸಕ ಡಾ.ಗುರುಪಾದಪ್ಪ ನಾಗಮಾರಪಲ್ಲಿ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ವಿಧಾನ ಮಂಡಲ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ ಮೃತರ ಗೌರವಾರ್ಥ ಸದನವನ್ನು ನಾಳೆ(ನ.18)ಗೆ ಮುಂದೂಡಲಾಯಿತು.
ಮಂಗಳವಾರ ಮೇಲ್ಮನೆ ಸಭಾಪತಿ ಡಿ.ಎಚ್.ಶಂಕರಮೂರ್ತಿ ಹಾಗೂ ಸ್ಪೀಕರ್ ಕಾಗೋಡು ತಿಮ್ಮಪ್ಪ ಅಧಿಕೃತ ಕಲಾಪ ಆರಂಭಗೊಳ್ಳುತ್ತಿದ್ದಂತೆ ಡಾ.ಗುರುಪಾದಪ್ಪ ನಾಗಮಾರಪಲ್ಲಿ ಅವರ ನಿಧನವನ್ನು ಪ್ರಕಟಿಸಿ, ಸಂತಾಪ ಸೂಚನೆ ನಿರ್ಣಯವನ್ನು ಮಂಡಿಸಿದರು.
ಜನಪರ ವ್ಯಕ್ತಿ: ಸ್ಪೀಕರ್ ಮಂಡಿಸಿದ ಸಂತಾಪ ಸೂಚನೆ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಿನ್ನೆಯವರೆಗೂ ನಮ್ಮೆಂದಿಗಿದ್ದ ಗುರುಪಾದಪ್ಪ ನಾಗಮಾರಪಲ್ಲಿ ಇಂದು ನಮ್ಮೆಂದಿಗಿಲ್ಲ ಎಂಬುದನ್ನು ನಂಬಲು ಆಗುತ್ತಿಲ್ಲ. ಜನಪರ ಕಳಕಳಿಯುಳ್ಳ ವ್ಯಕ್ತಿಯ ನಿಧನದಿಂದ ರಾಜ್ಯಕ್ಕೆ ನಷ್ಟವಾಗಿದೆ ಎಂದು ಗುಣಗಾನ ಮಾಡಿದರು.
ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ಅವರ, ಜನಪ್ರಿಯತೆಗೆ ಸಾಕ್ಷಿ. ಸ್ನೇಹ ಜೀವಿಯಾಗಿದ್ದ ಅವರು ವೈಯಕ್ತಿವಾಗಿ ನನಗೆ ಒಳ್ಳೆಯ ಸ್ನೇಹಿತರಾಗಿದ್ದರು ಎಂದು ನೆನಪಿಸಿಕೊಂಡ ಸಿದ್ದರಾಮಯ್ಯ, ಮೂರು ಅವಧಿಯಲ್ಲಿ ಅವರು ಸಚಿವರಾಗಿದ್ದ ವೇಳೆ ನಾನೂ ಅವರೊಂದಿಗೆ ಸಚಿವನಾಗಿದ್ದೆ ಎಂದು ಸ್ಮರಿಸಿದರು.
ನ.11ರಂದು ಅದ್ದೂರಿಯಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಅವರು, ಸಹಕಾರಿ ಕ್ಷೇತ್ರದ ಹಿರಿಯ ಧುರೀಣರು. ಬೀದರ್‌ನ ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ವಿದ್ಯುತ್ ಘಟಕ ಆರಂಭಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಗುಣಗಾನ ಮಾಡಿದರು.
ವಿಪಕ್ಷಕ್ಕೆ ನಷ್ಟ: ಸಂತಾಪ ಸೂಚನೆ ನಿರ್ಣಯಕ್ಕೆ ಧ್ವನಿಗೂಡಿಸಿ ಮಾತನಾಡಿದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಹಕಾರಿ ಕ್ಷೇತ್ರದ ಬಡವರಿಗೆ ಉಚಿತ ಚಿಕಿತ್ಸೆ ಕಲ್ಪಿಸಲು ರಾಜ್ಯದಲ್ಲಿಯೇ ಮೊಟ್ಟ ಮೊದಲಬಾರಿಗೆ ಸಹಕಾರಿ ಆಸ್ಪತ್ರೆ ಸ್ಥಾಪಿಸುವ ಘೋಷಣೆ ಮಾಡಿದ್ದ ನಾಗಮಾರಪಲ್ಲಿ ನಿಧನದಿಂದ ರಾಜ್ಯಕ್ಕೆ ಹಾಗೂ ಬಿಜೆಪಿಗೆ ತುಂಬಲಾರದ ನಷ್ಟ ಎಂದು ಹೇಳಿದರು.
ಇದಕ್ಕೆ ಧ್ವನಿಗೂಡಿಸಿ ಮಾತನಾಡಿದ ಬಿಜೆಪಿ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಷ್ಟ್ರ ಮಟ್ಟದಲ್ಲಿ ಮಾದರಿಯಾಗಿರುವ ಬೀದರ್ ಜಿಲ್ಲಾ ಸಹಕಾರಿ ಬ್ಯಾಂಕ್ 2022ಕ್ಕೆ ಶತಮಾನೋತ್ಸವ ಆಚರಣೆ ಹಿನ್ನೆಲೆಯಲ್ಲಿ ನಾಗಮಾರಪಲ್ಲಿ ರೂಪಿಸಿದ್ದ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸಚಿವ ಎಚ್.ಎಸ್.ಮಹದೇವ ಪ್ರಸಾದ್, ಜೆಡಿಎಸ್ ಉಪ ನಾಯಕ ವೈಎಸ್‌ವಿ ದತ್ತ, ಆಡಳಿತ ಪಕ್ಷದ ಸಿದ್ದು ನ್ಯಾಮಗೌಡ, ಬಿಜೆಪಿಯ ಪ್ರಭು ಚೌವ್ಹಾಣ್, ಲಕ್ಷ್ಮಣ ಸವದಿ ಸೇರಿದಂತೆ ಹಲವು ಸದಸ್ಯರು ಅಗಲಿದ ಗಣ್ಯರ ಗುಣಗಾನ ಮಾಡಿದರು. ಆ ಬಳಿಕ ಮೃತರ ಗೌರವಾರ್ಥ ಸದನದ ಎಲ್ಲ ಸದಸ್ಯರು ಎದ್ದು ನಿಂತು ಒಂದು ನಿಮಿಷ ವೌನ ಆಚರಿಸಲಾಯಿತು. ಸದನವನ್ನು ನಾಳೆಗೆ ಮುಂದೂಡಲಾಯಿತು.

ಸಿದ್ದರಾಮಯ್ಯ, ದೇವೇಗೌಡರಿಂದ ಅಂತಿಮ ನಮನ
ಬೆಂಗಳೂರು, ನ.17: ಹಾಲಿ ಶಾಸಕ ಹಾಗೂ ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಲ್ಲಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಹಕಾರಿ ಕ್ಷೇತ್ರದ ಧುರೀಣರೂ ಆಗಿದ್ದ ನಾಗಮಾರಪಲ್ಲಿ ಮೊದಲು 1985ರಿಂದ 2007ರ ವರೆಗೆ ಬೀದರ್ ಜಿಲ್ಲೆಯ ಔರಾದ್ ಕ್ಷೇತ್ರ ಹಾಗೂ ಅನಂತರ 2008 ಹಾಗೂ 2013ರಲ್ಲಿ ಬೀದರ್ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಬಂದಿಖಾನೆ, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವರಾಗಿಯೂ ಸೇವೆ ಸಲ್ಲಿಸಿರುವ ಗುರುಪಾದಪ್ಪಸ್ನೇಹಜೀವಿ.
ಚುನಾವಣೆಗಳಲ್ಲಿ ತಾವು ಪ್ರತಿನಿಧಿಸಿದ ಪಕ್ಷದ ಪ್ರಭಾವಕ್ಕಿಂತಲೂ ತಮ್ಮ ಸ್ವಯಂ ವರ್ಚಸ್ಸಿನಿಂದಲೇ ಗೆದ್ದವರು ಎಂಬುದೇ ಹೆಗ್ಗಳಿಕೆ. ಇತ್ತೀಚೆಗೆ ನ.11ರಂದು ಬೀದರ್‌ನಲ್ಲಿ ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ತಮ್ಮ 74ನೆ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡ ನಾಗಮಾರಪಲ್ಲಿ, ನಮ್ಮಿಂದಿಗಿಲ್ಲವೆಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಸಹಕಾರಿ ಕ್ಷೇತ್ರದ ಧುರೀಣ ನಾಗಮಾರಪಲ್ಲಿ ಸಹಕಾರಿ ಸಪ್ತಾಹದ ನಡುವೆಯೇ ನಮ್ಮನ್ನು ಅಗಲಿರುವುದು ಅಚ್ಚರಿ ಹಾಗೂ ಕಾಕತಾಳೀಯ ಎಂದು ಸಿದ್ದರಾಮಯ್ಯ ಬಣ್ಣಿಸಿದ್ದಾರೆ.

Write A Comment