ಕರ್ನಾಟಕ

ಕಂಠೀರವ ಕ್ರೀಡಾಂಗಣ ವಿಕಲಚೇತನರ ಸ್ನೇಹಿಯಲ್ಲ: ಆಯುಕ್ತ ಕೆ.ಎಸ್.ರಾಜನ್

Pinterest LinkedIn Tumblr

State Commissioner for Persons with Disabilities KS Ramanna examining the disorder at Kanteerava Indoor Stadium in Bengaluru on Tuesday Nov 17 2015 - KPN ### Inspection at Kanteerava Indoor Stadium

ಬೆಂಗಳೂರು, ನ. 17: ಹೆಸರಾಂತ ಕಂಠೀರವ ಕ್ರೀಡಾಂಗಣವು ಪರಿಸರ ಹಾಗೂ ವಿಕಲಚೇತನರ ಸ್ನೇಹಿಯಾಗಿಲ್ಲ ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮ ರಾಜ್ಯ ಆಯುಕ್ತ ಕೆ.ಎಸ್.ರಾಜನ್ ಕಿಡಿಕಾರಿದ್ದಾರೆ.
ಮಂಗಳವಾರ ನಗರದ ಕಂಠೀರವ ಒಳ-ಹೊರ ಕ್ರೀಡಾಂಗಣದಲ್ಲಿ ವಿಕಲಚೇತನರ ಅಡೆ-ತಡೆ ವಾತಾವರಣದ ಬಗ್ಗೆ ಪರಿಶೀಲಿಸಿದ ಆಯುಕ್ತರು, ‘ಏನ್ರಿ ಇದು, ಕ್ರೀಡಾಂಗಣವೇ, ತಿಪ್ಪೆ ತರ ಕಾಣ್ತಿದೆ. ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ವಿಕಲ ಚೇತನರು ಇಲ್ಲಿ ಬರಲಿಕ್ಕೆ ಸಾಧ್ಯವಾ’ ಎಂದು ಕ್ರೀಡಾಂಗಣದ ಅಧಿಕಾರಿಗಳನ್ನು ಪ್ರಶ್ನಿಸಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತ ಕೆ.ಎಸ್.ರಾಜನ್, ಕಂಠೀರವ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಕ್ರೀಡೆಗಳು ನಡೆಯುತ್ತವೆ. ಆದರೆ, ಇಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಹಾಗೂ ಉತ್ತಮ ವಾತಾವರಣ ನಿರ್ಮಿಸಲು ಅಧಿಕಾರಿಗಳು ವಿಫಲಗೊಂಡಿದ್ದಾರೆ ಎಂದು ದೂರಿದರು.
ಕಂಠೀರವ ಒಳ-ಹೊರ ಕ್ರೀಡಾಂಗಣಗಳೆರಡರಲ್ಲಿ ಕಸ ವಿಲೇವಾರಿ ಆಗುತ್ತಿಲ್ಲ. ಎಲ್ಲಿ ನೋಡಿದರೂ ಹಳ್ಳ, ಧೂಳು ಹೆಚ್ಚಾಗಿದೆ. ಕುಳಿತುಕೊಳ್ಳುವ ಜಾಗದಲ್ಲಿಯೂ ಸ್ವಚ್ಛತೆ ಇಲ್ಲ, ಅಧಿಕಾರಿಗಳ ನಿರ್ಲಕ್ಷ ಎದ್ದು ಕಾಣುತ್ತದೆ ಎಂದು ಕಿಡಿಕಾರಿದರು.
ಈಗಾಗಲೇ 2004ರಲ್ಲಿ ಸ್ವಯಂ ಸಭೆ ಏರ್ಪಡಿಸಿ ಅಧಿಕಾರಿಗಳ ನಿರ್ಲಕ್ಷ ಕುರಿತು ದೂರು ನೀಡಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದ ಅಸಮಾಧಾನ ವ್ಯಕ್ತಪಡಿಸಿದ ಅವರು, 30 ದಿನಗಳಲ್ಲಿ ಇದು ವಿಕಲಚೇತನ ಸ್ನೇಹಿ ಕ್ರೀಡಾಂಗಣವಾಗಿ ಮಾರ್ಪಾಡು ಆಗಬೇಕು. ಇಲ್ಲದಿದ್ದಲ್ಲಿ, ಕ್ರೀಡಾಂಗಣ ಉಸ್ತುವಾರಿ ಹಾಗೂ ಕ್ರೀಡಾ ಸಚಿವರಿಗೆ ಲಿಖಿತ ದೂರು ನೀಡಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪರಿಶೀಲನೆ ಸಂದರ್ಭದಲ್ಲಿ ಕ್ರೀಡಾಂಗಣದ ಸಹ ನಿರ್ದೇಶಕ ರಮೇಶ್ ಸೇರಿದಂತೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Write A Comment