ಕರ್ನಾಟಕ

‘ರನ್ ಆಂಟನಿ’ ಸಿನೆಮಾದಲ್ಲಿ ವಿನಯ್ ರಾಜಕುಮಾರ್

Pinterest LinkedIn Tumblr

Vinay

ಬೆಂಗಳೂರು: ತಮ್ಮ ಚೊಚ್ಚಲ ಚಲನಚಿತ್ರ ಸಿದ್ಧಾರ್ಥದಿಂದ ನಿರೀಕ್ಷಿತ ಯಶಸ್ಸೇನು ದೊರಕದಿದ್ದರಿಂದ ವರನಟ ರಾಜಕುಮಾರ್ ಅವರ ಮೊಮ್ಮಗ ವಿನಯ್ ರಾಜಕುಮಾರ್ ಈ ಬಾರಿ ಹೆಚ್ಚು ಚಿಂತನ ಮಂಥನ ನಡೆಸಿದ್ದಾರಂತೆ. ತಮ್ಮ ತಂದೆ ರಾಘವೇಂದ್ರ ರಾಜಕುಮಾರ್ ಅವರೊಂದಿಗೆ ಸುಮಾರು 30 ಸ್ಕ್ರಿಪ್ಟ್ ಗಳನ್ನು ಪರಿಶೀಲಿಸಿ ಕೊನೆಗೆ ‘ರನ್ ಆಂಟನಿ’ ಅಂತಿಮಗೊಳಿಸಿದ್ದಾರೆ.

ಸಿನೆಮಾವನ್ನು ಚೊಚ್ಚಲ ನಿರ್ದೇಶಕ ರಘು ಶಾಸ್ತ್ರಿ ನಿರ್ದೇಶಿಸಲಿದ್ದು, ಸ್ವಂತ ನಿರ್ಮಾಣ ಸಂಸ್ಥೆ ವಜ್ರೇಶ್ವರಿ ಕಂಬೈನ್ಸ್ ಚಿತ್ರ ನಿರ್ಮಿಸಲಿದೆ. ಇದಕ್ಕೂ ಮೊದಲು ನಿರ್ದೇಶಕ ಪ್ರೇಮ್ ಸಿನೆಮಾದಲ್ಲಿ ವಿನಯ್ ನಟಿಸಲಿದ್ದಾರೆ ಎಂಬ ಸುದ್ದಿ ಇದ್ದರೂ ಆ ಯೋಜನೆ ರದ್ದಾಗಿದೆ ಎಂದು ತಿಳಿದುಬಂದಿ.

ಇನ್ನೂ ಅಧಿಕೃತ ದಿನಾಂಕ ನಿಗದಿ ಪಡಿಸಬೇಕಾಗಿದೆ ಎನ್ನುವ ರಾಘವೇಂದ್ರ ರಾಜಕುಮಾರ್ “ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶಕ. ಯುವ ತಂತ್ರಜ್ಞರನ್ನು ಆಯ್ಕೆ ಮಾಡಲು ನಿರ್ದೇಶಕನಿಗೆ ಮುಕ್ತ ಅವಕಾಶ ನೀಡಿದ್ದೇವೆ. ಇನ್ನೆರಡು ದಿನಗಳಲ್ಲಿ ಅಂತಿಮವಾಗಲಿದೆ” ಎಂದು ತಿಳಿಸಿದ್ದಾರೆ.

ನವೆಂಬರ್ ಅಂತ್ಯಕ್ಕೆ ಅಥವಾ ಡಿಸೆಂಬರ್ ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು, ಏಪ್ರಿಲ್ ನಲ್ಲಿ ಸಿನೆಮಾ ತೆರೆ ಕಾಣಲಿದೆ ಎನ್ನಲಾಗಿದೆ.

ವಿನಯ್ ಅವರೇ ಈ ಸ್ಕ್ರಿಪ್ಟ್ ಅಂತಿಮಗೊಳಿಸಿದ್ದು ಎನ್ನುವ ರಾಘವೇಂದ್ರ “ಅವನಿಗೆ ಸ್ಕ್ರಿಪ್ಟ್ ಇಷ್ಟವಾಯಿತು ಆದುದರಿಂದ ನಿರ್ದೇಶಕರ ಜೊತೆ ಮಾತನಾಡಲು ತಿಳಿಸಿದ. ಸ್ಕ್ರಿಪ್ಟ್ ಅವನಿಗೆ ಬಹಳ ಹಿಡಿಸುತ್ತದೆ ಹಾಗೆಯೇ ಶೀರ್ಷಿಕೆ ಕೂಡ” ಎನ್ನುತ್ತಾರೆ.

ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರೊಂದಿಗೆ ಕೆಲಸ ಮಾಡಿರುವ ರಘು ಶಾಸ್ತ್ರಿ ಅವರಿಗೆ ಚೊಚ್ಚಲ ಸಿನೆಮಾವನ್ನು ಕನ್ನಡದಲ್ಲಿ ಮಾಡುತ್ತಿರುವುದಕ್ಕೆ ಸಂತಸ ತಂದಿದೆಯಂತೆ.

Write A Comment