ಕರ್ನಾಟಕ

ನಗರದಲ್ಲಿ ಪ್ಯಾರಾ ಮಿಲಿಟರಿ ಪಥಸಂಚಲನ; ಯಥಾಸ್ಥಿತಿಗೆ ಮರಳಿದ ಕೊಡಗು

Pinterest LinkedIn Tumblr

Z_Police--ಮಡಿಕೇರಿ, ನ. 12: ಟಿಪ್ಪು ಜಯಂತಿಯ ದಿನವಾದ ಮಂಗಳವಾರ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗಲಭೆ ಸೃಷ್ಟಿಯಾಗಿ ಪ್ರಕ್ಷುಬ್ಧಗೊಂಡಿರುವ ಕೊಡಗು ಜಿಲ್ಲೆ ಇದೀಗ ಸಹಜ ಸ್ಥಿತಿಗೆ ಮರಳಿದೆ. ಮಡಿಕೇರಿ ನಗರದಲ್ಲಿ ಗುರುವಾರ ಜನಜೀವನ ಎಂದಿನಂತ್ತಿತ್ತು. ಕೆಎಸ್ಸಾರ್ಟಿಸಿ ಹಾಗೂ ಖಾಸಗಿ ಬಸ್‌ಗಳು, ಆಟೊಗಳು, ಖಾಸಗಿ ವಾಹನಗಳು ಎಂದಿನಂತೆ ಸಂಚರಿಸಿದವು. ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು ಎಂದಿನಂತೆ ವ್ಯಾಪಾರ ವಹಿವಾಟು ನಡೆಸಿದವು.

ಪೆಟ್ರೋಲ್ ಬಂಕ್‌ಗಳು, ಔಷಧ ಮಳಿಗೆಗಳು ತೆರೆದಿದ್ದವು. ದೀಪಾವಳಿ ರಜೆಯಿದ್ದ ಕಾರಣ ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿಗಳು, ಶಾಲಾ ಕಾಲೇಜುಗಳು ಮುಚ್ಚಿದ್ದವು. ಆದರೆ, ಗಲಭೆ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿಯ ಕಾರಣ ಜಿಲ್ಲಾಡಳಿತ ಭವನದ ಕೆಲವು ಸರಕಾರಿ ಕಚೇರಿಗಳು ಕಾರ್ಯನಿರ್ವಹಿಸಿದವು. ನಗರದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು.

ದಕ್ಷಿಣ ವಲಯ ಪೊಲೀಸ್ ನಿರೀಕ್ಷಕ ಬಿಜಯ್ ಕುಮಾರ್ ಸಿಂಹ ನೇತೃತ್ವದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದೆ.

ಸುಮಾರು 200ಕ್ಕೂ ಅಧಿಕ ಸಂಖ್ಯೆಯಲ್ಲಿರುವ ಕೇಂದ್ರೀಯ ಪ್ಯಾರಾ ಮಿಲಿಟರಿ ಪಡೆ ಜಿಲ್ಲೆಗೆ ಆಗಮಿಸಿದ್ದು, ನಗರದಲ್ಲಿ ಪಥಸಂಚಲನ ನಡೆಸಿತು. ಹಿರಿಯ ಅಧಿಕಾರಿಗಳು ಜಿಲ್ಲೆಯಾದ್ಯಂತ ಸಂಚರಿಸಿ ಸಾರ್ವಜನಿಕರಲ್ಲಿ ಧೈರ್ಯ ತುಂಬಿದರು. ನ. 14ರವರೆಗೆ ಜಿಲ್ಲೆಯಲ್ಲಿ 144 ಸೆಕ್ಷನ್ ಮುಂದುವರಿಯಲಿದೆ. ಗುರುವಾರ ಜಿಲ್ಲೆಯಲ್ಲಿ ವದಂತಿಗಳನ್ನು ಹರಡುವುದು ಹಾಗೂ ವಾಟ್ಸ್‌ಆ್ಯಪ್‌ನಲ್ಲಿ ಸುಳ್ಳು ಸುದ್ದಿಗಳನ್ನು ಅಪಪ್ರಚಾರ ಮಾಡುತ್ತಿದ್ದ ಪ್ರಸಂಗಗಳು ನಡೆದವು. ಈ ಬಗ್ಗೆಯೂ ಪೊಲೀಸ್ ಇಲಾಖೆ ನಿಗಾ ವಹಿಸಿದೆ.

Write A Comment