ಕರ್ನಾಟಕ

ಕೊಡಗು ಉತ್ತರದ ಕಾಶ್ಮೀರವಾಗಲು ಅವಕಾಶ ನೀಡಬೇಡಿ: ಸಚಿವ ದಿನೇಶ್

Pinterest LinkedIn Tumblr

dineshಮಡಿಕೇರಿ, ನ. 12: ದಕ್ಷಿಣ ಕಾಶ್ಮೀರವೆಂದೇ ಹೆಸರುವಾಸಿಯಾಗಿರುವ ಕೊಡಗು ಜಿಲ್ಲೆ ಗಲಭೆ, ಘರ್ಷಣೆಗಳ ಮೂಲಕ ಉತ್ತರ ಕಾಶ್ಮೀರವಾಗಿ ಮಾರ್ಪಡಲು ಅವಕಾಶ ನೀಡಬೇಡಿ. ಟಿಪ್ಪು ಜಯಂತಿ ವೇಳೆ ಉಂಟಾದ ಅಹಿತಕರ ಘಟನೆಗಳಿಂದ ಪ್ರಕ್ಷುಬ್ದಗೊಂಡಿರುವ ಜಿಲ್ಲೆಯಲ್ಲಿ ಮತ್ತೆ ಶಾಂತಿ ಸುವ್ಯವಸ್ಥೆ ನೆಲೆಸುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ನೂತನ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಕಡಕ್ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಮಂಗಳವಾರ ನಡೆದ ಘಟನೆಯನ್ನು ಯಾವ ಅಧಿಕಾರಿಯೂ ಹಗುರವಾಗಿ ತೆಗೆದುಕೊಳ್ಳಬಾರದು. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಮರು ಸ್ಥಾಪನೆಯಾಗುವವರೆಗೆ ಎಲ್ಲಾ ಅಧಿಕಾರಿಗಳು ಕೇಂದ್ರಸ್ಥಾನವನ್ನು ಬಿಟ್ಟು ಹೋಗಬಾರದು. ಹಾಗೊಂದು ವೇಳೆ ಕರ್ತವ್ಯಕ್ಕೆ ಗೈರು ಹಾಜರಾದರೆ ಅಥವಾ ಮೊಬೈಲ್ ಕರೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅಧಿಕಾರಿಗಳಲ್ಲಿ ವೈಯಕ್ತಿಕ ಅಭಿಪ್ರಾಯಗಳು ಏನೇ ಇರಬಹುದು. ಆದರೆ ಸರಕಾರಿ ಸೇವೆಯಲ್ಲಿ ಸರಕಾರದ ಆದೇಶವನ್ನು ಪಾಲಿಸುವುದು ಮುಖ್ಯವಾಗಿದೆ. ಅಧಿಕಾ ರಿಗಳ ವೈಯಕ್ತಿಕ ಕಾರಣ ಗಳಿಗಾಗಿ ಜಿಲ್ಲೆಯ ನೆಮ್ಮದಿಗೆ ಭಂಗವಾಗಬಾರದು. ಪರಿಸ್ಥಿತಿಯನ್ನು ಹತೋಟಿಗೆ ತರುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಇಂತಹ ಸಂದರ್ಭದಲ್ಲಿ ವದಂತಿ ಹಬ್ಬುವುದು ಹಾಗೂ ಸಾಮಾ ಜಿಕ ಜಾಲತಾಣಳಲ್ಲಿ ತಪ್ಪು ಮಾಹಿತಿ ರವಾನೆಯಾಗುವುದು ಸಾಮಾನ್ಯವಾಗಿದೆ. ವದಂತಿ ಹಾಗೂ ತಪ್ಪು ಮಾಹಿತಿ ರವಾನಿಸುವವರ ಮೇಲೆ ಅಧಿಕಾರಿಗಳು ನಿಗಾವಹಿಸಬೇಕು ಎಂದು ಸಲಹೆ ನೀಡಿದರು.

ಪೊಲೀಸರಂತೆ ಜಿಲ್ಲಾಡಳಿತದ ಜವಬ್ದಾರಿಯೂ ದೊಡ್ಡದಾಗಿದ್ದು, ತುರ್ತು ಸಂದರ್ಭಗಳಲ್ಲಿ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು. ಶೇ. 90ರಷ್ಟು ಜನರಿಗೆ ಬೇಡವಾಗಿದ್ದ ಈ ಘಟನೆಯನ್ನು ಕೆಲವರು ತಮ್ಮ ಲಾಭಕ್ಕೋಸ್ಕರ ಬಳಸಿಕೊಳ್ಳುವ ಸಾಧ್ಯತೆಗಳಿದ್ದು, ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ ದಿನೇಶ್ ಗುಂಡೂರಾವ್, ಜನರಿಗೆ ಅಭಯ ನೀಡಲು ಪ್ರಯತ್ನಿಸಿ ಎಂದರು. ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಸರ್ಜನ್ ಮುತ್ತ್ಪ ಮಾತನಾಡಿ, ಮಡಿಕೇರಿ ಘರ್ಷಣೆಯ ಬಳಿಕ ಜಿಲ್ಲಾ ಆಸ್ಪತ್ರೆಯಲ್ಲಿ ಮೂವತ್ತು ಮಂದಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ.

ಆದರೆ, ಯಾರೂ ಒಳ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿಲ್ಲ. ಗಲಭೆ ನಡೆದಾಗ ಆಸ್ಪತ್ರೆಯ ವಾರ್ಡ್‌ಗಳಿಗೆ ನುಗ್ಗಿ ಆಶ್ರಯ ಪಡೆದ ಪ್ರಸಂಗಗಳು ನಡೆದಿದೆ ಎಂದು ತಿಳಿಸಿದ ಅವರು, ಒಳ ರೋಗಿಯಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಾನಸಿಕ ರೋಗಿಯೊಬ್ಬರು ಗಲಭೆಯ ವೇಳೆ ಪೊಲೀಸರನ್ನು ಕಂಡು ಗಾಬರಿಯಿಂದ ವಾರ್ಡ್‌ನ ಶೌಚಾಲಯದ ಒಳ ನುಸುಳಿ ವೆಂಟಿಲೇಟರ್‌ನಿಂದ ಇಳಿಯಲು ಪ್ರಯತ್ನಿಸಿದಾಗ ಮೂರು ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆಯೇ ಹೊರತು, ಅವರ ಸಾವಿಗೂ ಗಲಭೆಗೂ ಯಾವುದೇ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿದರು.

Write A Comment