ಕರ್ನಾಟಕ

ಜಿಟಿಜಿಟಿ ಮಳೆ-ದೀಪಾವಳಿ ಹಬ್ಬ; ಕಸ ವಿಲೇವಾರಿಗೆ ಅಧಿಕಾರಿಗಳ ಹೆಣಗಾಟ

Pinterest LinkedIn Tumblr

Festive Garbage being dumped on road side at Ulsoor Bazaar road, in Bengaluru on Thursday 12th November 2015 Pics: www.pics4news.com

ಬೆಂಗಳೂರು, ನ. 12: ಮೂರು ದಿನಗಳಿಂದ ಎಡಬಿಡದೆ ಸುರಿದ ಜಿಟಿಜಿಟಿ ಮಳೆ, ದೀಪಾವಳಿ ಹಬ್ಬ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಕಸದ ಸಮಸ್ಯೆ ಸೃಷ್ಟಿಯಾಗಿದೆ. ನಾಲ್ಕು ಸಾವಿರ ಟನ್‌ಗೂ ಅಧಿಕ ಕಸ ವಿಲೇವಾರಿಯಾಗದೆ ಕೊಳೆಯುತ್ತಿದ್ದು, ಜನತೆ ಮೂಗುಮುಚ್ಚಿಕೊಂಡು ತಿರುಗಾಡಬೇಕಾದ ದುಸ್ಥಿತಿ ಎದುರಾಗಿದೆ.
ದೊಡ್ಡಬಳ್ಳಾಪುರದ ಟೆರ್ರಾಫಾರ್ಮ್‌ನಲ್ಲಿ ಕಸ ವಿಲೇವಾರಿ ಸಂಬಂಧ ಸಿಎಂ ಸಿದ್ದರಾಮಯ್ಯ ಮಧ್ಯಸ್ಥಿಕೆಯಿಂದ ರೈತರ ಪ್ರತಿಭಟನೆ ಕೈಬಿಟ್ಟ ಬೆನ್ನಲ್ಲೆ, ನಗರದಲ್ಲಿ ಸತತ ಮೂರು ದಿನ ಮಳೆ ಸುರಿದಿತ್ತು. ಈ ಮಧ್ಯೆಯೇ ದೀಪಾವಳಿ ಹಬ್ಬದ ಕಸವೂ ಸೇರಿದ್ದರಿಂದ ಸಾವಿರಾರು ಟನ್ ಕಸ ವಿಲೇಗಾಗಿ ಅಧಿಕಾರಿಗಳು ಹೆಣಗಾಡಬೇಕಾಗಿದೆ.
ನಗರದ ಕೆಆರ್ ಮಾರುಕಟ್ಟೆ, ಮಲ್ಲೇಶ್ವರಂ ಮಾರುಕಟ್ಟೆ, ಯಶವಂತಪುರ ಮಾರುಕಟ್ಟೆ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಕಸದ ರಾಶಿ ಹೆಚ್ಚುತ್ತಿದೆ. ಮತ್ತೊಂದು ಕಡೆ ಹಬ್ಬದ ಕಾರಣಕ್ಕೆ ಪೌರ ಕಾರ್ಮಿಕರ ರಜೆ ಹಿನ್ನೆಲೆಯಲ್ಲಿ ಮುಖ್ಯ ಬೀದಿಗಳು ಸೇರಿದಂತೆ ನಗರ ನೈರ್ಮಲ್ಯವಿಲ್ಲದೆ ಅಕ್ಷರಶಃ ಗಬ್ಬೆದ್ದು ನಾರುತ್ತಿದೆ.
ಟೆರ್ರಾಫಾರ್ಮ್, ಕನ್ನಳ್ಳಿ ಹಾಗೂ ಸೀಗೆಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ನಗರದಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುತ್ತಿರುವ ಕಸವನ್ನು ಸಾಗಿಸಲಾಗುತ್ತಿದೆ. ಆದರೆ, ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ, ಹೂವು, ಬಾಳೆಕಂಬಗಳಿಂದ ಉತ್ಪತ್ತಿಯಾಗಿರುವ ಹೆಚ್ಚುವರಿ ಕಸ ವಿಲೇವಾರಿಗೆ ಸಮಸ್ಯೆ ಸೃಷ್ಟಿಯಾಗಿದೆ.
ನಗರದಲ್ಲಿ ಇನ್ನು ಒಂದೆರಡು ದಿನ ಕಸದ ಸಮಸ್ಯೆ ಇರಲಿದ್ದು, ಶೀಘ್ರದಲ್ಲೇ ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಇದೀಗ ಮಳೆಯೂ ಪೂರ್ಣ ನಿಂತಿದ್ದು, ಕಸದ ಸಮಸ್ಯೆ ಪರಿಹಾರವಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

Write A Comment