ಕರ್ನಾಟಕ

ಮಡಿಕೇರಿ ಜಿಲ್ಲೆಯಾದ್ಯಂತ ಭಾರೀ ಬಿಗಿ ಭದ್ರತೆ; ಮುನ್ನೆಚ್ಚರಿಕೆ ಕ್ರಮವಾಗಿ 144 ಸೆಕ್ಷನ್ ನಿಷೇಧಾಜ್ಞೆ ಜಾರಿ

Pinterest LinkedIn Tumblr

Madikeri

ಮಡಿಕೇರಿ,ನ.11: ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯ ಸಂದರ್ಭದಲ್ಲಿ ಉಂಟಾದ ಗಲಭೆಯಿಂದ ಪರಿಸ್ಥಿತಿ ಇನ್ನಷ್ಟು ಉದ್ವಿಗ್ನವಾಗಿದ್ದು ಎಲ್ಲೆಡೆ ಅಘೋಷಿತ ಬಂದ್ ನಿರ್ಮಾಣವಾಗಿದೆ. ಯಾವುದೇ ವೇಳೆ ಹಿಂಸಾಚಾರ ಮತ್ತೆ ಭುಗಿಲೇಳುವ ಸಾಧ್ಯತೆ ಇರುವುದರಿಂದ ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳು ಸೇರಿದಂತೆ ಜಿಲ್ಲೆಯಾದ್ಯಂತ ಭಾರೀ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ನಿನ್ನೆ ನಡೆದ ಮೆರವಣಿಗೆಯಲ್ಲಿ ಹಿಂಸಾಚಾರ ನಡೆದ ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ವಿಎಚ್‌ಪಿ ನಾಯಕ ಕುಟ್ಟಪ್ಪ ಅವರ ಅಂತ್ಯ ಸಂಸ್ಕಾರ ಇಂದು ನಡೆಯಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ 144 ಸೆಕ್ಷನ್ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಸದ್ಯಕ್ಕೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿದೆ.

ನಗರದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದ್ದು, ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಹೇರಲಾಗಿದೆ. ಏತನ್ಮಧ್ಯೆ ವಿಎಚ್‌ಪಿ, ಭಜರಂಗ ದಳ ಸೇರಿದಂತೆ ಇನ್ನಿತರ ಸಂಘಟನೆಗಳು ನವೆಂಬರ್ 13ರಂದು ಕೊಡಗು ಬಂದ್‌ಗೆ ಕರೆ ನೀಡಿದ್ದು, ಬಿಜೆಪಿ ಸಹ ಇದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಜಿಲ್ಲೆಯ ವಿರಾಜಪೇಟೆಯ ಗೋಗಿಕೊಪ್ಪ ಗ್ರಾಮದಲ್ಲಿ ದುಷ್ಕರ್ಮಿಗಳು ನಿನ್ನೆ ರಾತ್ರಿ ಮಾರುತಿ ಓಮ್ನಿ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಮಂಜಿನನಗರಿ ಪ್ರತೀಕಾರದ ಜ್ವಾಲೆಯಲ್ಲಿ ಉರಿಯುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕೆಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಮಾದಾಪುರ ಜಿಲ್ಲೆಯಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ದಕ್ಷಿಣ ವಲಯ ಐಜಿಪಿ ಬಿ.ಕೆ.ಸಿಂಗ್ , ಜಿಲ್ಲಾಧಿಕಾರಿ ಕೂರ್ಮರಾವ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಾರ್ತಿಕ ಕಠಿಯಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಠಿಕ್ಕಾಣಿ ಹೂಡಿದ್ದಾರೆ.

ಎಡಿಜಿಪಿ ಮೊಕ್ಕಾಂ:

ಜಿಲ್ಲೆ ಮತ್ತೆ ಹಿಂಸಾಚಾರ ಭುಗಿಲೇಳುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲೆಡೆ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಆರ್‌ಎಎಫ್, ಕೆಎಸ್‌ಆರ್‌ಪಿ, ನಿಯೋಜನೆ ಮಾಡಲಾಗಿದ್ದು , ರಾಜ್ಯದ ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಅಲೋಕ್ ಮೋಹನ್ ಅವರು ಈಗ ಮಡಿಕೇರಿಯಲ್ಲಿ ಮೊಕ್ಕಾಂ ಹೂಡಿದ್ದಾರೆ.

ಮೆರವಣಿಗೆಗೆ ನಿರಾಕರಣೆ:
ನಿನ್ನೆ ನಡೆದ ಗಲಭೆಯಲ್ಲಿ ಮೃತಪಟ್ಟ ಕುಟ್ಟಪ್ಪ ಅವರ ಹಲ್ಲೆಯನ್ನು ಖಂಡಿಸಿ ಇಂದು ಕೆಲ ಹಿಂದೂಪರ ಸಂಘಟನೆಗಳು ಮಡಿಕೇರಿ ಬಂದ್‌ಗೆ ಕರೆ ನೀಡಿದ್ದವು. ಇಂದು ಬೆಳಗ್ಗೆ ತಿಮ್ಮಯ್ಯ ಸರ್ಕಲ್‌ನಲ್ಲಿ ಕುಟ್ಟಪ್ಪನವರ ಶವವಿಟ್ಟು ಮೆರವಣಿಗೆ ನಡೆಸಬೇಕೆಂದು ಸಂಘಟನೆಗಳು ತೀರ್ಮಾನಿಸಿದ್ದವು. ಆದರೆ ಜಿಲ್ಲಾಡಳಿತ ಇದಕ್ಕೆ ಅವಕಾಶ ನೀಡದೆ ಎಲ್ಲೆಡೆ ನಿಷೇಧಾಜ್ಞೆ ಜಾರಿ ಮಾಡಿದೆ. ಮಡಿಕೇರಿಗೆ ಸಂಪರ್ಕ ಕಲ್ಪಿಸುವ ಮೈಸೂರು, ಮಂಗಳೂರು, ಕೇರಳಾ ಗಡಿಭಾಗದಲ್ಲೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ನಗರದಿಂದ ಹೊರ ಹೋಗುವ ಮತ್ತು ಒಳಬರುವ ವಾಹನಗಳನ್ನು ಬಿಗಿ ತಪಾಸಣೆ ನಡೆಸಲಾಗುತ್ತಿದೆ.

ಅಧಿಕಾರಿಗಳ ಸಭೆ:
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಕಳೆದ ರಾತ್ರಿ ಮಡಿಕೇರಿ ಗಲಭೆ ಕುರಿತಂತೆ ಬೆಂಗಳೂರಿನ ಸದಾಶಿವನಗರದಲ್ಲಿರುವ ನಿವಾಸದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದರು. ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್, ಎಡಿಜಿಪಿ, ಐಜಿಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಯಾವುದೇ ಕಾರಣಕ್ಕೂ ಪರಿಸ್ಥಿತಿ ಬಿಗಡಾಯಿಸದಂತೆ ಕ್ರಮ ಕೈಗೊಳ್ಳಬೇಕು. ಸೂಕ್ಷ್ಮ ಮತ್ತು ಅತೀಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ನಿಯೋಜನೆ ಮಾಡಬೇಕು. ಕೆಲವು ಸಂಘಟನೆಗಳ ಮೇಲೆ ಹದ್ದಿನ ಕಣ್ಣಿಡುವಂತೆ ಸೂಚನೆ ಕೊಟ್ಟಿದ್ದಾರೆ. ಕಾನೂನನ್ನು ಯಾರೇ ಕೈಗೆತ್ತಿಕೊಂಡರೂ ಅವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಜನರ ಭಾವನೆಗಳ ಜೊತೆ ಚೆಲ್ಲಾಟವಾಡುವ ಸಂಘಟನೆಗಳನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕುವಂತೆ ಪೊಲೀಸರಿಗೆ ತಾಕೀತು ಮಾಡಿದ್ದಾರೆ. ಈ ನಡುವೆ ಮಡಿಕೇರಿ ಗಲಭೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಂತಿಯುತವಾಗಿ ವರ್ತಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಘಟನೆ ಕುರಿತಂತೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ವದಂತಿಗಳಿಗೆ ಜನತೆ ಕಿವಿಗೊಡದೆ ಸೌಹಾರ್ದಯುತವಾಗಿ ವರ್ತಿಸಬೇಕು. ಸುಳ್ಳು ವದಂತಿಗಳನ್ನು ನಂಬಬೇಡಿ ಎಂದು ಕೋರಿಕೊಂಡಿದ್ದಾರೆ.

Write A Comment