ಕರ್ನಾಟಕ

ಮೋದಿ ಮತ್ತು ಬಿಜೆಪಿ ಹೆಸರು ಪ್ರಸ್ತಾಪಿಸದಿದ್ದರೆ ಕಾಂಗ್ರೆಸ್ ನಾಯಕರಿಗೆ ಜೀರ್ಣವಾಗುವುದಿಲ್ಲ..

Pinterest LinkedIn Tumblr

eshಬೆಂಗಳೂರು, ಅ.28- ಕಾಂಗ್ರೆಸ್ ಪಕ್ಷದಲ್ಲಿ ದಲಿತ ಮುಖ್ಯಮಂತ್ರಿ ವಿವಾದಕ್ಕೆ ಬಿಜೆಪಿ ಕಾರಣ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿರುವ ಕೆ.ಎಸ್.ಈಶ್ವರಪ್ಪ,  ಪ್ರಧಾನಿ ಮೋದಿ ಹಾಗೂ ಬಿಜೆಪಿ ಹೆಸರು ಹೇಳದಿದ್ದರೆ ಊಟ ಮಾಡಿದ್ದು ಜೀರ್ಣವಾಗುವುದಿಲ್ಲವೇ ಎಂದು ಪ್ರಶ್ನೆ ಮಾಡಿದರು.  ಬಿಜೆಪಿ ಎಸ್ಸಿ-ಎಸ್ಟಿಮೋರ್ಚಾ ವತಿಯಿಂದ ಚಂದ್ರಶೇಖರ್ ಆಜಾದ್ ಮೈದಾನದಲ್ಲಿ ಹಮ್ಮಿ ಕೊಳ್ಳಲಾಗಿದ್ದ ಅಂತ್ಯೋದಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಆಡಳಿತಾರೂಢ ಕಾಂಗ್ರೆಸ್‌ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಸಿದ್ದರಾಮಯ್ಯನವರು ವಿನಾಕಾರಣ ನಮ್ಮ ಪಕ್ಷದ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸುತ್ತಿದ್ದಾರೆ. ಪ್ರತಿದಿನ ಅವರಿಗೆ ಬಿಜೆಪಿಹಾಗೂ ಮೋದಿಹೆಸರು  ಹೇಳದಿದ್ದರೆ ಊಟ ಮಾಡಿದ್ದು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ವ್ಯಂಗ್ಯವಾಡಿದರು.

ದಲಿತ ಮುಖ್ಯಮಂತ್ರಿಯಾಗ ಬೇಕೆಂದು ಕೂಗೆಬ್ಬಿಸಿದ್ದು ಕಾಂಗ್ರೆಸ್ ಪಕ್ಷದವರೇ ಹೊರತು ಬಿಜೆಪಿ ಮುಖಂಡರಲ್ಲ. ಪರಮೇಶ್ವರ್ ಮತ್ತು ಸಿದ್ದರಾಮಯ್ಯ ನಡುವಿನ ಒಳಜಗಳ ಹೆಚ್ಚುತ್ತಿರುವುದರಿಂದ ಭಿನ್ನಮತ ಚಟುವಟಿಕೆಗಳು ಪ್ರಾರಂಭವಾಗಿದೆ ಎಂದರು. ಇದನ್ನು ತಪ್ಪಿಸಲು ಸಿದ್ದ ರಾಮಯ್ಯ ನಮ್ಮ ಪಕ್ಷದ ಮೇಲೆ ಗೂಬೆ ಕೂರಿಸುವ  ಪ್ರಯತ್ನ ಮಾಡುತ್ತಿದ್ದಾರೆಂದು ಕಿಡಿಕಾರಿದರು. ಸಿದ್ದರಾಮಯ್ಯ ನಾಯಕತ್ವದಲ್ಲಿ ವಿಶ್ವಾಸ ಕಳೆದುಕೊಂಡಿರುವ ಪರಮೇಶ್ವರ್ ಅವರನ್ನು ಮುಂದಿಟ್ಟುಕೊಂಡು ದಲಿತರೊಬ್ಬರು ಸಿಎಂ ಆಗಬೇಕೆಂದು ಅವರ ಪಕ್ಷದ ಶಾಸಕರೇ ಹೈಕಮಾಂಡ್‌ಗೆ ದೂರುನೀಡಿದ್ದಾರೆ. ಎರಡೂವರೆ ವರ್ಷ ಎಲ್ಲಾ ಕ್ಷೇತ್ರಗಳಲ್ಲಿಯೂ ವಿಫಲವಾಗಿರುವುದರಿಂದ ನಾಯಕತ್ವದ ಬದಲಾವಣೆ ಕೂಗು ಎದ್ದಿದೆ. ಇದನ್ನು ಸರಿಪಡಿಸಿಕೊಳ್ಳಲಾಗದ ಅವರು ನಮ್ಮ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದರು.

ಸರ್ಕಾರ ಪಾಪರ್ ಆಗಿದೆ:
ಮಾತೆತ್ತಿದರೆ ನಮ್ಮದು ಅಹಿಂದಾ ಸರ್ಕಾರ ಎಂದು ಬೊಬ್ಬೆ ಹಾಕುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಮುದಾಯಕ್ಕೆ ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಏನೇನು ಮಾಡಿದ್ದೇನೆ ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಿ. ನಾನು ಬಹಿರಂಗ ಚರ್ಚೆ ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು. ಬಜೆಟ್‌ನಲ್ಲಿ ಘೋಷಣೆ ಮಾಡಿದ ಕಾರ್ಯಕ್ರಮಗಳು ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿದೆಯೇ ಹೊರತು ಅನುಷ್ಟಾನವಾಗಿಲ್ಲ. ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿಲ್ಲ. ಹಿಂದುಳಿದವರ ಹಾಸ್ಟೆಲ್ ಸ್ಥಿತಿಯೂ ದೇವರಿಗೆ ಪ್ರಿಯ ಎಂಬಂತಿದೆ. ಇಂತಹವರು ಅಹಿಂದಾ ಪರ ಎಂದು ಹೇಳಿಕೊಳ್ಳಲು ನಾಚಿಕೆಯಾಗಬೇಕು ಎಂದು ಕಿಡಿಕಾರಿದರು. ಸಮಾಜ ಕಲ್ಯಾಣ ಇಲಾಖೆಗೆ ತಕ್ಷಣವೇ ಹಣ ಬಿಡುಗಡೆ ಮಾಡಿ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಕಾರ್ಯಕ್ರಮಗಳನ್ನು ಅನುಷ್ಟಾನ ಮಾಡಬೇಕು. ಸರ್ಕಾರದ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಜನಜಾಗೃತಿ ಮೂಡಿಸುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಎ.ನಾರಾಯಣಸ್ವಾಮಿ, ರಾಜೀವ್‌ಗೌಡ, ಶಾಸಕ ಸುನೀಲ್‌ಕುಮಾರ್, ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ, ಮುಖಂಡರಾದ ಪೂರ್ಣಿಮಾ ಪ್ರಕಾಶ್ ಉಪಸ್ಥಿತರಿದ್ದರು.

Write A Comment