ಕರ್ನಾಟಕ

ಬೆಂಗಳೂರಲ್ಲಿ ರಾತ್ರಿವೇಳೆ ಮಹಿಳೆಯರಿಗೆ ಬಿಎಂಟಿಸಿ ಬಸ್ ಗಳೇ ಸೇಫ್..

Pinterest LinkedIn Tumblr

bmtcಬೆಂಗಳೂರು,ಅ.9- ರಾತ್ರಿ ವೇಳೆ ಪ್ರಯಾಣಿಕರಿಗೆ ಖಾಸಗಿ ವಾಹನಗಳಿಗಿಂತ ಸಾರ್ವಜನಿಕ  ವಾಹನಗಳ ಪ್ರಯಾಣ ಹೆಚ್ಚು ಸುರಕ್ಷಿತ. ಗೊತ್ತು-ಗುರಿಯಿಲ್ಲದ  ವಾಹನದಲ್ಲಿ ಪ್ರಯಾಣಿಸಿ ಅಪಾಯ ವನ್ನು ಆಹ್ವಾನಿಸಿಕೊಳ್ಳುವುದಕ್ಕಿಂತ ಸುರಕ್ಷತೆ ಹಾಗೂ ಭದ್ರತೆ  ಇರುವ ಸಾರ್ವ ಜನಿಕ ವಾಹನಗಳಲ್ಲಿ ಪ್ರಯಾಣಿಸು ವುದು ಸೂಕ್ತ. ಬೆಂಗಳೂರು  ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ದಿನದ 24 ಗಂಟೆಯೂ ಬಸ್ ಸೇವೆಯನ್ನು ನಗರದಲ್ಲಿ ಒದಗಿಸಿದೆ. ಪ್ರತಿದಿನ 6207 ಶೆಡ್ಯೂಲ್‌ಗಳಲ್ಲಿ 76,052 ಟ್ರಿಪ್‌ಗಳಲ್ಲಿ ಬಸ್ ಸಂಚಾರ ಮಾಡಲಿದ್ದು, ಪ್ರಯಾಣಿಕರಿಗೆ ದಿನವಿಡಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸಲು ಅನುಕೂಲ ಕಲ್ಪಿಸಿದೆ.

ಬಿಎಂಟಿಸಿ ಬಸ್‌ಗಳಲ್ಲಿ ಸಿಸಿ ಟಿವಿ, ಜಿಪಿಎಸ್ ಅಳವಡಿಸಲಾಗಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷಿತ ವಿಧಾನವನ್ನು ಅನುಸರಿಸಲಾಗುತ್ತಿದೆ. ಒಂದು ವೇಳೆ ಬಸ್ ದಾರಿ ತಪ್ಪಿದರೂ ತಕ್ಷಣ ಗೊತ್ತಾಗಲಿದೆ. ಮುಂದಿನ ಕ್ರಮ ಕೈಗೊಳ್ಳಲು ಸುಲಭವಾಗಲಿದೆ. ಅಪಘಾತ ಸೇರಿದಂತೆ ಅಹಿತಕರ ಘಟನೆಗಳು ಸಂಭವಿಸಿದಾಗ ಪತ್ತೆಹಚ್ಚಲು ಹಾಗೂ ಅಗತ್ಯಕ್ರಮ ಕೈಗೊಳ್ಳಲು ಸಹಕಾರಿಯಾಗಲಿದೆ. ಖಾಸಗಿ ವಾಹನಗಳಿಗಿಂತ ಸರ್ಕಾರಿ ಬಸ್ ಹತ್ತುವುದು ಪ್ರಯಾಣಿಕರಿಗೆ ಎಲ್ಲಾ ದೃಷ್ಟಿಯಿಂದಲೂ ಸುರಕ್ಷಿತ.

ಆದರೂ, ಪ್ರಯಾಣಿಕರು ಹಗಲು ಮತ್ತು ರಾತ್ರಿ ವೇಳೆ ಟೆಂಪೋಟ್ರಾವೆಲ್, ಮ್ಯಾಕ್ಸಿ ಕ್ಯಾಬ್, ಜೀಪ್ ಮತ್ತಿತರ ವಾಹನಗಳಲ್ಲಿ ಪ್ರಯಾಣಿಸುವುದನ್ನು ನಿಲ್ಲಿಸಿಲ್ಲ. ಹಗಲಿನ ವೇಳೆ ಸುರಕ್ಷತೆ ಇದ್ದರೂ ರಾತ್ರಿ ವೇಳೆ ಇಂತಹ ವಾಹನಗಳಲ್ಲಿ ಪ್ರಯಾಣಿಸುವುದು ಒಳ್ಳೆಯದಲ್ಲ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿ ವ್ಯಕ್ತವಾಗುತ್ತಿದೆ. ಇದಕ್ಕೆ ಇಂಬು ನೀಡುವಂತೆ ಇತ್ತೀಚೆಗೆ ಬಿಪಿಒ ಉದ್ಯೋಗಿಯೊಬ್ಬರ ಮೇಲೆ ಟೆಂಪೊಟ್ರಾವೆಲ್‌ನಲ್ಲಿ ಅತ್ಯಾಚಾರವೆಸಗಿರುವ ಘಟನೆ ತಾಜಾ ನಿದರ್ಶನವಾಗಿದೆ. ಸಾರಿಗೆ ಇಲಾಖೆ ಎಲ್ಲಾ ಖಾಸಗಿ ವಾಹನಗಳಲ್ಲೂ ಚಾಲಕರ ಚಾಲನಾ ಪರವಾನಗಿಯನ್ನು ಪ್ರದರ್ಶಿಸಬೇಕು ಹಾಗೂ ಜಿಪಿಎಸ್ ಅಳವಡಿಸುವುದೂ ಸೇರಿದಂತೆ ಕೆಲವು ಮಾರ್ಗಸೂಚಿಗಳನ್ನು ನೀಡಿದ್ದರು. ಎಲ್ಲಾ ವಾಹನಗಳಲ್ಲಿ ಇದನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿಲ್ಲ.

ಬಿಎಂಟಿಸಿ ನಿತ್ಯ 50 ದಶಲಕ್ಷ ಪ್ರಯಾಣಿಕರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬಸ್‌ನಲ್ಲಿ ಕರೆದೊಯ್ಯುತ್ತಿದೆ. ಬೆಳಗ್ಗೆ 5ರಿಂದ ರಾತ್ರಿ 11ರವರೆಗೂ ಎಲ್ಲಾ ಬಡಾವಣೆ, ಎಲ್ಲಾ ಮಾರ್ಗಗಳಲ್ಲೂ ನಿರಂತರವಾಗಿ ಬಸ್ ಸೇವೆ ಒದಗಿಸಲಾಗಿದೆ. ಬಿಎಂಟಿಸಿಯ  ಮುಖ್ಯ ಸಂಚಾರಿ ವ್ಯವಸ್ಥಾಪಕ ರೇಣುಕೇಶ್ವರ್ ಮಾತನಾಡಿ, ರಾತ್ರಿ 11ರಿಂದ ಬೆಳಗಿನ ಜಾವ 5 ಗಂಟೆವರೆಗೆ ರಾತ್ರಿಪಾಳಯದ ಬಸ್ ಸೇವೆಯನ್ನು ಒದಗಿಸಲಾಗಿದೆ. 55 ಬಸ್‌ಗಳು 494 ಟ್ರಿಪ್‌ಗಳಲ್ಲಿ ರಾತ್ರಿ ಪಾಳಿ ಬಸ್ ಸೇವೆಯನ್ನು ಒದಗಿಸಲಾಗುತ್ತಿದೆ  ಎಂದರು. ಪ್ರಯಾಣಿಕರ  ಬೇಡಿಕೆಗೆ ಅನುಗುಣವಾಗಿ ರಾತ್ರಿಪಾಳಯದ ಬಸ್‌ಗಳನ್ನು ಹಂತ ಹಂತವಾಗಿ ಹೆಚ್ಚಿಸಲು ಉದ್ದೇಶಿಸಲಾಗಿದೆ  ಎಂದು ಹೇಳಿದರು.

ಕೆಂಪೇಗೌಡ ಬಸ್ ನಿಲ್ದಾಣ ಸೇರಿದಂತೆ ನಗರದ ಎಲ್ಲಾ ಪ್ರಮುಖ ಬಡಾವಣೆಗಳಿಗೂ ರಾತ್ರಿ ಪಾಳಿ ಬಸ್ ಸೌಲಭ್ಯವಿದೆ. ಆದರೆ, ಹಗಲು ವೇಳೆ ಪ್ರಯಾಣ ದರದ ಒಂದೂವರೆಯಷ್ಟು ಪ್ರಯಾಣದರವನ್ನು  ಪ್ರಯಾಣಿಕರು ಪಾವತಿಸಬೇಕು. ಹೊಸೂರು ರಸ್ತೆ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲೂ ರಾತ್ರಿ ಪಾಳಯದ ಬಸ್ ಸೌಕರ್ಯವಿದೆ. ಸುರಕ್ಷತೆ ಹಾಗೂ ಭದ್ರತೆಯ ದೃಷ್ಟಿಯಿಂದ ಪ್ರಯಾಣಿಕರು ಬಿಎಂಟಿಸಿ ಬಸ್‌ನ್ನು ಹೆಚ್ಚು ಬಳಸುವುದು ಒಳ್ಳೆಯದು ಎಂಬ ಅಭಿಪ್ರಾಯವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಲಾಗುತ್ತಿದೆ. ರಾತ್ರಿ ವೇಳೆ ಪ್ರಯಾಣಿಕರ ಬೇಡಿಕೆ ಹೆಚ್ಚಾದರೆ, ಬಸ್ ಸೇವೆಯನ್ನು ಒದಗಿಸುವಲ್ಲಿ ಬಿಎಂಟಿಸಿ ಸಿದ್ದವಿದ್ದು, ಬೇಡಿಕೆ ಆಧಾರದ ಮೇಲೆ  ಬಸ್ ಸೇವೆಯನ್ನು ಒದಗಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ರಾತ್ರಿ ವೇಳೆ ಬೇರೆ ಬೇರೆ ಸ್ಥಳಗಳಿಂದ ನಗರಕ್ಕೆ ಆಗಮಿಸುವ ಪ್ರಯಾಣಿಕರು ಸುರಕ್ಷಿತವಾಗಿ ಮನೆ ತಲುಪಲು ಅನುಕೂಲವಾಗುವಂತೆ ರಾತ್ರಿ ಪಾಳಿ ಬಸ್ ಸೇವೆಯನ್ನು ಬಿಎಂಟಿಸಿ ಒದಗಿಸಿದೆ.

Write A Comment