ಬೆಂಗಳೂರು, ಅ.6: ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅವರು ಇಂದು ಬೆಳಗ್ಗೆ ಲಘು ಹೃದಯಾಘಾತಕ್ಕೆ ಈಡಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಶಿವಣ್ಣ ಇಂದು ಬೆಳಿಗ್ಗೆ ಎಂದಿನಂತೆ ಲವಲವಿಕೆಯಿಂದ ಇದ್ದರು. ಮನೆಯ ಹತ್ತಿರ ಬಂದಿದ್ದ ಒಂದಿಬ್ಬರು ಅಭಿಮಾನಿಗಳನ್ನು ಮಾತನಾಡಿಸಿ ಅವರೊಂದಿಗೆ ಫೋಟೋ ತೆಗೆದುಕೊಂಡರು. ಆನಂತರ ಅವರು ವ್ಯಾಯಾಮಕ್ಕೆ ತೊಡಗಿದರು. ವ್ಯಾಯಾಮ ಮಾಡಿದ ನಂತರ ದೇಹದಲ್ಲಿ ನಿಶ್ಯಕ್ತಿ ಕಾಣಿಸಿಕೊಂಡಿತು. ಎಡತೋಳಿನಲ್ಲಿ ಚಳುಕು ಬಂತು. ಇದನ್ನು ಅವರು ತಮ್ಮ ಪತ್ನಿ ಗೀತಾ ಶಿವರಾಜ್‌ಕುಮಾರ್‌ಗೆ ತಿಳಿಸಿ, ವಿಪರೀತ ಆಯಾಸವಾಗುತ್ತಿದೆ ಎಂದರು.ಗೀತಾ ಅವರು ಶಿವಣ್ಣನವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಿದರು.
ಪ್ರಾಥಮಿಕ ತಪಾಸಣೆಯಲ್ಲಿ ಅವರಿಗೆ ಲಘು ಹೃದಯಾಘಾತವಾಗಿದೆ ಎಂದು ತಿಳಿದುಬಂತು. ಆನಂತರ ಶಿವರಾಜ್‌ಕುಮಾರ್ ಅವರನ್ನು ಮಲ್ಯ ಆಸ್ಪತ್ರೆಗೆ ಕರೆತಂದರು. ಅಲ್ಲಿ ಕೂಡಲೇ ಆಂಜಿಯೋಗ್ರಾಮ್ ತಪಾಸಣೆಗೆ ಒಳಪಡಿಸಲಾಯಿತು. ರಕ್ತನಾಳಗಳಲ್ಲಿ ಭಾರಿ ಪ್ರಮಾಣದ ಬ್ಲಾಕ್‌ಗಳಿಲ್ಲ ಎಂದು ಹೃದ್ರೋಗ ತಜ್ಞ ಡಾ.ವಿ.ಕೆ.ಶ್ರೀನಿವಾಸ್ ಸ್ಪಷ್ಟಪಡಿಸಿದ್ದಾರೆ.
ಶಿವರಾಜ್‌ಕುಮಾರ್ ಅವರ ಜೀವನ ಶೈಲಿ, ಆಹಾರ ಪದ್ಧತಿ ಆರೋಗ್ಯಕರವಾಗಿರುವುದರಿಂದ ಅವರಿಗೆ ಹೆಚ್ಚಿನ ತೊಂದರೆ ಆಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಶಿವರಾಜ್‌ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ತಿಳಿದು ಅಸಂಖ್ಯಾತ ಅಭಿಮಾನಿಗಳು ಆತಂಕಕ್ಕೆ ಒಳಗಾದರು. ಖುದ್ದಾಗಿ ವಿಷಯ ತಿಳಿಯುವ ಕಾತುರದಿಂದ ಅವರು ಆಸ್ಪತ್ರೆ ಹತ್ತಿರ ಬಂದು ಸೇರತೊಡಗಿದರು. ಚಿತ್ರೋದ್ಯಮದ ಪ್ರಮುಖರು, ಬಂಧು-ಬಾಂಧವರು ಕೂಡ ಆಗಮಿಸತೊಡಗಿದರು.ಶಿವರಾಜ್‌ಕುಮಾರ್ ಅವರ ಆರೋಗ್ಯ ಸ್ಥಿರವಾಗಿದೆ. ಆತಂಕ ಪಡುವ ಅಗತ್ಯವಿಲ್ಲ. ಅವರಿಗೆ ಎರಡು ಮೂರು ದಿನ ವಿಶ್ರಾಂತಿ ಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಆನಂತರ ಡಿಸ್‌ಚಾರ್ಜ್ ಮಾಡಲಾಗುತ್ತದೆ ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.
