ಕರ್ನಾಟಕ

ಸ್ಕೂಟರ್‌ಗೆ ಲಾರಿಯಿಂದ ಡಿಕ್ಕಿ ಹೊಡೆಸಿ ಪತಿಯನ್ನು ಹತ್ಯೆ ಮಾಡಿಸಿದ್ದ ಪತ್ನಿ ! ಅನೈತಿಕ ಸಂಬಂಧವೆ ಕೊಲೆಗೆ ಕಾರಣ….ಸುಪಾರಿ ನೀಡಿ ಹತ್ಯೆ ಮಾಡಿದ್ದು ಹೀಗೆ …

Pinterest LinkedIn Tumblr

murder

ಟಿ.ನರಸೀಪುರ, ಅ.5:ಪತ್ನಿಯೇ ಸುಪಾರಿ ನೀಡಿ ಸ್ಕೂಟರ್‌ಗೆ ಲಾರಿಯಿಂದ ಡಿಕ್ಕಿ ಹೊಡೆಸಿ ಪತಿಯನ್ನು ಹತ್ಯೆ ಮಾಡಿಸಿದ್ದ ಅಂಶ ಬೆಳಕಿಗೆ ಬಂದು ಅಪಘಾತದ ತನಿಖೆ ನಡೆಸಿದ ಪೊಲೀಸರನ್ನೇ ದಿಗ್ಭ್ರಮೆಗೊಳ್ಳುವಂತೆ ಮಾಡಿದೆ.

ಕಳೆದ ಜೂ.27ರಂದು ಜೆರಾಕ್ಸ್ ಅಂಗಡಿ ಮಾಲೀಕ ಹಾಗೂ ಪತ್ರ ಬರಹಗಾರ ನಾಗೇಂದ್ರಸ್ವಾಮಿ ಅವರು ಸ್ಕೂಟರ್‌ನಲ್ಲಿ ಮೈಸೂರಿಗೆ ತೆರಳುವಾಗ ಲಾರಿಯೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದರು.

ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಟಿ.ನರಸೀಪುರ ಠಾಣೆ ಪೊಲೀಸರು ಲಾರಿ ಚಾಲಕ ಅಶೋಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಪತ್ನಿಯೇ ಸುಪಾರಿ ನೀಡಿ ಕೊಲೆ ಮಾಡಿಸಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಪ್ರಕರಣ ಸಂಬಂಧ ಮೃತನ ಪತ್ನಿ ಸುಧಾ, ಸಂಚು ರೂಪಿಸಿದ್ದ ಮಗಳು ಪೂಜಾ, ಸುಧಾಳ ಪ್ರಿಯಕರ ವಿನಯ್‌ನನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಘಟನೆ ವಿವರ:
ಪಟ್ಟನದ ಗಣೇಶ್ ಜೆರಾಕ್ಸ್ ಅಂಗಡಿ ಮಾಲೀಕ ಹಾಗೂ ಪತ್ರ ಬರಹಗಾರ ನಾಗೇಂದ್ರಸ್ವಾಮಿಯ ಪತ್ನಿ ಸುಧಾ ವಿನಯ್ ಎಂಬಾತನ ಜತೆ ಅನೈತಿಕ ಸಂಬಂಧ ಹೊಂದಿದ್ದು, ಈ ವಿಚಾರ ಗಂಡನಿಗೆ ಗೊತ್ತಾಗಿ ಅಡ್ಡಿಪಡಿಸುತ್ತಿದ್ದ ಎನ್ನಲಾಗಿದೆ. ಪತ್ನಿಯ ಅನೈತಿಕ ಸಂಬಂಧ ದೂರ ಮಾಡಲೆಂದೇ ನಾಗೇಂದ್ರಸ್ವಾಮಿ ಮೈಸೂರಿನಸಿದ್ದಾರ್ಥ ಬಡಾವಣೆಗೆ ವಾಸ ಬದಲಿಸಿ ದಿನನಿತ್ಯ ಸ್ಕೂಟರ್‌ನಲ್ಲಿ ಟಿ.ನರಿಸೀಪುರಕ್ಕೆ ಓಡಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಾಸ ಬದಲಿಸಿದರೂ ಅನೈತಿಕ ಸಂಬಂಧ ಬಿಡದ ಪತ್ನಿ ಸುಧಾ ತನ್ನ ಮಗಳು ಪೂಜಾ ಹಾಗೂ ಪ್ರಿಯಕರ ವಿನಯ್ ಜತೆ ಸೇರಿ ಗಂಡನ ಕೊಲೆಗೆ ಸಂಚು ರೂಪಿಸಿ ಲಾರಿ ಚಾಲಕ ಆಶೋಕನಿಗೆ 6 ಲಕ್ಷ ರೂ. ಸುಪಾರಿ ನೀಡಿದ್ದಳು ಎಂದು ವಿಚಾರಣೆಯಿಂದ ಗೊತ್ತಾಗಿದೆ. ಜೂ.27ರಂದು ಸಂಜೆ ಕೆಲಸ ಮುಗಿಸಿ ಅಂಗಡಿ ಮುಚ್ಚಿ ಸ್ಕೂಟರ್‌ನಲ್ಲಿ ವಾಪಸ್ ಮೈಸೂರಿಗೆ ತೆರಳುತ್ತಿದ್ದಾಗ ಹಿಂದಿನಿಂದ ಲಾರಿಯೊಂದು ಡಿಕ್ಕಿ ಹೊಡೆದು ನಾಗೇಂದ್ರಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದರು.

Write A Comment