ಕರ್ನಾಟಕ

ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣ: ಬುಧವಾರ ನ್ಯಾಯಾಲಯಕ್ಕೆ ಸಿಬಿಐ ಅಂತಿಮ ವರದಿ ಸಲ್ಲಿಕೆ

Pinterest LinkedIn Tumblr

D-K-Ravi5----

ಬೆಂಗಳೂರು,ಅ.5:ನಿಗೂಢವಾಗಿ ಸಾವನ್ನಪ್ಪಿ ಹಲವು ಸಂದೇಹಗಳಿಗೆ ಎಡೆ ಮಾಡಿಕೊಟ್ಟಿದ್ದ ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನ ತನಿಖಾ ವರದಿಯನ್ನು ಸಿಬಿಐ ಬುಧವಾರ ನ್ಯಾಯಾಲಯಕ್ಕೆ ಸಲ್ಲಿಸಲಿದೆ. ಕಳೆದ ಏಳು ತಿಂಗಳಿನಿಂದ ಡಿ.ಕೆ.ರವಿ ಸಾವಿನ ಕುರಿತು ತನಿಖೆ ನಡೆಸಿದ್ದ ಸಿಬಿಐ ಇದೀಗ ಅಂತಿಮ ವರದಿಯನ್ನು ಸಿದ್ದಪಡಿಸಿದ್ದು , ಬುಧವಾರ ನ್ಯಾಯಾಲಯ ಹಾಗೂ ಸರ್ಕಾರಕ್ಕೆ ಎರಡು ಪ್ರತ್ಯೇಕ ವರದಿ ನೀಡಲಿದೆ ಎಂದು ತಿಳಿದುಬಂದಿದೆ.

ಅಂತಿಮ ವರದಿಯನ್ನು ರಾಜ್ಯ ಸರ್ಕಾರಕ್ಕೆ ಹಾಗೂ ನ್ಯಾಯಾಲಯಕ್ಕೆ ಸಲ್ಲಿಸಲು ಕೇಂದ್ರ ಗೃಹ ಇಲಾಖೆ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ತನಿಖಾ ತಂಡದ ಮುಖ್ಯಸ್ಥರು ಬುಧವಾರ ಸಲ್ಲಿಸಲಿದ್ದಾರೆ.

ದೆಹಲಿಯ ಪ್ರತಿಷ್ಠಿತ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ತಜ್ಞರ ತಂಡ ನೀಡಿರುವ ವರದಿಯಂತೆ ಡಿ.ಕೆ.ರವಿ ಸಾವಿನ ವಿಸ್ತೃತ ವರದಿಯನ್ನು ಸಿಬಿಐ ಸಿದ್ಧಪಡಿಸಿದೆ. ಏಮ್ಸ್‌ನ ನಾಲ್ಕು ಜನರ ಪರಿಣಿತರ ತಂಡ ಡಿ.ಕೆ.ರವಿ ಸಾವು ಆತ್ಮಹತ್ಯೆ. ಇದು ಪೂರ್ವ ನಿಯೋಜಿತ ಕೊಲೆಯಲ್ಲ ಎಂದು ಅಂತಿಮ ಷರ ಬರೆದಿದೆ. ಹೈದರಾಬಾದ್ ವಿಧಿವಿಜ್ಞಾನ ಪ್ರಯೋಗಾಲಯ ನಡೆಸಿರುವ ಮರಣೋತ್ತರ ಪರೀಕ್ಷೆ ವರದಿ ಆಧಾರದ ಮೇಲೆ ಈ ನಿರ್ಧಾರಕ್ಕೆ ಬರಲಾಗಿದೆ. ಆದರೆ ಡಿ.ಕೆ.ರವಿ ಪೋಷಕರು ಮಾತ್ರ ಸಿಬಿಐ ವರದಿಯನ್ನು ಒಪ್ಪುತ್ತಿಲ್ಲ. ತಮ್ಮ ಮಗ ಆತ್ಮಹತ್ಯೆ ಮಾಡಿಕೊಳ್ಳುವಂತಹ ಹೇಡಿಯಲ್ಲ. ಇದು ಅವರು ವ್ಯವಸ್ಥಿತ ಸಂಚಿಗೆ ಬಲಿಯಾಗಿದ್ದು, ಕಾನೂನು ಹೋರಾಟ ಮುಂದುವರೆಸಲಿದ್ದೇವೆ ಎಂದು ಹೇಳಿದ್ದಾರೆ.

ಡಿ.ಕೆ.ರವಿ ಆತ್ಮಹತ್ಯೆಗೆ ನಿಖರವಾದ ಕಾರಣವನ್ನು ತನಿಖಾ ತಂಡ ಪತ್ತೆ ಮಾಡಿಲ್ಲ. ಆದರೆ ಕೆಲವು ನಿರ್ದಿಷ್ಟ ಕಾರಣಗಳನ್ನು ಸಿಬಿಐ ನೀಡಿದೆ. ತನಿಖಾ ತಂಡದ ಪ್ರಕಾರ ಡಿ.ಕೆ.ರವಿ ವಾಸ ಮಾಡುತ್ತಿದ್ದ ಕೋರಮಂಗಲದ ನಿವಾಸದಲ್ಲಿ ಅವರೇ ಫ್ಯಾನಿಗೆ ಕೇಸರಿ ಬಣ್ಣದ ದುಪ್ಪಟದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಲೆ ಮಾಡಿರುವುದಕ್ಕೆ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ. ದುಪ್ಪಟ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಳಿಕ ಅವರ ಅವರು ಕೊರಳು ಕಪ್ಪು ಬಣ್ಣಕ್ಕೆ ತಿರುಗಿತ್ತು.

ಕೊಲೆ ಮಾಡಿದ್ದರೆ ಪಾತಕಿಗಳು ದೇಹ ಯಾವುದಾದರೂ ಒಂದು ಭಾಗಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡುತ್ತಿದ್ದರು. ಆದರೆ ರವಿ ದೇಹದ ಭಾಗದಲ್ಲಿ ಹಲ್ಲೆ ನಡೆದಿರುವುದಕ್ಕೆ ಯಾವ ಕುರುಹುಗಳು ಸಿಕ್ಕಿಲ್ಲ.  ನಾಲ್ಕು ದಿನಗಳಿಂದ ಫ್ಲಾಟ್‌ನಲ್ಲಿ ರವಿ ಒಬ್ಬರೇ ತಂಗಿದ್ದರು. ನೇಣಿಗೆ ಶರಣಾಗುವ ಮುನ್ನ ಐಎಎಸ್ ಅಧಿಕಾರಿಯೊಬ್ಬರಿಗೆ ಅವರು ಮೊಬೈಲ್ ಮೂಲಕ ಮಾತನಾಡಿದ್ದಾರೆ. ರವಿ ಪತ್ನಿ ಹಾಗೂ ಅವರ ಮಾವ ಅನೇಕ ಬಾರಿ ಮೊಬೈಲ್‌ಗೆ ಕರೆ ಮಾಡಿದ್ದರೂ ಅವರು ಸ್ವೀಕರಿಸಿರಲಿಲ್ಲ. ಒಟ್ಟಾರೆ ಎಲ್ಲ ಸಾಕ್ಷಿಗಳು ಹಾಗೂ ವಿವಿಧ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಿ ಅವರ ಹೇಳಿಕೆ ಆಧಾರದಂತೆ ಡಿ.ಕೆ.ರವಿ ಸಾವು ಆತ್ಮಹತ್ಯೆಯಾಗಿದೆ. ಇದು ಕೊಲೆಯಲ್ಲ ಎಂಬ ಅಂತಿಮ ನಿರ್ಧಾರಕ್ಕೆ ಸಿಬಿಐ ಬಂದಿದೆ.

Write A Comment