ಬೆಂಗಳೂರು, ಸೆ.29- ಗೃಹಬಳಕೆ, ಪುರಸಭೆ, ಪಟ್ಟಣ ಪಂಚಾಯ್ತಿ, ಮಹಾನಗರ ಪಾಲಿಕೆ ಸೇರಿದಂತೆ ಎಲ್ಲೆಡೆ ಎಲ್ಇಡಿ ಬಲ್ಬ್ಗಳ ಬಳಕೆ ಕಡ್ಡಾಯಗೊಳಿಸಲು ನಿರ್ಧರಿಸಲಾಗಿದ್ದು, ಇದರಿಂದ 800 ಮೆಗಾವ್ಯಾಟ್ ವಿದ್ಯುತ್ ಉಳಿತಾಯವಾಗಲಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಎಲ್ಇಡಿ ಬಲ್ಬ್ಗಳ ಬಳಕೆ ಕಡ್ಡಾಯಗೊಳಿಸಲು ನಿರ್ಧಾರ ಮಾಡಲಾಗಿದ್ದು, ಇದರಿಂದ ಹೆಚ್ಚು ವಿದ್ಯುತ್ ಉಳಿತಾಯವಾಗಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ ಸಹಯೋಗವನ್ನು ಕೋರಲಾಗಿದೆ ಎಂದು ಮಾಹಿತಿ ನೀಡಿದರು. ದುಬಾರಿಯಾಗಿರುವ ಎಲ್ಇಡಿ ಬಲ್ಬ್ಗಳನ್ನು 100ರೂ.ಗೆ ದೊರಕಿಸಿಕೊಡಬೇಕು ಎಂಬ ಉದ್ದೇಶದಿಂದ ಅ.5ರಂದು ಎಲ್ಇಡಿ ಬಲ್ಬ್ ಉತ್ಪಾದಕರೊಂದಿಗೆ ಸಭೆ ನಡೆಸಲು ಉದ್ದೇಶಿಸಿದ್ದೇವೆ ಎಂದರು.
ಮುಂದಿನ ಸಂಪುಟ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ ಅವರು, 800 ಮೆಗಾವ್ಯಾಟ್ನಷ್ಟು ವಿದ್ಯುತ್ ಉಳಿತಾಯ ಮಾಡಲು ಇಂತಹ ಬದಲಾವಣೆಗೆ ಮುನ್ನಡಿಯಿಟ್ಟಿದ್ದೇವೆ ಎಂದು ಹೇಳಿದರು.
ಯಲಹಂಕ ಬಳಿ 1510ಕೋಟಿ ರೂ. ವೆಚ್ಚದಲ್ಲಿ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಭೂಮಿ ಪೂಜೆ ನೆರವೇರಿಸಲಾಗುತ್ತದೆ. ಇದರಲ್ಲಿ 350 ಮೆಗಾವ್ಯಾಟ್ ಉತ್ಪಾದಿಸುವ ಗುರಿ ಇದೆ. ಭಾರತೀಯ ಅನಿಲ ಪ್ರಾಧಿಕಾರಕ್ಕೆ ಇದಕ್ಕಾಗಿ 7ಕಿ.ಮೀ. ಪೈಪ್ಲೈನನ್ನು ವಿಸ್ತರಣೆಗೊಳಿಸಲು ಕೋರಿದ್ದೇವೆ ಎಂದು ತಿಳಿಸಿದರು. ವಿದ್ಯುತ್ ಸಮಸ್ಯೆ ಬಗೆಹರಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ಸಂಬಂಧ ಅ.1ರಂದು ಮಹತ್ವದ ಸಭೆ ನಡೆಸಲಿದ್ದೇವೆ. ಜನರು ತಾಳ್ಮೆ ಕಳೆದುಕೊಳ್ಳದಂತೆ ಸೂಕ್ತ ಕ್ರಮ ಕೈಗೊಳ್ಳುವುದರೊಂದಿಗೆ ವಿದ್ಯುತ್ ಖರೀದಿ ಹಾಗೂ ಉತ್ಪಾದನೆ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ವಿವರಿಸಿದರು. ಬಿಜೆಪಿ ವಾಸ್ತವಾಂಶ ಅರಿಯಬೇಕಿದೆ. ಕೇಂದ್ರ ವಿದ್ಯುತ್ ನೀಡುವಲ್ಲಿ ರಾಜಕೀಯ ಮಾಡುವುದರಲ್ಲಿ ಅರ್ಥವಿಲ್ಲ. ನಾವು 1500 ಮೆಗಾವ್ಯಾಟ್ ವಿದ್ಯುತ್ ಕೋರಿದ್ದೇವೆ ಎಂದ ಅವರು, 2238 ಮೆಗಾವ್ಯಾಟ್ ನೀಡಬೇಕಾಗಿರುವ ಕೇಂದ್ರ 1182 ಮೆಗಾವ್ಯಾಟ್ ಮಾತ್ರ ವಿದ್ಯುತ್ ನೀಡುತ್ತಿದೆ ಎಂದರು.
ಗ್ರಾಮೀಣ ಭಾಗದಲ್ಲಿ ವಿದ್ಯುತ್ ತೊಂದರೆ ನಿವಾರಿಸುವ ನಿಟ್ಟಿನಲ್ಲಿ ದಿನಬಿಟ್ಟು ದಿನ ಐದು ಗಂಟೆಗಳ ಕಾಲ ವಿದ್ಯುತ್ ನೀಡಲು ವಿದ್ಯುತ್ ಕಂಪೆನಿಗಳಿಗೆ ನಿರ್ದೇಶನ ನೀಡಿದ್ದೇವೆ. ವಿದ್ಯುತ್ ಸಮಸ್ಯೆ ಇದೇ ರೀತಿ ಮುಂದುವರೆದರೆ ಕುಡಿಯುವ ನೀರಿಗೂ ತೊಂದರೆಯಾಗಲಿದೆ. ನಾಳೆ ನಂತರದಲ್ಲಿ ವಿದ್ಯುತ್ ಖರೀದಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ರಾಜ್ಯಕ್ಕೆ 7500 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದ್ದು, 6152ಮೆಗಾವ್ಯಾಟ್ ವಿದ್ಯುತ್ ಮಾತ್ರ ಉತ್ಪಾದನೆಯಾಗುತ್ತದೆ. ಜಲಾಶಯಗಳಲ್ಲಿ ನೀರಿಲ್ಲದೆ, ಜಲವಿದ್ಯುತ್ ಉತ್ಪಾದನೆ ಕಷ್ಟವಾಗಿದೆ. 1063 ಮೆಗಾವ್ಯಾಟ್ ವಿದ್ಯುತ್ಅನ್ನು ಪ್ರತೀ ದಿನ ಖರೀದಿ ಮಾಡುತ್ತಿದ್ದೇವೆ. ಇರುವ ವಿದ್ಯುತ್ ಸಮಸ್ಯೆ ನೀಗಿಸಲು ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.