ಕರ್ನಾಟಕ

25 ಕೋಟಿ ರು.ವೆಚ್ಚದಲ್ಲಿ ಸಿಎಂ ಅಧಿಕೃತ ನಿವಾಸ ನಿರ್ಮಾಣ !

Pinterest LinkedIn Tumblr

sidda

ಬೆಂಗಳೂರು: ನಗರದ ಹೃದಯ ಭಾಗದಲ್ಲಿ ಮುಖ್ಯಮಂತ್ರಿಳಿಗೆ 6 ಕೊಣೆಯ, 4 ಸಾವಿರ ಚದರ ಅಡಿ ವಿಸ್ತೀರಣದ ಭವ್ಯ ಬಂಗಲೆಯನ್ನು ಸುಮಾರು 1 ಎಕರೆ ಜಾಗದಲ್ಲಿ ನಿರ್ಮಿಸಲಾಗಿದೆ. ಆದರೆ ಈಗ ಲೋಕೋಪಯೋಗಿ ಇಲಾಖೆ ಸುಮಾರು 25 ಕೋಟಿ ರುಪಾಯಿ ವೆಚ್ಚದಲ್ಲಿ ಹೊಸದಾಗಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ನಿರ್ಮಿಸಲು ಮುಂದಾಗಿದೆ.

ಮುಖ್ಯಮಂತ್ರಿಗಳಿಗೇ ಮೀಸಲಾದ ಅಧಿಕೃತ ನಿವಾಸ ಇಲ್ಲ ಎಂಬ ಕಾರಣಕ್ಕೆ ಪಿಡಬ್ಲ್ಯೂಡಿ ಈ ನಿರ್ಧಾರಕ್ಕೆ ಬಂದಿದೆ. ಅಲ್ಲದೆ ಈ ನೂತನ ಬಂಗ್ಲೆಗೆ ಹೊಂದಿಕೊಂಡಂತೆ ಮುಖ್ಯಮಂತ್ರಿಗಳ ಗೃಹ ಕಚೇರಿಯನ್ನು ನಿರ್ಮಿಸಲು ಮುಂದಾಗಿದೆ. ಈ ಹಿಂದೆ ಕೆಲವು ಮಾಜಿ ಮುಖ್ಯಮಂತ್ರಿಗಳು ತಮ್ಮ ಅಧಿಕೃತ ನಿವಾಸ ಮತ್ತು ಮನೆಯಿಂದಲೂ ಕಾರ್ಯನಿರ್ವಹಿಸಿದ್ದರು.

ಕೆಲವು ತಿಂಗಳುಗಳ ಹಿಂದೆ ಮುಖ್ಯ ಎಂಜಿನಿಯರ್ ಹಾಗೂ ಕಾರ್ಯದರ್ಶಿಯ ನೇತೃತ್ವದಲ್ಲಿ ನಡೆದ ಪಿಡಬ್ಲ್ಯೂಡಿ ಸಭೆಯಲ್ಲಿ ಸಿಎಂಗಾಗಿಯೇ ನೂತನ ಬಂಗಲೆ ನಿರ್ಮಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ಬಗ್ಗೆ ಇಂಡಿಯನ್ ಎಕ್ಸ್ಪ್ರೆಸ್ಗೆ ಪ್ರತಿಕ್ರಿಯಿಸಿರುವ ಇಲಾಖೆಯ ಕಾರ್ಯದರ್ಶಿ(ಕಳೆದ ವಾರ ವರ್ಗಾವಣೆಯಾಗಿದ್ದಾರೆ) ಚಿಕ್ಕರಾಯಪ್ಪ, ಉದ್ದೇಶಿತ ಸಿಎಂ ನಿವಾಸಕ್ಕೆ ಇನ್ನೂ ಸ್ಥಳ ಆಯ್ಕೆಯಾಗಿಲ್ಲ. ಆದರೆ ಮುಖ್ಯಮಂತ್ರಿಗಳ ನೂತನ ಅಧಿಕೃತ ನಿವಾಸ ನಿರ್ಮಾಣಕ್ಕೆ ಅನುಮತಿ ದೊರೆತಿದೆ ಎಂದಿದ್ದಾರೆ.

ಉದ್ದೇಶಿತ ಕಾಮಗಾರಿಗಾಗಿ ಮೊದಲ ಕಂತಿನಲ್ಲಿ 8.30 ಕೋಟಿ ರುಪಾಯಿ ಬಿಡುಗಡೆಯಾಗಲಿದ್ದು, ಸ್ಥಳ ಆಯ್ಕೆಯಾದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರು, ಉದ್ದೇಶಿತ ಕಾರ್ಲಟನ್ ಹೌಸ್ ನಿರ್ಮಾಣ ಪ್ರಸ್ತಾಪವನ್ನು ಕೈಬಿಡಲಾಗಿದೆ. ಆದರೆ ಪ್ರತಿಯೊಬ್ಬರು ಮುಖ್ಯಮಂತ್ರಿಗೆ ಅಧಿಕೃತ ನಿವಾಸದ ಅಗತ್ಯ ಇದೆ ಎನ್ನುತ್ತಿದ್ದಾರೆ ಎಂದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದ್ಯ ಕಾವೇರಿಯಲ್ಲಿ ವಾಸವಾಗಿದ್ದು, ಗೃಹ ಕಚೇರಿಯಾಗಿ ಕೃಷ್ಣವನ್ನು ಬಳಸುತ್ತಿದ್ದಾರೆ. ಕಾಲುದಾರಿ ಈ ಎರಡು ಕಟ್ಟಡಗಳಿಗೆ ಸಂಪರ್ಕ ಕಲ್ಪಿಸುತ್ತದೆ.

ರಾಜ್ಯದ 135 ತಾಲೂಕುಗಳು ಬರ ಪೀಡಿತ ಎಂದು ಸರ್ಕಾರ ಘೋಷಿಸಿದೆ. ಇಂತಹ ಸಂದರ್ಭದಲ್ಲಿ ಪಿಡಬ್ಲ್ಯೂಡಿ 25 ಕೋಟಿ ರುಪಾಯಿ ವೆಚ್ಚದಲ್ಲಿ ಮುಖ್ಯಮಂತ್ರಿಗಳಿಗೆ ಮನೆ ನಿರ್ಮಿಸಲು ಹೊರಟಿದ್ದು ಮಾತ್ರ ವಿಪರ್ಯಾಸವೇ ಸರಿ.

Write A Comment