ಕರ್ನಾಟಕ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಂಪನ್ನು ಹರಡಿದ ಬ್ಯಾಡಗಿ ಮೆಣಸು ದಾಖಲೆ ಮಾರಾಟ

Pinterest LinkedIn Tumblr

menasu-fi

– ವೀರೇಶ ಚೌಕೀಮಠ
ಬ್ಯಾಡಗಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆಂಪು ಮೆಣಸಿನಕಾಯಿಯ ಕಂಪನ್ನು ಹರಡಿದ ಬ್ಯಾಡಗಿ ಮಾರುಕಟ್ಟೆಯು ವಾರ್ಷಿಕ ಗುರಿ ಮೀರಿ ಗಮನಾರ್ಹ ದಾಖಲೆ ವಹಿವಾಟು ನಡೆಸಿದೆ. 12 ಬಾರಿ ಲಕ್ಷ ಚೀಲ ಆವಕದ ಮೂಲಕ ಮತ್ತೊಂದು ದಾಖಲೆಯ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ಕಳೆದ ವರ್ಷ 6.22 ಕೋಟಿ ರೂ.ಗಳಷ್ಟು ಮಾರುಕಟ್ಟೆಯ ಶುಲ್ಕವನ್ನು ಸಂಗ್ರಹಿಸುವ ಗುರಿ ಹೊಂದಿದ್ದರೂ, ಅಂತ್ಯದಲ್ಲಿ 6.51 ಕೋಟಿ ರೂ. ಶುಲ್ಕವನ್ನು ಸಂಗ್ರಹಿಸಿತ್ತು. ಪ್ರಸಕ್ತ ವರ್ಷ 7.22 ಕೋಟಿ ರೂ. ಶುಲ್ಕ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿತ್ತು. ಆದರೆ, 9.31 ಕೋಟಿ ರೂ. ಶುಲ್ಕ ಸಂಗ್ರಹಿಸಿ ದಾಖಲೆ ನಿರ್ವಿುಸಿದೆ. ಅಲ್ಲದೆ, ಕಳೆದ ಏಪ್ರಿಲ್ ತಿಂಗಳಲ್ಲಿ 1 ಕೋಟಿ ರೂ. ಶುಲ್ಕ ಸಂಗ್ರಹಿಸಿರುವುದು ಗಮನಾರ್ಹ. ಈ ಹಿಂದೆ 300 ರಿಂದ 400 ಕೋಟಿ ರೂ. ವಹಿವಾಟು ನಡೆಸುತ್ತಿದ್ದ ಮಾರುಕಟ್ಟೆ, 2014-15ರಲ್ಲಿ 600 ಕೋಟಿ ರೂ.ಗಳಿಗೂ ಅಧಿಕ ವಹಿವಾಟು ನಡೆಸಿದೆ.

ಬಿತ್ತನೆ ಕ್ಷೇತ್ರ ಹೆಚ್ಚಳ: ಮಳೆಯಾಶ್ರಿತ ಪ್ರದೇಶಗಳಾದ ಗದಗ, ಕುಂದಗೋಳ, ಅಣ್ಣಗೇರಿ, ಧಾರವಾಡ-ಹುಬ್ಬಳ್ಳಿ ಮುಂತಾದ ಪ್ರದೇಶದಲ್ಲಿ 1 ಲಕ್ಷ ಹೆಕ್ಟೇರ್​ಗೂ ಹೆಚ್ಚು ಬೆಳೆಯಲಾಗುತ್ತಿದೆ. ಆದರೆ, ಕಳೆದ ಎರಡ್ಮೂರು ವರ್ಷಗಳಿಂದಲೂ ಅತಿವೃಷ್ಟಿ, ಅನಾವೃಷ್ಟಿಗೆ ಸಿಲುಕಿ ಶೇ.10 ರಷ್ಟು ಮಾತ್ರ ಮೆಣಸಿನಕಾಯಿ ಬೆಳೆಯಲಾಗಿದೆ. ಆ ಸ್ಥಾನವನ್ನು ನೀರಾವರಿ ಪ್ರದೇಶಗಳಾದ ಬಳ್ಳಾರಿ, ರಾಯಚೂರು ಹಾಗೂ ಆಂಧ್ರ ಪ್ರದೇಶದ ಕರ್ನಲ ಸೇರಿದಂತೆ ಇತರೆ ಪ್ರದೇಶಗಳು ಭರಿಸಿವೆ. ಹೀಗಾಗಿ ಮಾರುಕಟ್ಟೆಗೆ ಹಿಂದಿನ ವರ್ಷಕ್ಕಿಂತಲೂ ಈ ವರ್ಷ ಹೆಚ್ಚು ಮೆಣಸಿನಕಾಯಿ ಬಂದಿದೆ.

ಹೆಚ್ಚಿದ ಬೇಡಿಕೆ: ಎರಡ್ಮೂರು ವರ್ಷಗಳ ಹಿಂದೆ ಓಲಿಯೋರೆಸಿನ್ ಉದ್ಯಮಗಳು ಚೀನಾ ದೇಶದ ಮೆಣಸಿನಕಾಯಿಯತ್ತ ಮುಖ ಮಾಡಿದ್ದವು. ಆದರೆ, ಪ್ರಸಕ್ತ ವರ್ಷ ಚೀನಾದಲ್ಲಿ ಹೆಚ್ಚು ಮಳೆಯಿಂದ ಉತ್ಪಾದನೆ ಕುಸಿದಿದೆ. ಹೀಗಾಗಿ ಓಲಿಯೋರೆಸಿನ್ ಉದ್ಯಮಗಳಿಂದ ಇಲ್ಲಿನ ಮೆಣಸಿಕಾಯಿಗೆ ಬೇಡಿಕೆ ಹೆಚ್ಚಿದೆ. ಮಸಾಲಾ ಉದ್ಯಮದಲ್ಲಿ ಬ್ಯಾಡಗಿ ಮೆಣಸಿನಕಾಯಿ ಸಾಕಷ್ಟು ಬಳಕೆಯಾಗುತ್ತಿರುವುದರಿಂದ ಡಿಮ್ಯಾಂಡ್ ಹೆಚ್ಚಾಗಿದೆ.

****

ಗ್ರೇಡ್ ಸಿಸ್ಟಮ್ ಅಳವಡಿಸಲು ಚಿಂತನೆ

ರೈತರು ಮಾರುಕಟ್ಟೆಗೆ ಮೆಣಸಿನಕಾಯಿಯನ್ನು ತರುವಾಗ ಸಾಕಷ್ಟು ನೀರು ಸಿಂಪಡಿಸಿರುತ್ತಾರೆ. ಹೀಗಾಗಿ ಮೆಣಸಿನಕಾಯಿ ಖರೀದಿಸಿದ ನಂತರ ಆ ಮೆಣಸಿನಕಾಯಿಯನ್ನು ಒಣಗಿಸಿ ಮತ್ತೆ ಚೀಲಕ್ಕೆ ತುಂಬಿ ಸಂಗ್ರಹಿಸಿಡಬೇಕಾಗುತ್ತದೆ. ಕೆಲವೊಮ್ಮೆ ಲಕ್ಷಕ್ಕೂ ಹೆಚ್ಚು ಚೀಲ ಮೆಣಸಿನಕಾಯಿ ಆವಕವಾದಾಗ ಆ ಎಲ್ಲ ಮೆಣಸಿನಕಾಯಿ ಚೀಲಗಳನ್ನು ಒಣಗಿಸಲು ವರ್ತಕರು ಹರಸಾಹಸ ಪಡಬೇಕಾಗಿದೆ. ಆದರೆ ಗುಂಟೂರ ಮಾರುಕಟ್ಟೆಯಲ್ಲಿ ನೀರು ಸಿಂಪಡಿಸದಿರುವ ಮೆಣಸಿನಕಾಯಿಗೆ ಮಾತ್ರ ಟೆಂಡರ್ ಹಾಕಲಾಗುತ್ತಿದೆ. ಅಲ್ಲಿನ ವರ್ತಕರು ಒಣಗಿಸುವ ತಾಪತ್ರಯದಿಂದ ಮುಕ್ತರಾಗಿದ್ದಾರೆ. ಈ ಕಾರಣದಿಂದ ಆಂಧ್ರಪ್ರದೇಶದ ಗುಂಟೂರ ಮಾರುಕಟ್ಟೆಯಲ್ಲಿರುವ ಗ್ರೇಡ್ ಸಿಸ್ಟಮ್ ಅನ್ನು ಈ ಮಾರುಕಟ್ಟೆಯಲ್ಲಿಯೂ ಅಳವಡಿಸಲು ಸಂಘದ ಪದಾಧಿಕಾರಿಗಳೊಂದಿಗೆ ಚಿಂತನೆ ನಡೆದಿರುವುದಾಗಿ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ್ರ ಪಾಟೀಲ ತಿಳಿಸಿದರು.

****

ಪ್ರಸಕ್ತ ವರ್ಷ ಮೆಣಸಿನಕಾಯಿಗೆ ಉತ್ತಮ ಬೆಲೆ ದೊರೆತಿದೆ. ಈ ಹಿಂದೆ ಹತ್ತಿ ಬೆಳೆಯತ್ತ ಮುಖ ಮಾಡಿದ್ದ ರೈತರು ಮುಂಬರುವ ದಿನಗಳಲ್ಲಿ ಮೆಣಸಿನಕಾಯಿ ಉತ್ಪಾದನೆಗೆ ಹೆಚ್ಚು ಒತ್ತು ನೀಡಲಿದ್ದು, ಮೆಣಸಿನಕಾಯಿ ಬಿತ್ತನೆ ಕ್ಷೇತ್ರ ಹೆಚ್ಚಾಗಲಿದೆ.

| ರಾಜು ಮೋರಗೇರಿ

ಮೆಣಸಿನಕಾಯಿ ವರ್ತಕರ ಸಂಘದ ಕಾರ್ಯದರ್ಶಿ

Write A Comment