ಕರ್ನಾಟಕ

ಸ್ಥಳ ಆಯ್ಕೆ ರಾಜಕಾರಣದಿಂದ ರಾಜ್ಯದ ಮೊದಲ ಐಐಟಿ ಕೈ ತಪ್ಪಬಹುದು: ತಜ್ಞರ ಆತಂಕ

Pinterest LinkedIn Tumblr

iit-23ಬೆಂಗಳೂರು: ರಾಜ್ಯದ ಮೊದಲ ಐಐಟಿಯನ್ನು ಎಲ್ಲಿ ಸ್ಥಾಪಿಸಬೇಕು ಎಂಬ ವಿಚಾರ ಇದೀಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಇದರಿಂದ ಐಐಟಿ ಸ್ಥಾಪನೆ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ರಾಜಕೀಯ ಕಾರಣಗಳಿಂದ ಕರ್ನಾಟಕ ತನ್ನ ಮೊದಲ ಐಐಟಿಯನ್ನು ಮತ್ತೊಮ್ಮೆ ಕಳೆದುಕೊಳ್ಳಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

’18 ವರ್ಷಗಳ ಹಿಂದೆ ಇದೇ ರೀತಿ ಸ್ಥಳ ಆಯ್ಕೆ ವಿಚಾರದಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ರಾಜ್ಯ ಐಐಟಿಯನ್ನು ಕಳೆದುಕೊಂಡಿತ್ತು’ ಎಂದು 1998ರಲ್ಲಿ ಐಐಟಿ ಸ್ಥಾಪನೆ ಸಂಬಂಧ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ರಚಿಸಿದ್ದ ಸಮಿತಿಯ ಮುಖ್ಯಸ್ಥರಾಗಿದ್ದ ಪ್ರೊ.ಯು.ಆರ್.ರಾವ್ ಅವರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಧಾರವಾಡದ ಬದಲು ರಾಯಚೂರಿನಲ್ಲಿ ಆರಂಭಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವುದನ್ನು ಖಂಡಿಸಿ ಪ್ರತಿಪಕ್ಷ ಬಿಜೆಪಿ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಇಂದು ಹುಬ್ಬಳ್ಳಿ-ಧಾರವಾಡ ಬಂದ್‌ಗೆ ಕರೆ ನೀಡಿವೆ.

ಐಐಟಿ ಸ್ಥಾಪನೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಸ್ಥಳ ಆಯ್ಕೆ ವಿಚಾರದಲ್ಲಿನ ರಾಜಕೀಯದಿಂದಾಗಿ ರಾಜ್ಯ ಐಐಟಿಯನ್ನು ಕಳೆದುಕೊಳ್ಳಬಹುದು ಅಥವಾ ಐಐಟಿ ಸ್ಥಾಪನೆ ಮತ್ತಷ್ಟು ವಿಳಂಬಕ್ಕೆ ಕಾರಣವಾಗಬಹುದು ಎಂದು ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿ ಎಂ.ಆರ್.ದೊರೆಸ್ವಾಮಿ ಅವರು ಹೇಳಿದ್ದಾರೆ. ಅಲ್ಲದೆ ಈ ಹಿಂದಿನಂತೆ ಮತ್ತೆ ನಾವು ಈ ಅವಕಾಶವನ್ನು ಕಳೆದುಕೊಳ್ಳಬಾರದು ಎಂದಿದ್ದಾರೆ.

ಎಚ್.ಡಿ.ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ ರಾಜ್ಯಕ್ಕೆ ಐಐಟಿಯನ್ನು ಘೋಷಿಸಲಾಗಿತ್ತು. ಆದರೆ ಸ್ಥಳ ಆಯ್ಕೆ ವಿಚಾರದಲ್ಲಿನ ಗೊಂದಲದಿಂದಾಗಿ ಕರ್ನಾಟಕದಲ್ಲಿ ಐಐಟಿ ಸ್ಥಾಪನೆ ಆಗಲೇ ಇಲ್ಲ. ಹಾಸನದ ರಾಜಕೀಯ ನಾಯಕರು ನಮ್ಮ ಜಿಲ್ಲೆಯಲ್ಲಿ ಸ್ಥಾಪನೆಯಾಗಬೇಕು ಎಂದು ಪಟ್ಟು ಹಿಡಿದರೆ, ಉತ್ತರ ಕರ್ನಾಟಕದ ನಾಯಕರು ನಮ್ಮ ಜಿಲ್ಲೆಯಲ್ಲಿ ಆಗಬೇಕು ಎಂದು ಪಟ್ಟು ಹಿಡಿದಿದ್ದರು.

Write A Comment